ಹಿಂದುತ್ವ-ಕಾರ್ಪೊರೇಟ್ ಆಡಳಿತದ ವಿರುದ್ಧ ಹೋರಾಡಲು ಸಿಪಿಐ(ಎಂ) ಬಲವರ್ಧನೆ ಅಗತ್ಯ

ದೇಶಕ್ಕೇ ದಾರಿ ತೋರಲಿರುವ 23ನೇ ಮಹಾಧಿವೇಶನ

ಪ್ರಕಾಶ್ ಕಾರಟ್

ಸಿಪಿಐ(ಎಂ) 23ನೇ ಮಹಾಧಿವೇಶನ (ಕಾಂಗ್ರೆಸ್) ಕೇರಳದ ಕಣ್ಣೂರಿನಲ್ಲಿ ಏಪ್ರಿಲ್ 6 ರಿಂದ 10ರ ವರೆಗೆ ನಡೆಯಲಿದೆ. ಮುಂದಿನ ಮೂರು ವರ್ಷ ಪಕ್ಷ ಸವೆಸಬೇಕಾದ ರಾಜಕೀಯ ಹಾದಿಯನ್ನು ಅದು ನಿರ್ಧರಿಸಲಿದೆ.

ಕೇಂದ್ರ ಸಮಿತಿ ಎರಡು ತಿಂಗಳಿಗೂ ಹಿಂದೆ ಬಿಡುಗಡೆ ಮಾಡಿದ್ದ ಕರಡು ರಾಜಕೀಯ ಗೊತ್ತುವಳಿಯನ್ನು ಪಕ್ಷದ ಎಲ್ಲ ಹಂತಗಳಲ್ಲಿ ಚರ್ಚಿಸಲಾಗಿದೆ. ಪಕ್ಷದ ಮಹಾಧಿವೇಶನದಲ್ಲಿ ಪ್ರತಿನಿಧಿಗಳು ಚರ್ಚಿಸಿದ ನಂತರ ಅದನ್ನು ಅಂತಿಮ ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳಲಾಗುತ್ತದೆ. ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಈ ಪ್ರಕ್ರಿಯೆಯೇ ಪಕ್ಷದ ರಾಜಕೀಯ-ವ್ಯೂಹಾತ್ಮಕ ಧೋರಣೆಯನ್ನು ರೂಪಿಸುವುದಾಗಿದ್ದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ಗೆ ಅತಿ ವಿಶಿಷ್ಟ ಪ್ರಕ್ರಿಯೆಯಾಗಿದೆ.

2018ರಲ್ಲಿ ಪಕ್ಷದ ಕಳೆದ ಕಾಂಗ್ರೆಸ್ ನಡೆದ ನಂತರದಲ್ಲಿ, ಬಲಪಂಥೀಯ ಶಕ್ತಿಗಳು ದೇಶದಲ್ಲಿ ತಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಕೊಂಡಿವೆ. 2019 ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಗಳಲ್ಲಿ ಮೋದಿ ಸರ್ಕಾರ ಇನ್ನೂ ದೊಡ್ಡ ಬಹುಮತದಿಂದ ಅಧಿಕಾರಕ್ಕೆ ಮರಳಿದ್ದರಲ್ಲಿ ಅದನ್ನು ಕಾಣಬಹುದಾಗಿದೆ. ಅದರ ಪರಿಣಾಮವಾಗಿ, ಹಿಂದೂತ್ವ ಅಜೆಂಡಾವನ್ನು ಜಾರಿ ಮಾಡಲು ಇನ್ನಷ್ಟು ಜೋಷಿನಿಂದ ಪ್ರಯತ್ನ ನಡೆದಿದೆ. ಅದರ ಜೊತೆಜೊತೆಯಲ್ಲೇ ಆರ್ಥಿಕ ನೀತಿಗಳಲ್ಲಿ ಕಾರ್ಪೋರೇಟ್-ಪರ, ನವ-ಉದಾರವಾದಿ ಕ್ರಮಗಳಿಗೆ ಒತ್ತು ನೀಡಲಾಗಿದೆ. ಅದರ ಫಲವಾಗಿ ಆಡಳಿತದ ಬೆಂಬಲ ದೊರೆತ ಬೆರಳೆಣಿಕೆಯಷ್ಟು ದೊಡ್ಡ ಬಂಡವಾಳಶಾಹಿಗಳ ಆಸ್ತಿಪಾಸ್ತಿ ಮತ್ತು ಲಾಭದಲ್ಲಿ ಅಗಾಧ ಬೆಳವಣಿಗೆ ಆಗಿದೆ. ಆದರೆ ಜನಸಾಮಾನ್ಯರ ವಿಚಾರದಲ್ಲಿ ಹೇಳುವುದಾದರೆ ನಿರುದ್ಯೋಗ, ಆದಾಯ ಕುಸಿತ, ಬೆಲೆಯೇರಿಕೆ ಮತ್ತು ಕೃಷಿ ಬಿಕ್ಕಟ್ಟು ಅದರಲ್ಲೂ ಮುಖ್ಯವಾಗಿ ಕೋವಿಡ್ ಸಾಂಕ್ರಾಮಿಕತೆಯ ನಂತರದಲ್ಲಿ ಬೀರಿದ ಪರಿಣಾಮಗಳು ಘನಘೋರವಾಗಿದೆ.

