ಚುನಾವಣಾ ಸುಧಾರಣೆಗಳ ಚರ್ಚೆ: ಅಪರಾಧಿಗಳ ಆತ್ಮ ನಿವೇದನೆ ಆಗದಿರಲಿ

ಚುನಾವಣಾ ಸುಧಾರಣೆಗಳ ಕುರಿತು ಕರ್ನಾಟಕ ವಿಧಾನಸಭೆಯಲ್ಲಿ ಮತ್ತೊಂದು ಸುತ್ತಿನ ಚರ್ಚೆಗಳಾಗುತ್ತಿವೆ. ಚುನಾವಣೆಗಳ ವಿವಿಧ ಹಂತಗಳ ಒಟ್ಟು ಪ್ರಕ್ರಿಯೆಗಳನ್ನು ಅದರ ವಿಧಾನ ಮತ್ತು ವಿದ್ಯಾಮಾನಗಳನ್ನು ಗಮನಿಸಿದ ಯಾರಿಗಾದರೂ ಬೇಸರ, ಹೇಸಿಗೆ ಹುಟ್ಟಿಸದೇ ಇರುವುದಿಲ್ಲ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆ ತನ್ನ ಸರಕಾರವನ್ನು ಆಯ್ಕೆ ಮಾಡಿಕೊಳ್ಳುವ ಪ್ರಜಾಸತ್ತಾತ್ಮಕ ಪ್ರಕ್ರಿಯೆ  ವಿಕೃತಗೊಳ್ಳುವುದು ಆತಂಕದ ವಿಚಾರವೂ ಆಗಿದೆ. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳ ಪ್ರಚಾರ ಒಂದು ವಿಧಾನವಾದರೆ ಮತದಾರರ ಮನವೊಲಿಕೆಗೆ ಬಳಸುವ ತಂತ್ರಗಳು ಅಧಿಕಾರ ಹಿಡಿಯಲು ಬಹುಮತ ಪಡೆಯಲು ನಡೆಸುವ ಅಪ್ರಜಾಸತ್ತಾತ್ಮಕ ವಿಧಾನಗಳು ಮತ್ತೊಂದು ಬಗೆಯವು. ಬಹುತೇಕ ಎಲ್ಲಾ ಬಲಪಂಥೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದಲೂ ಹಿಡಿದು ಚುನಾವಣಾ ಹೋರಾಟ, ಮುಖ್ಯವಾಗಿ ಗೆಲುವು ಸಾಧಿಸಲು ಹಣ ಬಲ, ಸಾಮಾಜಿಕ ಸ್ಥಾನ, ಜಾತಿ-ಮತಧರ್ಮದ ಬಲ, ತೋಳ್ಬಲದ ಬಳಕೆಯ ಸಾಮರ್ಥ್ಯ, ಆಡಳಿತ ಯಂತ್ರದ ದುರ್ಬಳಕೆ, ಭ್ರಷ್ಟಾಚಾರ ಇತ್ಯಾದಿಗಳು ಅಘೋಷಿತ ಅಗತ್ಯಗಳಾಗಿವೆ. ಇಂತಹ `ಪ್ರಾಯೋಗಿಕ’ ಎಂದು ಕರೆಸಿಕೊಳ್ಳುವ ವಿಧಾನಗಳು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಸಂವಿಧಾನಾತ್ಮಕ ಮೌಲ್ಯಗಳನ್ನು ಅಪಹಾಸ್ಯ ಮಾಡುತ್ತವೆ. ಪ್ರಜಾಪ್ರಭುತ್ವೀಯ ವ್ಯವಸ್ಥೆಯನ್ನು ಒಳಗಿನಿಂದಲೇ ಕೊರೆದು ತಿಂದು ಹಾಕುತ್ತವೆ. ಈ ನಕಾರಾತ್ಮಕ ಪ್ರವೃತ್ತಿಗಳ ನಡುವೆಯೇ ಪ್ರಜಾಪ್ರಭುತ್ವ ಜನತೆಯ ಜಾಗೃತಿಯಿಂದ ಒಂದಿಷ್ಟು