ಸೌಹಾರ್ಧತೆ ಕದಡುವ ಕೆಲಸವನ್ನು ನಿಲ್ಲಿಸಿರಿ-ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಾಸು ಪಡೆಯಿರಿ

ದಿನಾಂಕ: 19-02-2022

ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ

ಜನದೇಶವಿಲ್ಲದೇ ಬಲವಂತವಾಗಿ ಅಧಿಕಾರ ಮುನ್ನಡೆಸುತ್ತಿರುವ ರಾಜ್ಯ ಸರ್ಕಾರ, ರಾಜ್ಯದ ಸೌಹಾರ್ಧತೆಗೆ ಭಂಗ ತರುವ ಕೆಲಸವನ್ನು ನಿಲ್ಲಿಸಬೇಕು ಮತ್ತು ಈ ಕೂಡಲೇ, ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ, ರೈತರು ಹಾಗೂ ಕಾರ್ಮಿಕರ ವಿರೋಧಿಯಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020, ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಜಾನುವಾರು ಹತ್ಯ ನಿಷೇಧ ತಿದ್ದುಪಡಿ ಕಾಯ್ದೆ-2020 ಇವುಗಳನ್ನು ವಾಪಾಸು ಪಡೆಯಬೇಕು ಹಾಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ಜಾರಿ ಮತ್ತು ದಲಿತರು, ಮಹಿಳೆಯರು ಹಾಗೂ ಬಡವರ ವಿರೋಧಿಯಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗಳನ್ನು ಕೂಡಲೇ ನಿಲ್ಲಿಸಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.

ಈ ಕುರಿತು ಅಗತ್ಯ ಕ್ರಮವಹಿಸದೇ, ಕೋಮುವಾದಿ ಶಕ್ತಿಗಳ ಜೊತೆ ಕೈ ಜೋಡಿಸುವ ಮೂಲಕ ರಾಜ್ಯದ ಹೋರಾಟ ನಿರತ ಜನತೆಯ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರವನ್ನು ಕರ್ನಾಟಕ ರಾಜ್ಯ ಸರಕಾರ ಅನುಸರಿಸುತ್ತಿರುವುದು ತೀವ್ರ ಖಂಡನೀಯವಾಗಿದೆ. ಸಂವಿಧಾನ ಹಾಗೂ ದಲಿತರು, ಅಲ್ಪ ಸಂಖ್ಯಾತರ ಮತ್ತು ಹೈನುಗಾರರ ವಿರೋಧಿಯಾದ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಹಾಗೂ ಎಲ್ಲ ಶೂದ್ರ ಹಾಗೂ ದಲಿತರು ಮತ್ತು ಮಹಿಳಾ ಸಮುದಾಯದ ವಿರೋದಿಯಾದ ಮತಾಂತರ ನಿಷೇಧ ಮತ್ತು ಜಾತಿ ವ್ಯವಸ್ಥೆಯನ್ನು ಬಲಪಡಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ‍್ಯ ಸಂರಕ್ಷಣೆಯಂತಹ ಕರಾಳ ಕಾಯ್ದೆಗಳ ರಚನೆಯ ಮೂಲಕ ಹಿಂದುತ್ವ ಕೋಮುವಾದಿ ಶಕ್ತಿಗಳ ಬೆಳವಣಿಗೆಗೆ ಸಹಕರಿಸುವ ಹಾಗೂ ರಾಜ್ಯದ ಸೌಹಾರ್ಧವನ್ನು ಕದಡುವ ಕೆಲಸದಲ್ಲಿ ತೊಡಗಿದೆ.

ರಾಜ್ಯದಲ್ಲಿ ಮತೀಯ ದ್ವೇಷ ಹೆಚ್ಚಿಸಿ ಜನತೆಯ ಗಮನವನ್ನು ಬೇರೆಡೆ ಸೆಳೆದು, ಮರೆ ಮೋಸದ ಮೂಲಕ ಕರ್ನಾಟಕದ ಎಲ್ಲ ಸಂಪನ್ಮೂಲಗಳ ಕಾರ್ಪೊರೇಟ್ ಲೂಟಿಗೆ ತೆರೆಯುವ ಇಂತಹ ಕುತಂತ್ರಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ ಮತ್ತು ರಾಜ್ಯದ ಜನತೆ ಐಕ್ಯತೆಯಿಂದ ಇಂತಹ ಕುತಂತ್ರವನ್ನು ಮತ್ತು ಕಾರ್ಪೊರೇಟ್ ಕಂಪನಿಗಳ ಲೂಟಿಕೋರ ನೀತಿಗಳನ್ನು ಸೋಲಿಸಬೇಕೆಂದು ರಾಜ್ಯದಲ್ಲಿ ಸೌಹಾರ್ಧತೆಯನ್ನು ಬಲಗೊಳಿಸಬೇಕೆಂದು ಸಿಪಿಐ(ಎಂ) ಕರೆ ನೀಡುತ್ತದೆ.