ಈ ಅವಧಿಯಲ್ಲಿ ದುಡಿಯುವ ಜನರ ವಿವಿಧ ವಿಭಾಗಗಳು ಬೃಹತ್ ಸಂಯುಕ್ತ ಹೋರಾಟಗಳನ್ನು ನಡೆಸಿವೆ. ಮೋದಿ ಸರ್ಕಾರದ ಜನ-ವಿರೋಧಿ ನೀತಿಗಳು ಹಾಗೂ ಅವುಗಳು ಜನರ ಮೇಲೆ ಹೊರಿಸಿದ ಹೊರೆಗಳ ವಿರುದ್ಧ ಹೋರಾಟ ನಡೆಸಲಾಗಿದೆ. ಮೂರು ಕೃಷಿ ಕಾನೂನುಗಳ ವಿರುದ್ಧ ಒಂದು ವರ್ಷ ಕಾಲ ನಡೆಸಿದ ದೀರ್ಘ ಹೋರಾಟ ಇದಕ್ಕೊಂದು ಪ್ರಮುಖ ಉದಾಹರಣೆಯಾಗಿದೆ.

ದುಡಿಯುವ ಜನರ ವಿರುದ್ಧವಾದ ಕಾರ್ಮಿಕ ಸಂಹಿತೆ, ಖಾಸಗೀಕರಣ ವಿರುದ್ಧ ಮತ್ತು ಸಾಕಷ್ಟು ಕನಿಷ್ಠ ವೇತನ ನೀಡಲು ಆಗ್ರಹಿಸಿ ಚಳವಳಿಗಳು ನಡೆದಿವೆ. 2018ರಿಂದ 2022ರ ನಡುವೆ  ನಾಲ್ಕು ಸಾರ್ವತ್ರಿಕ ಮುಷ್ಕರಗಳು ನಡೆದಿವೆ. ಆ ಪೈಕಿ ಇದೇ ಮಾರ್ಚ್ 28 ಮತ್ತು 29ರಂದು ನಡೆದ ರಾಷ್ಟ್ರವ್ಯಾಪಿ ಮುಷ್ಕರವೂ ಸೇರಿದೆ. ಈ ಎಲ್ಲ ಮುಷ್ಕರಗಳಲ್ಲಿ ಎಲ್ಲ ವಲಯಗಳ ಕೋಟ್ಯಂತರ ಕಾರ್ಮಿಕರು ಮತ್ತು ನೌಕರರು ಭಾಗವಹಿಸಿದ್ದಾರೆ.

ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಂವಿಧಾನಿಕ ತತ್ವಗಳ ರಕ್ಷಣೆಗಾಗಿಯೂ ಅನೇಕ ಚಳವಳಿ ಮತ್ತು ಹೋರಾಟಗಳು ನಡೆದಿವೆ. ಪೌರತ್ವ ತಿದ್ದುಪಡಿ ಕಾನೂನು (ಸಿಎಎ)-ವಿರೋಧಿ ಚಳವಳಿ ಅವುಗಳಲ್ಲಿ ಪ್ರಮುಖವಾಗಿದ್ದು ದೇಶದಾದ್ಯಂತ ಸಾಮೂಹಿಕ ಪ್ರತಿಭಟನೆಗಳು ಮೇಲೆದ್ದು ಬಂದಿದ್ದವು.

ಈ ಹೋರಾಟಗಳು ಮತ್ತು ಚಳವಳಿಗಳು ಬೆಳೆಯಲು ಹಾಗೂ ತೀವ್ರಗೊಳ್ಳಲು ಸಿಪಿಐ(ಎಂ) ಮತ್ತು ಎಡ ಶಕ್ತಿಗಳು ಪ್ರಮುಖ ಪಾತ್ರ ವಹಿಸಿವೆ.

