ರಾಷ್ಟ್ರೀಯ ಸೊತ್ತುಗಳ ಲೂಟಿಯ ನಗದೀಕರಣ ಪರಿಯೋಜನೆ ಎಂಬ ದೇಶ-ವಿರೋಧಿ ಹುನ್ನಾರ ಸಾಗದು- ಸಿಪಿಐ(ಎಂ) ಮಹಾಧಿವೇಶನದ ಘೋಷಣೆ

ಮೋದಿ ಸರಕಾರ ಪ್ರಕಟಿಸಿರುವ ಸಾರ್ವಜನಿಕ ಸೊತ್ತುಗಳ ನಗದೀಕರಣದ ಹೆಸರಿನಲ್ಲಿ ಜನರ ಹಣ ಮತ್ತು ದುಡಿಮೆಯಿಂದ ಕಟ್ಟಿರುವ ರಾಷ್ಟ್ರೀಯ ಸೊತ್ತುಗಳ ಲೂಟಿಯ ಹುನ್ನಾರ ನಡೆಸಿದೆ. ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ 23ನೇ ಮಹಾಧಿವೇಶನ ರಾಷ್ಟ್ರವಿರೋಧಿ ಮತ್ತು ಜನವಿರೋಧಿ ಯೋಜನೆಯಾದ “ರಾಷ್ಟ್ರೀಯ ಆಸ್ತಿ ನಗದೀಕರಣ ಪೈಪ್‌ಲೈನ್”ಗೆ ವಿರುದ್ಧವಾಗಿ ಸಜ್ಜುಗೊಳ್ಳಬೇಕು ಮತ್ತು ಪ್ರತಿರೋಧವನ್ನು ಕಟ್ಟಬೇಕು ಎಂದು ಜನಗಳಿಗೆ ಕರೆ ನೀಡಿದೆ. ರಾಷ್ಟ್ರೀಯ ಸೊತ್ತುಗಳ ಲೂಟಿಯ ಈ ದೇಶ-ವಿರೋಧಿ ಹುನ್ನಾರ ಸಾಗಲು ಬಿಡುವುದಿಲ್ಲ ಎಂದು ಮಹಾಧಿವೇಶನ ಸಾರಿ ಹೇಳಿದೆ.

ಮಹಾಧಿವೇಶನ ಎಪ್ರಿಲ್‍ 9ರಂದು ತಪನ್‍ ಸೆನ್‍ ಅವರು ಮಂಡಿಸಿದ ಮತ್ತು ಸಾಯಿಬಾಬು ಅವರು ಅನುಮೋದಿಸಿದ ಈ ಕುರಿತ ಒಂದು ವಿವರವಾದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಅದರ ಪೂರ್ಣಪಾಟವನ್ನು ಈ ಮುಂದೆ ಕೊಡಲಾಗಿದೆ:

ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ನಾಲ್ಕು ವರ್ಷಗಳ ರಾಷ್ಟ್ರೀಯ (ಆಸ್ತಿ) ನಗದೀಕರಣ ಪೈಪ್‌ಲೈನ್ (ಎನ್‌ಎಂಪಿ) ಎಂಬುದನ್ನು ಅನಾವರಣ ಮಾಡಿದೆ. ಇದು 6 ಲಕ್ಷ ಕೋಟಿ ರೂಪಾಯಿಗಳನ್ನು ಗಳಿಸುವ ಗುರಿಯನ್ನು ಹೊಂದಿದೆ. ಎನ್‌ಎಂಪಿ ಯ ಗುರಿ ಬಳಕೆಯಲ್ಲಿರುವ ದೇಶದ ಬೃಹತ್ ಮೂಲಸೌಕರ್ಯ ಆಸ್ತಿಗಳನ್ನು ಖಾಸಗಿ ಕಾರ್ಪೊರೇಟ್ ಕಂಪನಿಗಳು ಮತ್ತು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ದೊಡ್ಡ ವ್ಯಾಪಾರೀ ಗುಂಪುಗಳಿಗೆ ಹಸ್ತಾಂತರಿಸುವುದು. ಜನರ ಹಣ ಮತ್ತು ದುಡಿಮೆಯಿಂದ ಕಟ್ಟಿದ ಸೊತ್ತುಗಳನ್ನು  ಬಳಸಿಕೊಂಡು ಬಿಜೆಪಿ ಸರ್ಕಾರದ ಕಾರ್ಪೊರೇಟ್ ಬಂಟರಿಗೆ ಅಪಾರ ಹಣವನ್ನು ಸೂರೆ ಮಾಡಲು ಅವಕಾಶ ನೀಡಲಾಗುವುದು. ಅದೇ ಸಾಲಿನಲ್ಲಿ ಬಿಜೆಪಿ ನೇತೃತ್ವದ ಹಲವು ರಾಜ್ಯ ಸರ್ಕಾರಗಳು ಕೂಡ ಸರ್ಕಾರಿ ಸ್ವಾಮ್ಯದ ಆಸ್ತಿ ಮತ್ತು ಭೂಮಿಯನ್ನು ಖಾಸಗಿ ಕಾರ್ಪೊರೇಟ್‌ಗಳಿಗೆ ಉಡುಗೊರೆಯಾಗಿ ನೀಡುವ ಕಸರತ್ತು ಆರಂಭಿಸಿವೆ.