ಉಸಿರಾಡಿ ಕೊಂಡಿರುವುದನ್ನು ಅಲ್ಲಗಳೆಯಲಾಗುವುದಿಲ್ಲ ಎಂಬುದೂ ನಿಜ. ಸ್ಥಾಪಿತ ಹಿತಾಸಕ್ತಿಗಳ ಸಾಧನೆಗಾಗಿ ಪ್ರಭುತ್ವವೇ ಸರ್ವಾಧಿಕಾರಿ ಪ್ರವೃತ್ತಿಯ ಹಾದಿ ಹಿಡಿದಾಗ ಸಂಸದೀಯ ಮೌಲ್ಯಗಳ ಕುಸಿತ ಮಾತ್ರವಲ್ಲ ಪಾರ್ಲಿಮೆಂಟರಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಶಿಥಿಲಗೊಳ್ಳುವ ಅಪಾಯಕಾರಿ ಸೂಚನೆಗಳು ಇಲ್ಲದಿಲ್ಲ. ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ ವಸಾಹತುಶಾಹಿಗಳ ಆಳ್ವಿಕೆಯಿಂದ ವಿಮೋಚನೆಗೊಂಡ ದೇಶಗಳಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಬಹು ಬೇಗ ಬುಡ ಮೇಲಾಗಿ ಪ್ರಜೆಗಳನ್ನು ದಮನಿಸಿ ಸರ್ವಾಧಿಕಾರಿ ವ್ಯವಸ್ಥೆ ಮೇಲುಗೈ ಸಾಧಿಸಿರುವ ನಿದರ್ಶನಗಳು ಕಣ್ಣೆದಿರಿಗಿವೆ. ಹಲವು ಮಿತಿಗಳ ನಡುವೆಯೂ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಆಳವಾಗಿ ಬೇರೂರಿದೆ ಎನ್ನುವ ಮಾತುಗಳು ಇವೆ. ಆದರೆ ಆಳುವ ವರ್ಗಗಳ ಬೆದರಿಕೆಗಳ ಎದುರಲ್ಲಿ ಭಾರತದ ಸಂಸದೀಯ ಪ್ರಜಾಪ್ರಭುತ್ವ ಕೊನೆಯ ವಿಕೆಟ್ ಎನ್ನುವ ಎಚ್ಚರಿಕೆಯ ಅನುಭವಿಗಳ ಮಾತು ಉತ್ಪ್ರೇಕ್ಷೆಯಲ್ಲ. ಬದಲಾಗುವ ಆರ್ಥಿಕ ವ್ಯವಸ್ಥೆಯು ಬದಲಾದ ಸಾಮಾಜಿಕ, ರಾಜಕೀಯ ವ್ಯವಸ್ಥೆಯ ಸಂರಚನೆಗಾಗಿ ಒತ್ತಾಯಿಸುತ್ತದೆ.

ನಮ್ಮ ಸಂಸದೀಯ ವ್ಯವಸ್ಥೆಯಲ್ಲಿ ಚುನಾವಣಾ ಪದ್ಧತಿಯ ದೋಷ ದೌರ್ಬಲ್ಯಗಳಿಗೆ ರಾಜಕೀಯ ಪಕ್ಷಗಳ ಪಾತ್ರ ಇರುವಂತೆ ಪ್ರಭುತ್ವದ ಹಿತಾಸಕ್ತಿಗಳೂ ಅಷ್ಟೇ ಮುಖ್ಯವಾಗಿವೆ. ತಮ್ಮ ವೈಫಲ್ಯಗಳನ್ನು ಮರೆಮಾಚಿಕೊಳ್ಳಲು ಆಮಿಷ, ಅಕ್ರಮಗಳಿಗೆ ಮೊರೆ ಹೋಗಲಾಗುತ್ತಿದೆ. ರಾಜಕೀಯ ಅಧಿಕಾರ ಮತ್ತು ಚುನಾವಣಾ ಸುಧಾರಣೆ ಕುರಿತಾದ ಯಾವುದೇ ಚರ್ಚೆಗಳು ಈ ತಳಹದಿಯನ್ನು ಬಿಟ್ಟು ಹೋಗುವಂತಿಲ್ಲ.

ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಗಳು ಸಂಸತ್ ಹಾಗೂ ವಿಧಾನಸಭಾ ಮಟ್ಟದಲ್ಲಿ ಹಲವಾರು ನಡೆದಿವೆ. ಅಧ್ಯಯನ ಸಮಿತಿಗಳು, ಹಲವು ಆಯೋಗಗಳು ರಚನೆಯಾಗಿವೆ. 1990 ರ ಜನವರಿಯಲ್ಲಿ ಪ್ರಧಾನಿ ವಿ.ಪಿ.ಸಿಂಗ್ ಅವರು ಕರೆದ ಸರ್ವಪಕ್ಷಗಳ ಸಭೆಯನ್ನು ಸುಧಾರಣೆಗಳ ಬಗ್ಗೆ ಚರ್ಚಿಸಲಾಯಿತು. ದಿನೇಶ್ ಗೋಸ್ವಾಮಿ ಅಧ್ಯಕ್ಷತೆಯ ಸಮಿತಿ 107 ಶಿಫಾರಸುಗಳನ್ನು ನೀಡಿದೆ. 1993 ರಲ್ಲಿ ವೋರಾ ಸಮಿತಿ ರಾಜಕೀಯ ಅಪರಾಧೀಕರಣದ ತಡೆಗಳ ಬಗ್ಗೆ ವಿಸ್ತೃತ ವರದಿಯನ್ನು ನೀಡಿದೆ. 1999 ರಲ್ಲಿ ರಾಮ್ ಜೇಠ್ಮಲಾನಿ ಸಚಿವರಾಗಿದ್ದಾಗ ಚುನಾವಣಾ ಕಾನೂನು ಸುಧಾರಣೆಗಳ ಬಗ್ಗೆ ಕ್ರಮ ವಹಿಸಿದೆ.  ಬಿ.ಪಿ. ರೆಡ್ಡಿ ಅವರು ಹದಿನೈದನೆಯ ಕಾನೂನು ಆಯೋಗದ ಅಧ್ಯಕ್ಷರಾಗಿರುವಾಗ ಹಲವು ಪ್ರಸ್ತಾವಗಳು ಬಂದಿವೆ. 1998 ರಲ್ಲಿ ಇಂದ್ರಜಿತ್ ಗುಪ್ತಾ ರವರ ಸಮಿತಿ ಸುಧಾರಣೆಗಳ ಪ್ರಸ್ತಾವಗಳನ್ನು, ಚುನಾವಣೆಗಳ ವೆಚ್ಚವನ್ನು ಸರಕಾರವೇ ಭರಿಸುವ ಬಗ್ಗೆ ಶಿಫಾರಸುಗಳನ್ನು ನೀಡಿದೆ. 2000 ದಲ್ಲಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ ನವರು ಸಂವಿಧಾನ ಸುಧಾರಣೆಗೆ ಚುನಾವಣಾ ಪ್ರಕ್ರಿಯೆ, ರಾಜಕೀಯ ಪಕ್ಷಗಳ ಪಾತ್ರ ಕುರಿತು ಶಿಫಾರಸುಗಳನ್ನು ನೀಡಿದ್ದಾರೆ. ಇಂತಹ ಹಲವು ಹತ್ತಾರು ತಜ್ಞರ ಶಿಫಾರಸುಗಳು ನಮ್ಮ ಕಣ್ಣೆದುರಿಗಿದೆ. ಆದರೆ ಪರಿಸ್ಥಿತಿ ಸುಧಾರಿಸುವ ಬದಲು ಮತ್ತಷ್ಟು ಸಿನಿಕತನದಿಂದ ಅಧಃಪತನಕ್ಕೆ ಸಾಗುತ್ತಿದೆ.