ಬಿಜೆಪಿ-ಆರ್‌ಎಸ್‌ಎಸ್ ಆಡಳಿತದ ವಿರುದ್ಧದ ಹೋರಾಟವನ್ನು ನವ-ಉದಾರವಾದಿ ನೀತಿಗಳು ಹಾಗೂ ಹಿಂದೂತ್ವ ಶಕ್ತಿಗಳ ವಿರುದ್ಧದ ರಾಜಕೀಯ-ಸೈದ್ಧಾಂತಿಕ ಸಂಘರ್ಷದೊಂದಿಗೆ ಜೋಡಿಸಬೇಕು ಎಂದು ಸಿಪಿಐ(ಎಂ) ಸದಾ ಹೇಳುತ್ತಾ ಬಂದಿದೆ. ಮುಸ್ಲಿಂ-ವಿರೋಧಿ ಥೀಮ್‌ನೊಂದಿಗಿನ ರಾಷ್ಟ್ರೀಯತೆಯ ಹಿಂದೂತ್ವ ಬ್ರಾಂಡ್ ದೇಶದ ಗಣನೀಯ ಪ್ರಮಾಣದ ಜನರ ಮೇಲೆ ಪ್ರಭಾವ ಬೀರಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕಿದೆ. ಅದರಲ್ಲೂ ವಿಶೇಷವಾಗಿ ದೇಶದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಈ ಪ್ರವೃತ್ತಿ ಕಂಡು ಬಂದಿದೆ. ಹಿಂದೂತ್ವಕ್ಕೆ ರಾಜಕೀಯ-ಸೈದ್ಧಾಂತಿಕ ಕೌಂಟರ್ ಬೆಳೆಸಿ ಅದನ್ನು ಪರಿಣಾಮಕಾರಿಯಾಗಿ ಜನರ ಬಳಿಗೆ ಕೊಂಡೊಯ್ಯದ ಹೊರತು ಹಿಂದೂತ್ವ-ಕಾರ್ಪೊರೇಟ್ ಆಡಳಿತಕ್ಕೆ ಪರಿಣಾಮಕಾರಿಯಾದ ಸವಾಲನ್ನು ಹಾಕಲು ಸಾಧ್ಯವಿಲ್ಲ.

ಕಾಂಗ್ರೆಸ್ ಪಕ್ಷ ಮತ್ತು ಬಹುತೇಕ ಇತರ ಜಾತ್ಯತೀತ ಪ್ರತಿಪಕ್ಷಗಳು ಹಿಂದೂತ್ವದ ವಿರುದ್ಧ ಈ ಸಮರವನ್ನು ಕೈಗೆತ್ತಿಕೊಳ್ಳುವಲ್ಲಿ ವಿಫಲವಾಗಿರುವ ಈ ಸಮಯದಲ್ಲಿ ಅಂಥದ್ದೊಂದು ವೇದಿಕೆ ನಿರ್ಮಿಸಿ ಅದರ ಸುತ್ತ ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಅಣಿನೆರೆಯಿಸುವುದು ಸಿಪಿಐ(ಎಂ) ಮತ್ತು ಎಡ ಶಕ್ತಿಗಳ ಹೊಣೆಯಾಗಿದೆ.