ಯಾವುದೇ ರೀತಿಯಲ್ಲಾದರೂ, ಎಷ್ಟೇ ಬೆಲೆ ತೆತ್ತಾದರೂ ಖಾಸಗೀಕರಿಸುವುದು ಈ ಸರ್ಕಾರದ ಹೆಗ್ಗುರುತು. ಇದು ಈಗ ಭವಿಷ್ಯದ ನಿರೀಕ್ಷಿತ ಆದಾಯಕ್ಕಾಗಿ ಮುಂಗಡ ಪಾವತಿಗಾಗಿ ಬೃಹತ್ ಸರ್ಕಾರಿ ಸ್ವಾಮ್ಯದ ಮೂಲಸೌಕರ್ಯ ಸೊತ್ತುಗಳನ್ನು ಹಸ್ತಾಂತರಿಸಲು ಪ್ರಯತ್ನಿಸುತ್ತಿದೆ. ಇದು 30-35 ವರ್ಷಗಳ ಅವಧಿಗೆ ಈ ಬೃಹತ್ ಮೂಲಸೌಕರ್ಯ ಸ್ವತ್ತುಗಳನ್ನು ನಿರ್ವಹಿಸುವ ಹಕ್ಕನ್ನು ಗುತ್ತೇದಾರಿಗಳಿಗೆ  ಹಸ್ತಾಂತರಿಸಲು ಹೊರಟಿರುವ ಈ ತಥಾಕಥಿತ  ಎನ್‍ಎಂಪಿಯ  ದುಷ್ಟ ಹುನ್ನಾರವಾಗಿದೆ. ಇದು ಈ ಮೂಲಸೌಕರ್ಯ ಸೇವೆಗಳನ್ನು ಬಳಸುವ ಇಡೀ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರ ಫಲಿತಾಂಶವಾಗಿ ಉದ್ಯೋಗ ನಷ್ಟ ಮತ್ತು ನಿರುದ್ಯೋಗದ ಈಗಾಗಲೇ ಆತಂಕಕಾರಿಯಾದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ.

