ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆಯ ತರಾತುರಿ ಏಕೆ?

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ನಿರ್ಧರಿಸಿದೆ. ಜನತೆಯ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಸಂಚಕಾರ ತರುವ ಈ ಮಸೂದೆ ಸಂವಿಧಾನ ವಿರೋಧಿಯೂ ಆಗಿದೆ. ಇಂತಹ ಮಸೂದೆಯನ್ನು ಅಂಗೀಕರಿಸಬಾರದೆಂದು ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು, ಪ್ರಮುಖ ಚಿಂತಕರು ತೀವ್ರವಾಗಿ ವಿರೋದಿಸಿದ್ದನ್ನು ಸರಕಾರ ಪರಿಗಣಿಸಿಯೇ ಇಲ್ಲ. ಮೇಲಾಗಿ ಶಾಸನ ಸಭೆಯಲ್ಲಿ ಅಂಗೀಕಾರಕ್ಕಿಡದೇ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ತರಾತುರಿಯಲ್ಲಿ ಹೊರಡುವಂತಹ ತುರ್ತಾದರೂ ಏನಿತ್ತು? ಎನ್ನುವುದು ಪ್ರಶ್ನಾರ್ಹ.

ಸ್ವತಂತ್ರ ಭಾರತದ ಸಂವಿಧಾನದ 25ನೇ ಅನುಚ್ಛೇದವು ದೇಶದ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಧಾರ್ಮಿಕ ಸ್ವಾತಂತ್ರ್ಯ ಎಂದರೆ ದೇಶದ ಯಾವುದೇ ಪ್ರಜೆಯು ತನಗೆ ಇಷ್ಟ ಬಂದ ಮತಧರ್ಮವನ್ನು ಅನುಸರಿಸಬಹುದು, ಯಾವುದೇ ಧರ್ಮದ ವಿಚಾರಗಳನ್ನು ಪ್ರಚಾರ ಮಾಡಬಹುದು. ಹಾಗೆಯೇ ಯಾವುದೇ ವ್ಯಕ್ತಿಗೆ ಯಾವುದೇ ಮತಧರ್ಮವನ್ನು ಅನುಸರಿಸುವ, ಇಲ್ಲವೆ ಅನುಸರಿಸದೇ ಇರುವ ಸ್ವಾತಂತ್ರ್ಯ ಸಹ ಇರುತ್ತದೆ. ಇದು ಧಾರ್ಮಿಕ ಸ್ವಾತಂತ್ರ್ಯವಾಗಿದ್ದು ಈ ಧಾರ್ಮಿಕ ಹಕ್ಕು ದೇಶದ ಪ್ರತಿಪ್ರಜೆಯ ಮೂಲಭೂತ ಹಕ್ಕಾಗಿದೆ.

ಇದನ್ನು ಓದಿ: ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವಂತೆ ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಣಯ

ಆದರೆ ಕರ್ನಾಟಕ ಸರಕಾರ ತಂದಿರುವ ಕಾಯ್ದೆಯು ಜನರ ಸಂವಿಧಾನಬದ್ಧ ಹಕ್ಕನ್ನು ಕಿತ್ತುಕೊಳ್ಳುವ ಒಂದು ದೌರ್ಜನ್ಯಕಾರಿ, ಸರ್ವಾಧಿಕಾರದ ಕ್ರಮವಾಗಿದೆ. ಬಲವಂತ, ಅನುಚಿತ ಪ್ರಭಾವ, ಒತ್ತಾಯ, ಆಮಿಷಗಳ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನಗಳ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಆಗುವುದನ್ನು ತಡೆಯುವ ಉದ್ದೇಶದಿಂದ ಈ ಕಾಯ್ದೆಯನ್ನು ತರಲಾಗಿದೆ ಎಂದು ಸರಕಾರವೇನೋ ಹೇಳಿಕೊಂಡಿದೆ. ಆದರೆ ಈಗಾಗಲೇ ಸಂವಿಧಾನದಲ್ಲಿ ಬಲವಂತದ ಮತಾಂತರವನ್ನು ತಡೆಯುವ ಮತ್ತು ಶಿಕ್ಷಿಸುವ ಅವಕಾಶ ಇರುವಾಗ ಮತ್ತೊಂದು ಕಾಯ್ದೆಯನ್ನು ತರುವುದರ ಔಚಿತ್ಯವಾದರೂ ಏನಿದೆ?

ಭಾರತ ಸಮಾನತೆ-ಸಾಮಾಜಿಕ ನ್ಯಾಯಗಳೆಂಬ ಉದಾತ್ತ ಮಾನವೀಯ ತತ್ವಗಳ ಆಧಾರದಲ್ಲಿ ಒಂದು ಪ್ರಜಾಸತ್ತಾತ್ಮಕ-ಧರ್ಮನಿರಪೇಕ್ಷ ರಾಷ್ಟ್ರವಾಗಿದೆ ಎಂದು ಘೋಷಿಸಿಕೊಂಡಿದೆ. ಇಂತಹ ದೇಶವನ್ನು ಜಾತಿ ತಾರತಮ್ಯ ಮತ್ತು ಅಸಮಾನತೆಯ ಆಧಾರದ ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಯಂತ್ರಣದಲ್ಲಿರುವ ಬಿಜೆಪಿ ಪಕ್ಷವು ಇಂತಹ ಪ್ರಗತಿ ವಿರೋಧಿ ಕಾಯ್ದೆಯೊಂದನ್ನು ತಂದಿರುವುದನ್ನು ಒಪ್ಪಲು ಸಾಧ್ಯವಿಲ್ಲ.