ಸಿಪಿಐ(ಎಂ)ನ ಸ್ವತಂತ್ರ ಶಕ್ತಿಯನ್ನು ರಾಜಕೀಯವಾಗಿಯೂ ಸಂಘಟನಾತ್ಮಕವಾಗಿಯೂ ಹೇಗೆ ಬೆಳೆಸಬೇಕು ಎಂಬ ಕೇಂದ್ರೀಯ ಥೀಮ್ ಮೇಲೆ ಪಕ್ಷದ ಮಹಾಧಿವೇಶನ ಗಮನ ಕೇಂದ್ರೀಕರಿಸಲಿದೆ. ಪಕ್ಷ ಹಲವು ಹಿನ್ನಡೆಗಳನ್ನು ಅನುಭವಿಸಿದೆ ಹಾಗೂ ಅದರ ಪ್ರಭಾವ ಕುಗ್ಗಿದೆ. ಅದರಲೂ ವಿಶೇಷವಾಗಿ ಎರಡು ಪ್ರಮುಖ ಭದ್ರ ಕೋಟೆಗಳಾದ ಬಂಗಾಳ ಮತ್ತು ತ್ರಿಪುರಾದಲ್ಲಿ ಕಮ್ಯೂನಿಸ್ಟ್-ವಿರೋಧಿ ಶಕ್ತಿಗಳು ನಡೆಸಿದ ದಾಳಿಗಳ ನಂತರ ಹೀಗಾಗಿದೆ ಎನ್ನುವುದರ ಹಿನ್ನೆಲೆಯಲ್ಲಿ ಈ ಗಮನ ನೀಡಲಾಗುತ್ತಿದೆ. ಬಂಗಾಳದಲ್ಲಿ ಟಿಎಂಸಿ ಹಾಗೂ ತ್ರಿಪುರಾದಲ್ಲಿ ಬಿಜೆಪಿ ಇವೇ ಆ ಕಮ್ಯೂನಿಸ್ಟ್-ವಿರೋಧಿ ಶಕ್ತಿಗಳಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಎರಡು ರಾಜ್ಯಗಳಲ್ಲಿ ಪಕ್ಷದ ಅನೇಕ ಕಾರ್ಯಕರ್ತರು ಹಾಗೂ ಬೆಂಬಲಿಗರ ಹತ್ಯೆಯಾಗಿದೆ. ಸಾವಿರಾರು ಜನರು ಅನೇಕ ರೀತಿಯ ದಾಳಿಗಳಿಗೆ ಈಡಾಗಿದ್ದಾರೆ. ಅಷ್ಟೆಲ್ಲ ಆದರೂ ಪಕ್ಷದ ಕಾರ್ಯಕರ್ತರು ಮತ್ತು ಕೇಡರ್‌ಗಳು ದಬ್ಬಾಳಿಕೆಗಳನ್ನು ದಿಟ್ಟತನದಿಂದ ಎದುರಿಸಿದ್ದಾರೆ. ಮತ್ತೆ ಒಂದಾಗಲು, ಜನರ ಬಳಿ ತೆರಳಲು ಹಾಗೂ ದುಡಿಯುವ ಜನಸಮುದಾಯದ ಚಳವಳಿ-ಹೋರಾಟಗಳನ್ನು ನಡೆಸಲು ಕೆಲಸ ಮಾಡುತ್ತಿದ್ದಾರೆ.

ಹಿಂದಿನ ಕಾಂಗ್ರೆಸ್ ಗೊತ್ತುಪಡಿಸಿದ ಸಂಘಟನಾತ್ಮಕ ಕಾರ್ಯವನ್ನು ಹಾಗೂ ಕಾರ್ಯಭಾರಗಳ ಅನುಷ್ಠಾನವನ್ನು ಪಕ್ಷದ ಮಹಾಧಿವೇಶನ ಪರಿಶೀಲಿಸಲಿದೆ. ಎರಡು ವರ್ಷ ಕಾಲ ಕೋವಿಡ್ ಸಾಂಕ್ರಾಮಿಕತೆ ಹಾಗೂ ಲಾಕ್‌ಡೌನ್‌ಗಳಿಂದಾಗಿ ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಉಂಟಾಗಿದೆ. ಬಡ ಜನರಿಗೆ ವರ್ಣಿಸಲಾಗದ ಸಂಕಟ ಎದುರಾಗಿದೆ. ಈ ಕಷ್ಟದ ಕಾಲದುದ್ದಕ್ಕೂ ಪಕ್ಷವು ಜನರ ನಡುವೆ ಇದ್ದು ವಲಸೆ ಕಾರ್ಮಿಕರಿಗೆ ಮಾತ್ರವಲ್ಲದೆ ನಗರ ಹಾಗೂ ಗ್ರಾಮೀಣ ಬಡವರಿಗೆ ನೆರವಾಗಲು ಕೆಲಸ ಮಾಡಿದೆ. ಕೋವಿಡ್ ಐಸೊಲೇಶನ್ ಕೇಂದ್ರಗಳ ಸ್ಥಾಪನೆ, ಪಡಿತರ ನೀಡಿಕೆ, ಆಹಾರ ಕಿಟ್ ವಿತರಣೆ, ಆಮ್ಲಜನಕ ಸಿಲಿಂಡರ್, ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡುವ ಕೆಲಸ ಮಾಡಿದೆ. ಪಕ್ಷದ ಸಂಘಟನಾ ಕ್ಷೇತ್ರದಲ್ಲಿ ಯುವ ಕೇಡರ್‌ಗಳನ್ನು ತರುವ ಮೂಲಕ ಪಕ್ಷದ ಸಮಿತಿಗಳನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಲಾಗಿದೆ. ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸಲು ಹಾಗೂ ವರ್ಗ ಮತ್ತು ಸಾಮಾಜಿಕ ಸಂಯೋಜನೆಯನ್ನು ಸುಧಾರಿಸಲೂ ಕ್ರಮ ಕೈಗೊಳ್ಳಲಾಗಿದೆ.