ನಗದೀಕರಣಕ್ಕಾಗಿ ಗುರುತಿಸಲಾದ ಮೂಲಸೌಕರ್ಯ ಸೊತ್ತುಗಳಲ್ಲಿ 400 ರೈಲು ನಿಲ್ದಾಣಗಳು, 90 ಪ್ರಯಾಣಿಕ ರೈಲುಗಳು, 1400 ಕಿ.ಮೀ. ರೈಲ್ವೆ ಹಳಿಗಳು, 741 ಕಿ.ಮೀ. ಕೊಂಕಣ ರೈಲ್ವೆ, 15 ರೈಲ್ವೆ ಕ್ರೀಡಾಂಗಣಗಳು ಮತ್ತು ಆಯ್ದ ರೈಲ್ವೇ ಕಾಲೋನಿಗಳು, 265 ರೈಲ್ವೇ ಗೂಡ್ಸ್ ಶೆಡ್‌ಗಳು ಮತ್ತು 4 ಹಿಲ್ ರೈಲ್ವೇಗಳು ಸೇರಿವೆ – ಎಲ್ಲವೂ ಕೇವಲ 1.5 ಲಕ್ಷ ಕೋಟಿ ರೂ.ಗೆ;  ಸಾರ್ವಜನಿಕ ಖಜಾನೆಯಿಂದ ಅಪಾರ ಹೂಡಿಕೆಯಿಂದ ಆಧುನೀಕರಿಸಿದ 25 ವಿಮಾನ ನಿಲ್ದಾಣಗಳನ್ನು ಕೇವಲ ರೂ 20,782 ಕೋಟಿಗೆ ; ಬೃಹತ್ ಕಲ್ಲಿದ್ದಲು ನಿಕ್ಷೇಪಗಳೊಂದಿಗೆ 160 ಕಲ್ಲಿದ್ದಲು ಗಣಿಗಾರಿಕೆ ಆಸ್ತಿಗಳು ಕೇವಲ 28,747 ಕೋಟಿ ರೂ.ಗೆ: 3930 ಕಿ.ಮೀ ಉದ್ದದ ಪೆಟ್ರೋಲಿಯಂ ಪೈಪ್ ಲೈನ್ – ಜುಜುಬಿ ರೂ 22503 ಕೋಟಿಗೆ; ಸಂಚಾರಯೋಗ್ಯ ಜಲಮಾರ್ಗಗಳ ಬೃಹತ್ ಜಾಲವನ್ನು ಹೊಂದಿರುವ 9 ಪ್ರಮುಖ ಬಂದರುಗಳಲ್ಲಿ 31 ಯೋಜನೆಗಳು – ಎಲ್ಲಾ 12,828 ಕೋಟಿ ರೂ.ಗೆ; ಭಾರತೀಯ ಆಹಾರ ನಿಗಮ ಮತ್ತು ಕೇಂದ್ರ ಉಗ್ರಾಣ ನಿಗಮದ ಒಟ್ಟು 210 ಲಕ್ಷ ಮೆಟ್ರಿಕ್‌ ಟನ್‌ ಸಂಗ್ರಹ ಸಾಮರ್ಥ್ಯದ ಗೋದಾಮುಗಳು – ಕೇವಲ 28,900 ಕೋಟಿ ರೂ.ಗಳಿಗೆ- ಇವು “ಆಸ್ತಿ ನಗದೀಕರಣ”ದ ಹೆಸರಿನಲ್ಲಿ ರಾಷ್ಟ್ರೀಯ ಖಜಾನೆಯನ್ನು ಹಗಲು ದರೋಡೆ ಮಾಡುವ ಕೆಲವು ಉದಾಹರಣೆಗಳು. ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಅಡಿಯಲ್ಲಿ 28,608 ಸರ್ಕ್ಯೂಟ್ ಕಿಲೋಮೀಟರ್ ವಿದ್ಯುತ್ ಗ್ರಿಡ್ ಮತ್ತು ಸುಮಾರು 30,000 ಕಿಲೋಮೀಟರ್ ಹೆದ್ದಾರಿಗಳನ್ನು ಏಕಸ್ವಾಮ್ಯ ಕಾರ್ಯಾಚರಣೆಯ ಹಕ್ಕುಗಳೊಂದಿಗೆ ದೀರ್ಘಾವಧಿಗೆ ಖಾಸಗಿ ಕಾರ್ಪೊರೇಟ್‌ಗೆ ಹಸ್ತಾಂತರಿಸಲಾಗುತ್ತಿದೆ. ಎನ್‍ಎಂಪಿ ಜೊತೆಗೆ, ಸರ್ಕಾರವು ಈಗ ಭೂಮಿ ನಗದೀಕರಣ ಕಾರ್ಯಕ್ರಮವನ್ನು ಹೊರತಂದಿದೆ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳು, ರೈಲ್ವೆಗಳು, ರಕ್ಷಣಾ ವಲಯ, ಬಿಎಸ್‍ಎನ್‍ಎಲ್‍ ಇತ್ಯಾದಿಗಳ ಬೃಹತ್ ಭೂ ಆಸ್ತಿಗಳನ್ನು ಅಗ್ಗದಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ‘ರಾಷ್ಟ್ರೀಯ ಭೂಮಿ ನಗದೀಕರಣ ನಿಗಮ’(ನ್ಯಾಷನಲ್ ಲ್ಯಾಂಡ್ ಮಾನಿಟೈಸೇಶನ್ ಕಾರ್ಪೊರೇಷನ್) ಎಂಬ ಸಾರ್ವಜನಿಕ ವಲಯದ ಕಂಪನಿಯನ್ನು ಸ್ಥಾಪಿಸಲಾಗಿದೆ. ಇದಷ್ಟೆ ಅಲ್ಲ – ಈ ಎನ್‍ಎಂಪಿ ಪರಿಯೋಜನೆ ಖಾಸಗಿ ಕಾರ್ಪೊರೇಟ್‌ಗಳಿಗೆ ದೀರ್ಘಾವಧಿಯ ಏಕಸ್ವಾಮ್ಯ ಹಕ್ಕುಗಳನ್ನು ನೀಡಿ ಮತ್ತಷ್ಟು ಮೂಲರಚನೆಯ ಸೊತ್ತುಗಳು ಹರಿದು ಹೋಗುವಂತೆ ಮಾಡುವ ಯೋಚನೆಯನ್ನೂ ಇಟ್ಟುಕೊಂಡಿದೆ.

ಸಾರ್ವಜನಿಕ ವಲಯದ ಮತ್ತು ಅದರ ಆಧಾರದ ಮೇಲೆ ರಾಷ್ಟ್ರೀಯ ಆರ್ಥಿಕತೆಯ ಸ್ವಾವಲಂಬಿ ಅಭಿವೃದ್ಧಿಗೆ ಐತಿಹಾಸಿಕ ವಿರೋಧ ಹೊಂದಿರುವ ಬಿಜೆಪಿಯು ಮೂಲಸೌಕರ್ಯ, ಕೈಗಾರಿಕೆಗಳು ಮತ್ತು ಸಾರ್ವಜನಿಕ ಉಪಯುಕ್ತತೆ ಸೇವೆಗಳು ಸೇರಿದಂತೆ ಸಮಸ್ತ ಸಾರ್ವಜನಿಕ ವಲಯವನ್ನು ಯಾವುದೇ ವಿಧಾನದಿಂದಲಾದರೂ  ಮತ್ತು ಅತ್ಯಂತ ಕಡಿಮೆ ಬೆಲೆಗಳಲ್ಲಿ  ಖಾಸಗೀಕರಿಸಲು ಹೊರಟಿದೆ. ರಾಷ್ಟ್ರೀಯ ಅರ್ಥವ್ಯವಸ್ಥೆ  ಮತ್ತು ನಮ್ಮ ಜನರ ಮೇಲೆ ಈ ಕ್ರಮಗಳ ವಿನಾಶಕಾರಿ ಪರಿಣಾಮದ ಬಗ್ಗೆ ಅದಕ್ಕೆ ಯಾವುದೇ ಕಾಳಜಿಯಿಲ್ಲ. ನವ ಉದಾರೀಕರಣ ನೀತಿಯ  ಸುಮಾರು ಮೂವತ್ತು ವರ್ಷಗಳ ಆಳ್ವಿಕೆಗಳಲ್ಲಿ, ಸಾರ್ವಜನಿಕ ಹೂಡಿಕೆಗಳ ಹಿಂಪಡೆತದಲ್ಲಿ ಬಿಜೆಪಿ ನೇತೃತ್ವದ ಆಳ್ವಿಕೆಯದ್ದೇ ಸಿಂಹಪಾಲು.

ಸೊತ್ತುಗಳ “ನಗದೀಕರಣ”ದ ಹೆಸರಿನಲ್ಲಿ ಜನತೆಯ ಸೊತ್ತುಗಳನ್ನು ಸ್ವದೇಶಿ ಮತ್ತು ವಿದೇಶಿ ದೊಡ್ಡ ಉದ್ಯಮಿಗಳಿಗೆ ಲೂಟಿ ಮತ್ತು  ಹಸ್ತಾಂತರಣದ ವಿರುದ್ಧ ನಿರ್ಣಾಯಕ ಮತ್ತು ದೃಢವಾದ ಹೋರಾಟಗಳನ್ನು ಬೆಳೆಸಬೇಕಾದ ಕಾರ್ಯಭಾರ ಪಕ್ಷ ಮತ್ತು ಇಡೀ ಕಾರ್ಮಿಕ ವರ್ಗದ ಚಳುವಳಿಯ ಮೇಲಿದೆ.

sai babu1ಎನ್‌ಎಂಪಿ ಯಲ್ಲಿ ಆಸ್ತಿಗಳನ್ನು ಭೋಗ್ಯಕ್ಕೆಮಾತ್ರ ಕೊಡಲಾಗುತ್ತಿದೆ , ಅವುಗಳ ಮಾರಾಟ ಮಾಡುತ್ತಿಲ್ಲ  ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಇದೊಂದು ಸಂಪೂರ್ಣವಾಗಿ ತಪ್ಪುದಾರಿಗೆಳೆಯುವ ದಾವೆ ತಮಗೆ ಭೋಗ್ಯಕ್ಕೆ ನೀಡಲಾದ ಸೊತ್ತುಗಳನ್ನು ಬಳಸಿಕೊಳ್ಳುವ . ದೊಡ್ಡ ವ್ಯಾಪಾರ ಸಂಸ್ಥೆಗಳು, ತಮ್ಮ ಗ್ರಾಹಕರ ಸುಲಿಗೆ  ಮತ್ತು ಇತರ ವಿಧಾನಗಳ ಮೂಲಕ, ಸರ್ಕಾರಕ್ಕೆ ಪಾವತಿಸುವ ಜುಜುಬಿ ಭೋಗ್ಯದ ಹಣದ ಹಲವು ಪಟ್ಟು ದೊಡ್ಡದಾದ ಅಪಾರ ಹಣವನ್ನು  ಗಳಿಸುತ್ತವೆ. ಭೋಗ್ಯದ  ಅವಧಿಯ ಅಂತ್ಯದಲ್ಲಿ ಆ ಸೊತ್ತುಗಳನ್ನು ಭೋಗ್ಯಕ್ಕೆ ಕೊಟ್ಟಾಗ ಇದ್ದ ಸ್ಥಿತಿಯಲ್ಲೇ ಹಿಂದಿರುಗಿಸಲಾಗುತ್ತದೆ ಅಥವ ಸರಕಾರ ಹಿಂದಕ್ಕೆ ಪಡೆಯುತ್ತದೆ ಎಂಬುದರ ಬಗ್ಗೆ ಖಾತ್ರಿಯೇನೂ ಇಲ್ಲ. ಈ ಸೊತ್ತುಗಳನ್ನು ಜನರಿಗೆ ಅನುಕೂಲವಾಗುವಂತೆ ಸರ್ಕಾರದಿಂದಲೇ ಏಕೆ ನಿರ್ವಹಿಸಲಾಗುವುದಿಲ್ಲ ಎಂಬ ಸರಳ ಪ್ರಶ್ನೆ ಈ ಇಡೀ ಕಸರತ್ತಿನಲ್ಲಿ ಏಳುತ್ತದೆ.

ಸಿಪಿಐ(ಎಂ)ನ 23ನೇ ಮಹಾಧಿವೇಶನವು ಕೇಂದ್ರ ಸರ್ಕಾರದ ರಾಷ್ಟ್ರವಿರೋಧಿ ಮತ್ತು ಜನವಿರೋಧಿ ಯೋಜನೆಯಾದ “ರಾಷ್ಟ್ರೀಯ ಆಸ್ತಿ ನಗದೀಕರಣ ಪೈಪ್‌ಲೈನ್”ಗೆ ವಿರುದ್ಧವಾಗಿ  ಸಜ್ಜುಗೊಳ್ಳಬೇಕು ಮತ್ತು ಪ್ರತಿರೋಧವನ್ನು ಕಟ್ಟಬೇಕು ಎಂದು ನಮ್ಮ ದೇಶದ ಜನಗಳಿಗೆ ಕರೆ ಕೊಡುತ್ತದೆ. ರಾಷ್ಟ್ರೀಯ ಸೊತ್ತುಗಳ ಲೂಟಿಯ ಈ ದೇಶ-ವಿರೋಧಿ ಹುನ್ನಾರ ಸಾಗಲು ಬಿಡುವುದಿಲ್ಲ  ಎಂದು ಮಹಾಧಿವೇಶನ ಸಾರಿ ಹೇಳುತ್ತದೆ.

 

Leave a Reply

Your email address will not be published. Required fields are marked *