ದೇಶದಾದ್ಯಂತ ಬೆಳೆದು ಬಂದ ರೈತ – ಕಾರ್ಮಿಕರ ಐತಿಹಾಸಿಕ ಹಾಗೂ ಜಾಗತಿಕ ಗಮನ ಸೆಳೆದ ಬೃಹತ್ ಪ್ರತಿಭಟನೆಗೆ ಮಣಿದು ಪ್ರಧಾನ ಮಂತ್ರಿಗಳೇ ಜಗತ್ತಿನ ಮುಂದೆ ಮಂಡಿಯೂರಿ, ಕೈ ಮುಗಿದು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆದಿರುವಾಗ, ಶ್ರೀ ಬಸವರಾಜ ಬೊಮ್ಮಾಯಿಯವರ ಸರಕಾರ ಭಾವನಾತ್ಮಕ ವಿಷಯಗಳನ್ನು ಮುಂದೆ ಮಾಡಿ ಜನರ ದಾರಿ ತಪ್ಪಿಸಿ, ಲೂಟಿಕೋರ ಕಾಯ್ದೆಗಳನ್ನು ಉಳಿಸಿಕೊಳ್ಳಬಹುದೆಂದು ಭಾವಿಸಿದ್ದರೆ, ಅದಕ್ಕೆ ರಾಜ್ಯದ ಜನತೆ ಸರಿಯಾದ ಪಾಠ ಕಲಿಸಲಿದ್ದಾರೆಂದು ಸಿಪಿಐ(ಎಂ) ಎಚ್ಚರಿಸಿದೆ.

ಇಂತಹ ಲೂಟಿ ಕೋರ ನೀತಿಗಳನ್ನು ಮುನ್ನಡೆಸುವ ಮತ್ತು ತನ್ನ ಜನ ವಿರೋಧಿ ನೀತಿಗಳನ್ನು ಮುಚ್ಚಿಕೊಳ್ಳುವ ದುಷ್ಠ ಕಾರಣದಿಂದ ಸೌಹಾರ್ಧತೆಯನ್ನು ಕದಡುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದವನ್ನು ಬೆಳೆಯಲು ಬಿಡಲಾಯಿತು ಎಂಬುದನ್ನು ರಾಜ್ಯದ ಜನತೆ ಗಮನಿಸಬೇಕು. ಇದರಿಂದ ರಾಜ್ಯದ ಜನತೆಯಲ್ಲಿ ಆತಂಕ ಉಂಟಾಗಿ ವಿದ್ಯಾರ್ಥಿನೀಯರು ವಿದ್ಯಾಭ್ಯಾಸದಿಂದ ವಂಚನೆಗೊಳಗಾಗಬೇಕಾದ ದುಸ್ಥಿತಿ ಉಂಟಾಗಿದೆ.

ಕಾಂತರಾಜು ಆಯೋಗದ ಅಂಕಿ ಅಂಶ ಬಳಸಿ – ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ

ನಿಖರ ಅಂಕಿ ಅಂಶಗಳೊಂದಿಗೆ ತ್ರೀಸ್ಥರದ ಪರಿಶೀಲನೆ ಬಳಿಕವೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕೆಂಬ ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುವುದು ಅಥವಾ ನಿಖರ ಅಂಕಿ ಅಂಶಗಳು ಇಲ್ಲವೆಂದು ಆ ಸ್ಥಾನಗಳನ್ನು ಸಾಮಾನ್ಯ ಸ್ಥಾನಗಳೆಂದು ಘೋಷಿಸಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡೆಗಣಿಸಿ ಚುನಾವಣೆಗಳನ್ನು ನಡೆಸುವುದು. ಈ ಎರಡೂ ಕೂಡಾ ತಪ್ಪಾದ ಕ್ರಮಗಳಾಗುತ್ತವೆಂದು ಸಿಪಿಐ(ಎಂ) ಭಾವಿಸುತ್ತದೆ. ಈಗಾಗಲೇ ಶ್ರೀ ಸಿದ್ಧರಾಮಯ್ಯನವರ ನೇತೃತ್ವದ ಹಿಂದಿನ ಸರಕಾರ ಶ್ರೀ ಕಾಂತರಾಜು ನೇತೃತ್ವದ ಆಯೋಗದ ವರದಿಯನ್ನು ಅಂತಿಮಗೊಳಿಸುವ ಮೂಲಕ ಹಿಂದುಳಿದ ಜನ ಸಮುದಾಯಗಳ ಅಂಕಿ ಅಂಶಗಳನ್ನು ಗಣತಿ ಮೂಲಕ ಗುರುತಿಸಿರುವುದರಿಂದ ಅದನ್ನು ಬಳಸಿಕೊಂಡು ಸಮಯಕ್ಕೆ ಸರಿಯಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಅಗತ್ಯ ಕ್ರಮವಹಿಸಬೇಕೆಂದು ರಾಜ್ಯ ಸರಕಾರವನ್ನು ಮತ್ತು ಚುನಾವಣಾ ಅಯೋಗವನ್ನು ಸಿಪಿಐ(ಎಂ) ಒತ್ತಾಯಿಸುತ್ತದೆ.

ಕಳಪೆ ಫ್ಲೈಓವರ್ ನಿರ್ಮಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಹಾಗೂ ಸಂಬಂದಿತ ಎಲ್ಲರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಿರಿ

ಸುಮಾರು 750 ಕೋಟಿ ರೂ.ಗಳ ಸಾರ್ವಜನಿಕ ವೆಚ್ಚದಲ್ಲಿ ನಿರ್ಮಿಸಲಾದ ಗುರಗುಂಟಾ ಪಾಳ್ಯದಿಂದ ತುಮುಕೂರು ರಸ್ತೆಗೆ ಸಂಪರ್ಕ ಉಂಟು ಮಾಡುವ ಫ್ಲೈ ಒವರ್ ಸೇತುವೆಯು ಕಳಪೆ ಕಾಮಗಾರಿ ಕೆಲಸದಿಂದಾಗಿ ಕಳೆದೆರಡು – ಮೂರು ತಿಂಗಳಿಂದ  ನಿರುಪಯುಕ್ತವಾಗಿದ್ದು ಈಗ ಮರು ನಿರ್ಮಾಣವಾಗದೇ ಅದನ್ನು ಬಳಸದಂತಹ ದುಸ್ಥಿತಿ ಉಂಟಾಗಿದೆ. ಇದರಿಂದಾಗಿ ಈಗ ಮತ್ತು ಮುಂದೆ ಮರು ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪ್ರಯಾಣಿಕರು, ವಾಹನ ಚಾಲಕರು ಯಮ ಹಿಂಸೆ ಅನುಭವಿಸುವಂತಾಗಿದೆ.