ಈ ಕಾಲಘಟ್ಟದಲ್ಲಿ ಕೇರಳದಲ್ಲಿ ಪಕ್ಷದ ಮಹಾಧಿವೇಶನ ನಡೆಯುತ್ತಿರುವುದಕ್ಕೆ ವಿಶೇಷ ಮಹತ್ವವಿದೆ. ಕಣ್ಣೂರು ಕಮ್ಯೂನಿಸ್ಟ್ ಚಳವಳಿಯ ಒಂದು ಕೋಟೆಯಾಗಿದೆ. ಜನರ ನಡುವೆ ಪಕ್ಷ ಆಳವಾಗಿ ಬೇರೂರಿದೆ. ಕಣ್ಣೂರು ಜಿಲ್ಲೆಯಲ್ಲಿ ಪಕ್ಷದ ಸದಸ್ಯತ್ವ 61,600ಕ್ಕೂ ಹೆಚ್ಚಾಗಿದೆ. ಇಡೀ ದೇಶದಲ್ಲೇ ಯಾವ ಜಿಲ್ಲೆಯಲ್ಲೂ ಇಷ್ಟೊಂದು ಸಂಖ್ಯೆಯಲ್ಲಿ ಸಿಪಿಐ(ಎಂ) ಸದಸ್ಯರಿಲ್ಲ. 2021 ಏಪ್ರಿಲ್‌ನಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಬಹುಮತದೊಂದಿಗೆ ಮರಳಿದ ಎಡ-ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರಕಾರ ಕೇರಳದಲ್ಲಿ ಆಡಳಿತದಲ್ಲಿದೆ. ಎಲ್‌ಡಿಎಫ್ ಸರ್ಕಾರದ ನೀತಿಗಳು ಮತ್ತು ಸಾಧನೆಗಳಿಗೆ ಜನರಿಂದ ಭಾರಿ ಅನುಮೋದನೆ ಸಿಕ್ಕಿದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ರಂಗಗಳಲ್ಲಿನ ಈ ನೀತಿಗಳು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ನೀತಿಗಳಿಗೆ ಪರ್ಯಾಯದ ಭಾಗವಾಗಿವೆ.

ಆದ್ದರಿಂದ, ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ರಾಷ್ಟ್ರೀಯ ಪರ್ಯಾಯವನ್ನು ಪ್ರಸ್ತುತ ಪಡಿಸುವಾಗ ಕೇರಳದಲ್ಲಿ ನಡೆಯುವ ಪಕ್ಷದ ಮಹಾಧಿವೇಶನವು ಎಲ್‌ಡಿಎಫ್ ಸರಕಾರದ ನೀತಿಗಳು ಮತ್ತು ಸಾಧನೆಯನ್ನು ಎತ್ತಿ ಹಿಡಿಯುವುದು ಸಹಜವೇ ಆಗಿದೆ.

ಸಿಪಿಐ(ಎಂ) ಮತ್ತು ಎಡ ಶಕ್ತಿಗಳು ಬಲಪಂಥೀಯ, ನವ-ಉದಾರವಾದಿ ಹಿಂದೂತ್ವ ಶಕ್ತಿಗಳ ವಿರುದ್ಧ ನಿರಂತರವಾಗಿ ಹೋರಾಡುವ ಶಕ್ತಿಗಳಾಗಿವೆ ಎನ್ನುವುದನ್ನು ಕಣ್ಣೂರು ಮಹಾಧಿವೇಶನ ತೋರಿಸಿ ಕೊಡಲಿದೆ. ಈ ಮಹಾಧಿವೇಶನವು ಎಲ್ಲ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಮುನ್ನಡೆಗೆ ದಾರಿ ತೋರಿಸಲಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ, ಒಕ್ಕೂಟವಾದ (ಫೆಡರಲಿಸಂ) ಮತ್ತು ಎಡ-ಜನತಾಂತ್ರಿಕ ಪರ್ಯಾಯಕ್ಕಾಗಿ ಒಗ್ಗಟ್ಟಿನ ಹೋರಾಟ ನಡೆಸಲು ದೇಶಕ್ಕೆ ಮಾರ್ಗದರ್ಶನ ನೀಡಲಿದೆ.

ಅನು: ವಿಶ್ವ

Leave a Reply

Your email address will not be published. Required fields are marked *