ಕರ್ನಾಟಕ ವಿಧಾನಸಭೆಯಲ್ಲಿ ಕೂಡ ಈ ಸುತ್ತಿನಲ್ಲಿ ಸುಧಾರಣೆಗಳ ಬಗ್ಗೆ ಅತ್ಯಂತ ಬಿರುಸಿನ ಮಾಹಿತಿಪೂರ್ಣ ಚರ್ಚೆಗಳು, ವ್ಯಕ್ತಗೊಂಡ ಕಾಳಜಿ ಗಮನಿಸುವಂತಹುದು. ಪ್ರಸಕ್ತ ಪರಿಸ್ಥಿತಿಯ ದುಸ್ಥಿತಿ, ಪರಿಹಾರ, ಪರ್ಯಾಯಗಳನ್ನು ಮನ ಮುಟ್ಟುವಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಶಾಸಕರು ಮಾತನಾಡಿದ್ದಾರೆ. ಆಡಿದ ಮಾತುಗಳಿಗೆ ಈ ಪಕ್ಷಗಳು ಬದ್ಧವೇ ಎಂದಾಗ ಅಂತಹ ಯಾವ ಭರವಸೆಗಳು ಕಾಣುತ್ತಿಲ್ಲ. ಬದಲಾಗಿ ಒಬ್ಬರು ಮತ್ತೊಬ್ಬರನ್ನು ಮೀರಿಸುವ ಸ್ಪರ್ಧೆಗಿಳಿದಂತೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ವಿಶೇಷವಾಗಿ, ಬಿಜೆಪಿ ಯಂತಹ ರಾಜಕೀಯ ಪಕ್ಷ ಕಾರ್ಪೊರೇಟ್ ಕಂಪನಿಗಳ ಹಣದ ಹೊಳೆಯಲ್ಲಿಯೇ ಅಧಿಕಾರದ ಗದ್ದುಗೆಯತ್ತ ತೇಲಿ ತಲುಪಿದೆ. ಹಣ, ಅಧಿಕಾರದ ಎಗ್ಗಿಲ್ಲದ ದುರ್ಬಳಕೆ, ಆಪರೇಷನ್ ಕಮಲ ಎನ್ನುವ ಅನೈತಿಕ ಪಕ್ಷಾಂತರ, ದತ್ತಾಂಶಗಳ ಮತ್ತು ತಂತ್ರಜ್ಞಾನದ ದುರ್ಬಳಕೆ, ಮಾಧ್ಯಮಗಳ ಖರೀದಿ, ಸಾಮಾಜಿಕ ದ್ವೇಷ, ಧಾರ್ಮಿಕ ವಿಭಜನೆ ಗೆಲುವಿನ ಹಾದಿ ಎಂದು ಅಂಗೀಕರಿಸಿ ಅನುಸರಿಸುತ್ತಿದೆ. ಬಿಜೆಪಿಯ ಹಣ ಮತ್ತು ತಂತ್ರಗಾರಿಕೆ ಎದುರು ಶತಮಾನಗಳ ಇತಿಹಾಸವಿರುವ ಪಕ್ಷಗಳೇ ಏದುಸಿರು ಬಿಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಎಡ ಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲ ಪಕ್ಷಗಳೂ ಸರಿಸುಮಾರು ಅಂತಹ ವರಸೆಗಳನ್ನೇ ಆದರಿಸಿವೆ. ಉದಾರೀಕರಣ, ಜಾಗತೀಕರಣದ ಪ್ರಕ್ರಿಯೆಯಲ್ಲಿ ಅಪಾರ ಸಾರ್ವಜನಿಕ ಸಂಪತ್ತಿನ ಲೂಟಿ ಮಾಡಲು ಅನುವು ಮಾಡಿಕೊಡುವ ರಾಜಕೀಯ ಪಕ್ಷಗಳಿಗೆ ಹಣದ ಹರಿವು ಮತ್ತು ಅದನ್ನು ಅಧಿಕಾರದಲ್ಲಿ ಸ್ಥಾಪಿಸುವ ಪ್ರಯತ್ನಗಳು ನಡೆದಿವೆ. ಕಾರ್ಪೊರೇಟ್ ಹಿಡಿತ ಬಿಗಿಗೊಂಡಿದೆ.