ಕಳಪೆ ಕಾಮಗಾರಿಯೊಂದಿಗೆ ನಿರ್ವಹಣೆ ಲೋಪಗಳಿಂದ ಸೇತುವೆಯ ಮುಖ್ಯ ಭಾರ ಹೊರುವ ಪಿಲ್ಲರಗಳು ಹಾಗು ರಸ್ತೆಯ ನಡುವಿನ ಸ್ಪ್ರಿಂಗ್ ಗಳು ಹಾಗು ತಂತಿಗಳು ಹಾಳಾಗಿವೆ, ಕಾಂಕ್ರೀಟ್ ಮಿಶ್ರಣ ಗುಣಮಟ್ಟದಲ್ಲಿನ ರಾಜಿಗಳು ಇಂತಹ ದುಸ್ಥಿತಿಗೆ ಕಾರಣವಾಗಿವೆ ಎನ್ನಲಾಗಿದೆ. ಟೋಲ್ ಸಂಗ್ರಹಿಸುವುದು ಮತ್ತು ವಾಹನ ಸವಾರರನ್ನು ದೋಚುವ ಕೆಲಸಕ್ಕೆ ಮಾತ್ರ ಆದ್ಯತೆ ನೀಡಿರುವ ಕೇಂದ್ರದ ಬಿಜೆಪಿ ಸರ್ಕಾರದ ರಸ್ತೆ ಸಾರಿಗೆ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಕುರಿತು ನಿಗದಿತ ಮೌಲ್ಯಮಾಪನ ನಡೆಸದೆ ನಿರ್ಲಕ್ಷ್ಯ ಮಾಡಿರುವುದು ಇದಕ್ಕೆ ನೇರ ಕಾರಣವಾಗಿದೆ. ಟೋಲ್ ಸಂಗ್ರಹ ಮತ್ತು ನಿರ್ವಹಣೆ ಗುತ್ತಿಗೆದಾರರನ್ನು ಸಹಾ ಕಪ್ಪು ಪಟ್ಟಿಗೆ ಸೇರಿಸಿ ಅವರಿಂದ ಸಹಾ ಇದುವರೆಗೆ ಸಂಗ್ರಹವಾದ ಟೋಲ್ ಹಾಗು ವೆಚ್ಚ ಮಾಡಲಾದ ನಿರ್ವಹಣ ವೆಚ್ಚವನ್ನು ವಸೂಲಿ ಮಾಡಬೇಕು ಎಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

ರಾಜ್ಯದ ಬಹುತೇಕ ಜಿಲ್ಲೆಗಳಿಗೆ ರಾಜ್ಯ ರಾಜಧಾನಿಯ ಸಂಪರ್ಕವಾಗಿದ್ದ ಮೇಲ್ ಸೇತುವೆಯನ್ನು ಕೆಡವಿ ನಿರ್ಮಿಸಲು ಕನಿಷ್ಠ 2 ವರ್ಷವಾದರು ಬೇಕಿರುವ ಕಾರಣ, ಮೆಟ್ರೊ ಸೇವೆಗಳನ್ನು ಹೆಚ್ಚಿಸಬೇಕು, ನಾಗಸಂದ್ರ ನಿಲ್ದಾಣದ ಬಳಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸ್ಥಾಪಿಸುವ ಕಾರ್ಯವನ್ನು ತುರ್ತಾಗಿ ಮಾಡಬೇಕು, ತುಮಕೂರಿನಿಂದ ಪ್ರತಿ ಅರ್ಧ ಗಂಟೆಗೆ ಒಂದು ರೈಲಿನ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯಿಸಬೇಕು. ತುಮಕೂರಿನ ಮೂಲಕ ಹಾದು ಬರುವ ಬಸ್‌ಗಳು ಅಲ್ಲಿನ ರೈಲ್ವೆ ನಿಲ್ದಾಣಕ್ಕೆ ತಲುಪಿ ಬರುವಂತೆ ಕ್ರಮವಹಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಸದರಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನ ಲೈಸನ್ಸನ್ನು ತಕ್ಷಣವೇ ರದ್ದು ಪಡಿಸಬೇಕು ಮತ್ತು ಆತನ ಹಾಗೂ ಅದರ ಗುಣಮಟ್ಟ ಸಕ್ರಮವಾಗಿ ಪರಿಶೀಲಿಸದ ಎಲ್ಲಾ ಪ್ರಮುಖ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಬೇಕು ಮತ್ತು ಸಂಬಂದಿತ ಈ ಎಲ್ಲರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

ಗಂಗಾ ಕಲ್ಯಾಣ ಯೋಜನೆಯ ಸದನ ಸಮಿತಿ ವರದಿಯನ್ನು ಕೂಡಲೇ ಸದನದಲ್ಲಿ ಮಂಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಕ್ರಮ ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸಲು ಅಗತ್ಯ ನಿಯಮಗಳನ್ನು ರೂಪಿಸಲು ಸಿಪಿಐ(ಎಂ) ಆಗ್ರಹ