ವಿಧಾನಸಭೆಯಲ್ಲಿನ ಆಳುವ ಮತ್ತು ವಿರೋಧ ಪಕ್ಷಗಳ ನಾಯಕರ ಮಾತುಗಳನ್ನು ಪ್ರಮುಖವಾಗಿ, ವಿಧಾನಸಭಾಧ್ಯಕ್ಷರ ಆಶಯ ನುಡಿಗಳನ್ನು ಸಹ ಕೇಳಿದಾಗ ಅಪರಾಧಿಗಳ ಆತ್ಮನಿವೇದನೆ ಈ ಚರ್ಚೆ ಅನಿಸುವುದು ಬಿಟ್ಟರೆ ಚುನಾವಣಾ ಸುಧಾರಣೆಗಳಿಗೆ ಕಟಿಬದ್ಧರಾದ ಯಾವ ಸೂಚನೆಗಳು  ಕಾಣಸಿಗುವುದಿಲ್ಲ. ರಾಜಕೀಯ ಪಕ್ಷಗಳಿಂದ ಅತಿ ಅಗತ್ಯ ಇರುವ ಸುಧಾರಣೆಗಳ ಮಾತುಗಳು ಕೇವಲ ಹಳಹಳಿಕೆ ಗಳಾಗಿ ತೋರುತ್ತಿವೆ. ರಾಜಕೀಯ ಇಚ್ಛಾಶಕ್ತಿ, ಬದ್ಧತೆ ಇಲ್ಲದ ಸದನದ ಚರ್ಚೆಗಳು ಜನತೆಯ ಅಮೂಲ್ಯ ಸಮಯದ ವ್ಯರ್ಥಗೊಳಿಸುವಿಕೆಯಂತೆ ಕಾಣುತ್ತದೆ.

ಚುನಾವಣೆಯ ಖರ್ಚುವೆಚ್ಚಗಳನ್ನು ಸರಕಾರವೇ ವ್ಯವಸ್ಥೆಗೊಳಿಸುವುದು, ಬಹುಮುಖ್ಯವಾಗಿ, ಪ್ರಮಾಣಾತ್ಮಕ ಪ್ರಾತಿನಿಧ್ಯದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಸುಧಾರಣೆಗಳಲ್ಲಿ ಅತಿ ಮುಖ್ಯವಾಗಿದೆ. ಇಂದಿನ ಚುನಾವಣಾ ಪದ್ಧತಿಯಲ್ಲಿ ಶೇಕಡವಾರು ಮತ ಕಡಿಮೆ ಪಡೆದಿದ್ದರೂ ಹೆಚ್ಚು ಸ್ಥಾನಗಳನ್ನು ಗಳಿಸಲಾಗುತ್ತಿದೆ. ಸರ್ಕಾರವನ್ನು ರಚಿಸುವುದು ವಾಸ್ತವದಲ್ಲಿ ಜನರ ಆಯ್ಕೆಯ ಬಹುಮತದ ಆಧಾರದಲ್ಲಿ ಇರುವುದಿಲ್ಲ. ಬಹುಮತಗಳು ಅವರ ವಿರುದ್ಧವೇ ಇರುತ್ತದೆ. ಮೇಲಾಗಿ ಪಕ್ಷ ಮತ್ತದರ ನೀತಿಗಳು ಗೌಣವಾಗಿ ಅಭ್ಯರ್ಥಿಗಳ ತೂಕವೇ ನಿರ್ಧಾರಕ ಅಂಶ ಆಗಿರುತ್ತದೆ. ಇದನ್ನು ಕರ್ನಾಟಕ ಒಳಗೊಂಡು ಹಲವಾರು ಕಡೆಗಳಲ್ಲಿ ನೋಡಿದ್ದೇವೆ. ಆದ್ದರಿಂದ ರಾಜಕೀಯ ಪಕ್ಷಗಳಿಗೆ ದೊರೆಯುವ ಮತಗಳನ್ನು ಆದರಿಸಿ ಪ್ರಮಾಣಾತ್ಮಕವಾಗಿ ಸ್ಥಾನಗಳನ್ನು ಒದಗಿಸುವ ವ್ಯವಸ್ಥೆ ತುಲನಾತ್ಮಕವಾಗಿ ವೈಜ್ಞಾನಿಕವಾಗಿದೆ. ಪ್ರಮಾಣಾತ್ಮಕ ಪ್ರಾತಿನಿಧ್ಯದ ವ್ಯವಸ್ಥೆಯು ಜಗತ್ತಿನ ಹಲವು ದೇಶಗಳಲ್ಲಿ ಜಾರಿಯಲ್ಲಿದೆ. ಅದನ್ನು ಭಾರತದ ವಾಸ್ತವಿಕ ಸ್ಥಿತಿಯ ಅನುಭವದ ಹಿನ್ನೆಲೆಯಲ್ಲಿ ಅದನ್ನು ಅಗತ್ಯ ಅನುಸರಿಸಿ ಮರು ವಿನ್ಯಾಸಗೊಳಿಸಬಹುದು. ಈ ಹಿನ್ಮೆಲೆಯಲ್ಲಿ ಎಡಪಕ್ಷಗಳು ಪ್ರಮಾಣಾತ್ಮಕ ಪ್ರಾತಿನಿಧ್ಯಕ್ಕೆ ಒತ್ತಾಯಿಸುತ್ತಿರುವುದು ಸೂಕ್ತವೂ ಆಗಿದೆ. ಹಾಗೆಯೇ ಚುನಾಯಿತ ಪ್ರತಿನಿಧಿ ಸಂವಿಧಾನ ಮತ್ತು ಜನತೆಯ ಹಿತಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅಂತಹವರನ್ನು ವಾಪಸು ಕರೆಸಿಕೊಳ್ಳುವ ಹಕ್ಕು ಕೂಡ ಅಷ್ಟೇ ಪ್ರಮುಖವಾದುದು. ಆದರೆ ಅಂತಹ ಹಲವಾರು ರಚನಾತ್ಮಕ ಸುಧಾರಣೆಗಳ ಪ್ರಸ್ತಾವಗಳನ್ನು ಆಳುವ ಸರ್ಕಾರಗಳು ನಿರಂತರ ನಿರ್ಲಕ್ಷಿಸುತ್ತಲೇ ಬಂದಿವೆ. ಇಂತಹ ವರ್ತನೆಗಳು ಚುನಾವಣಾ ಸುಧಾರಣೆಗಳ ಬಗೆಗಿನ ಚರ್ಚೆಗಳ ಪ್ರಾಮಾಣಿಕತೆಯನ್ನು ಪ್ರಶ್ನಾರ್ಹ ಗೊಳಿಸಿವೆ.

ಶಾಸನ ಸಭೆಗಳಿಗೆ ನೂರಾರು ಕೋಟಿ ರೂ. ಗಳ ಒಡೆಯರ ಪ್ರವೇಶ, ಕಾರ್ಪೊರೇಟ್ ಪ್ರಾಯೋಜಿತ ರಾಜಕೀಯ ಪಕ್ಷಗಳು ಅದರ ಅಭ್ಯರ್ಥಿಗಳು ಕಂಪನಿಗಳ ನಿಧಿ ಪಡೆಯುವುದು, ಸಂವಿಧಾನ ವಿರೋಧಿ ಅಪರಾಧಿ ಹಿನ್ನೆಲೆಯವರು, ಸಂವಿಧಾನ ವಿರೋಧಿ ನಿಲುವುಗಳುಳ್ಳ ಅಭ್ಯರ್ಥಿಗಳು ಶಾಸಕಾಂಗದ ಒಳಗೆ ಪ್ರವೇಶಿಸಿದಂತೆ ತಡೆಯುವುದು ಅತಿ ದೊಡ್ಡ ಸವಾಲು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅನೈತಿಕ ಮಾರ್ಗಗಳ ಮೂಲಕ ಅಧಿಕಾರದಲ್ಲಿರುವಾಗ ಸಭಾಧ್ಯಕ್ಷರು ಚುನಾವಣಾ ಸುಧಾರಣೆಗಳ ಚರ್ಚೆಗಳಿಗೆ ಚಾಲನೆ ನೀಡಿರುವುದು ಸ್ವಾಗತಾರ್ಹವಾದರೂ ಅದು ನಿಜಕ್ಕೂ ಇಂದಿನ ವಾಸ್ತವಿಕ ಪರಿಸ್ಥಿತಿಯನ್ನು ಬದಲಾಯಿಸುವ ಕ್ರಮವಾಗಬಹುದೇ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸಭಾಧ್ಯಕ್ಷರ ಮಾತೃಪಕ್ಷ  ಮೂಲ ಸುಧಾರಣೆಗಳಿಗೆ ಮತ್ತು ಮಾತೃಸಂಸ್ಥೆ ಮನಸು ತೆರೆದೀತೆ? ಮುಖ್ಯವಾಗಿ ಸಭಾಧ್ಯಕ್ಷರು ‘ಒಂದು ರಾಷ್ಟ್ರ, ಒಂದು ಚುನಾವಣೆ’ ವ್ಯವಸ್ಥೆಯನ್ನು ಬಹುವಾಗಿ ಪ್ರತಿಪಾದಿಸುವುದು ಅವರಿಗೆ ಅದರತ್ತ ತುಂಬಾ ಒಲವು ಇರುವುದು ಕಾಣುತ್ತದೆ. ಅದನ್ನು ಅಳವಡಿಸಿಕೊಂಡಲ್ಲಿ ಸಂವಿಧಾನದ ಒಕ್ಕೂಟ ವ್ಯವಸ್ಥೆಯನ್ನು, ವೈವಿಧ್ಯ ಪ್ರಾದೇಶಿಕ ಸಾಮಾಜಿಕ-ಸಾಂಸ್ಕೃತಿಕ ವೈಶಿಷ್ಟತೆಗಳನ್ನು ಮೂಲೆಗುಂಪಾಗಿಸುವ ಹೆಜ್ಜೆಗಳಾಗುತ್ತವೆ ಮತ್ತು ಅದು ಕೇವಲ ಆಡಳಿತಾತ್ಮಕ ಕೇಂದ್ರೀಕರಣ ಮಾತ್ರವಲ್ಲದೆ ರಾಜಕೀಯ ಯಜಮಾನಿಕೆಯನ್ನು ರೂಢಿಸಿ ಸರ್ವಾಧಿಕಾರವನ್ನು ಸ್ಥಾಪಿಸಲು ಅವಕಾಶ ಕಲ್ಪಿಸುತ್ತವೆ.

ಅಧಿವೇಶನದಲ್ಲಿ ನಡೆಯುವ ಚರ್ಚೆಗಳು, ಕೈಗೊಳ್ಳುವ ತೀರ್ಮಾನಗಳು ಸಕಾರಾತ್ಮಕವಾಗಿರಲಿ .ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಗೊಳಿಸುವ ದಿಕ್ಕಿನಲ್ಲಿ ಇರಲಿ. ಕೇವಲ ಚರ್ಚೆ ವಾಗಾಡಂಬರವಾದರೆ ಜಾರಿಗೆ ಬರುವುದು ಅನುಮಾನಾಸ್ಪದ. ಜನತೆಗೆ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ಪರಮೋಚ್ಛ ಅಧಿಕಾರವನ್ನು ನೀಡುವ, ರಾಜಕೀಯ ಇಚ್ಛಾಶಕ್ತಿ, ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಬದ್ಧತೆ ಇಲ್ಲದ ಇಂತಹ ಚರ್ಚೆಗಳು ನಿಷ್ಪ್ರಯೋಜಕ ಮತ್ತು ತೋರಿಕೆಯ ವ್ಯರ್ಥ ಕಸರತ್ತುಗಳೇ ಆಗಿವೆ.

Leave a Reply

Your email address will not be published. Required fields are marked *