ಪರಿಶಿಷ್ಟ ಜಾತಿ, ಪಂಗಡ ಹಾಗು ಹಿಂದುಳಿದ ವರ್ಗಗಳ ಸಣ್ಣ, ಅತಿ ಸಣ್ಣ ರೈತರಿಗೆ ಕೊಳವೆ ಬಾವಿಗಳ ಮೂಲಕ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆಯೇ ಗಂಗಾ ಕಲ್ಯಾಣ ಯೋಜನೆಯಾಗಿದೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಕೊಳವೆ ಬಾವಿಯನ್ನು ಹಾಕಿ ನೀರಾವರಿ ಮಾಡಿಕೊಂಡು ಕೃಷಿ ನಡೆಸಲು ಬಡ ಪರಿಶಿಷ್ಟ ಜಾತಿ, ಪಂಗಡ ಹಾಗು ಹಿಂದುಳಿದ ಜಾತಿಗಳ ಸಣ್ಣ, ಅತಿ ಸಣ್ಣ ರೈತರಿಗೆ ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಪ್ರತಿ ಫಲಾನುಭವಿಗೆ 4.5 ಲಕ್ಷ ರೂ. ಹಣಕಾಸಿನ ನೆರವಿನೊಂದಿಗೆ ಗಂಗಾ ಕಲ್ಯಾಣ ಯೋಜನೆಯನ್ನು ಹಲವು ವರ್ಷಗಳಿಂದ ರಾಜ್ಯ ಸರ್ಕಾರಗಳು ಜಾರಿ ಮಾಡುತ್ತಿವೆ.

ಬಡವರಿಗಾಗಿ ಜಾರಿಯಾಗುತ್ತಿರುವ ಈ ಯೋಜನೆಯಲ್ಲಿ ಹಲವು ವರ್ಷಗಳಿಂದ ಭಷ್ಟಾಚಾರ ನಡೆದು ಬಂದಿದೆ. ಆದರೆ ಇತ್ತೀಚಿಗೆ ಉನ್ನತ ಮಟ್ಟದಲ್ಲಿಯೇ ಫಲಾನುಭವಿಗಳ ಆಯ್ಕೆ ಗುತ್ತಿಗೆದಾರರ ಆಯ್ಕೆ, ಸಾಮಾಗ್ರಿಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುವ ಚರ್ಚೆ ಮಾಹಿತಿಗಳು ಲಭ್ಯವಾಗುತ್ತಿವೆ. ಈ ಆರೋಪಗಳ ಹಿನ್ನೆಲೆಯಲ್ಲಿ ಸದನ ಸಮಿತಿಯನ್ನು ರಚಿಸಲಾಗಿದೆ. ಈ ಸದನ ಸಮಿತಿಯು ಭ್ರಷ್ಟಾಚಾರದ ಆರೋಪಗಳ ತನಿಖೆ ನಡೆಸಿ ಸದನದಲ್ಲಿ ವರದಿಯನ್ನು ಮಂಡಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡುವ ಬದಲಿಗೆ, ಅನಗತ್ಯ ಕಾಲಾಹರಣ ಮಾಡುತ್ತಿದೆ. ಮಾತ್ರವಲ್ಲ, ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದೆ ಎಂಬ ಗುಮಾನಿಗಳು ಕೇಳಿ ಬರುತ್ತಿವೆ.

ಈ ಹಿನ್ನೆಲೆಯಲ್ಲಿ ಶ್ರೀ ವೈ.ಎ. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸದನ ಸಮಿತಿಯು ಕೂಡಲೇ ತನಿಖೆಯನ್ನು ಪೂರ್ಣಗೊಳಿಸಿ, ಸದನದಲ್ಲಿ ವರದಿಯನ್ನು ಮಂಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು ಮತ್ತು ಈ ವರದಿಯ ಆಧಾರದಲ್ಲಿ ಗಂಗಾ ಕಲ್ಯಾಣ ಯೋಜನೆಯು ಜಾರಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ಭ್ರಷ್ಟಾಚಾರವನ್ನು ನಿಗ್ರಹಿಸುವ ರೀತಿಯಲ್ಲಿ ಪಾರದರ್ಶಕ ನಿಯಮಗಳನ್ನು ರೂಪಿಸಬೇಕೆಂದು ಭಾರತ ಕಮ್ಯೂನಿಷ್ಟ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ.

ವಂದೆನಗಳೊಂದಿಗೆ

ಯು. ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ
ಜಿ.ಸಿ. ಬಯ್ಯಾರೆಡ್ಡಿ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು
ಗೋಪಾಲಕೃಷ್ಣ ಅರಳಹಳ್ಳಿ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು

Leave a Reply

Your email address will not be published. Required fields are marked *