ಬಲಾತ್ಕಾರ ಮತ್ತು ಆಮಿಷದ ಮತಾಂತರವನ್ನು ತಡೆಯುವ ಉದ್ದೇಶದ್ದು ಎಂದು ಹೇಳಲಾದ ಈ ಕಾಯ್ದೆಯು ಹಲವು ಕರಾಳ ಸ್ವರೂಪದ ಅಘಾತಕಾರಿ ಕಟ್ಟಳೆಗಳನ್ನು ನಿಯಮಗಳನ್ನು ಒಳಗೊಂಡಿದೆ. ಅದು ನಮ್ಮ ಸಮಾಜದ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಯಾವುದೇ ಧಾರ್ಮಿಕ ಸಂಸ್ಥೆಯು ನಡೆಸುವ ಶಾಲೆ ಅಥವಾ ಕಾಲೇಜಿನಲ್ಲಿ ಉಚಿತ ಶಿಕ್ಷಣ, ಉದ್ಯೋಗ ನೀಡುವುದನ್ನು ಸಹ ಮತಾಂತರದ ಉದ್ದೇಶದ ಆಮಿಷಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಶತ ಶತಮಾನಗಳ ಕಾಲ ಅಸ್ಪೃಶ್ಯರು ಮತ್ತು ಶೂದ್ರರಿಗೆ ಅಕ್ಷರ ಜ್ಞಾನವನ್ನು ವಂಚಿಸಿದ ಭಾರತದಲ್ಲಿ ಮಹಿಳೆಯರು ಸೇರಿದಂತೆ ಈ ಶೋಷಿತ ಸಮುದಾಯಗಳಿಗೆ ಭಾರತದ ಬಹಳಷ್ಟು ಭಾಗಗಳಲ್ಲಿ ಅಕ್ಷರದ ಬೆಳಕು ಸಿಕ್ಕಿದ್ದೇ ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಗಳ ಶಾಲಾ ಕಾಲೇಜುಗಳ ಮೂಲಕ. ಈಗಲೂ ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ನ್ಯಾಯದ ತತ್ವದ ಆಧಾರದಲ್ಲಿ ಈ ಶಿಕ್ಷಣ ಸೇವೆಯನ್ನು ಮುಂದುವರಿಸಿವೆ ಎಂಬ ಅಂಶವನ್ನು ಈ ಕಾಯ್ದೆ ಸಂಪೂರ್ಣವಾಗಿ ಮರೆಮಾಚಿದೆ.

ಇದನ್ನು ಓದಿ: ಸಂವಿಧಾನ ವಿರೋಧಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ವಿಧೇಯಕ ವಾಪಾಸ್ಸಾತಿಗಾಗಿ ರಾಜ್ಯವ್ಯಾಪಿ ಪ್ರತಿಭಟನೆ

ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸಮುದಾಯದವರನ್ನು ಮತಾಂತರ ಮಾಡುವವರಿಗೆ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಶಿಕ್ಷೆ ಮತ್ತು ದಂಡಗಳಂತಹ ಕರಾಳ ಶಿಕ್ಷೆಯನ್ನು ಕಾಯ್ದೆಯಲ್ಲಿ ನಿಗದಿ ಮಾಡಲಾಗಿದೆ. ದೇಶವು ಸ್ವಾತಂತ್ರ್ಯ ಪಡೆದ ಮುಕ್ಕಾಲು ಶತಮಾನದ ನಂತರವೂ ಭಾರತದಲ್ಲಿ ದಲಿತರಿಗೆ ಅಸ್ಪೃಶ್ಯತೆ ಮತ್ತು ಅಪಮಾನಗಳಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಜಾತಿ ದೌರ್ಜನ್ಯಗಳಿಗೆ ತಡೆ ಬಿದ್ದಿಲ್ಲ. ಮಹಿಳೆಯರು ಮತ್ತು ಶೋಷಿತ ಸಮುದಾಯಗಳಿಗೆ ಘನತೆಯ ಬದುಕಿನ ಅವಕಾಶ ದೊರೆತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಘನತೆಯ ಬದುಕನ್ನು ಬಯಸಿ ಮತ್ತೊಂದು ಮತ ಧರ್ಮವನ್ನು ಅಪ್ಪಿಕೊಳ್ಳಲು ಬಯಸುವ ಜನರನ್ನು ಇರುವ ಧರ್ಮದಲ್ಲೇ ಕಟ್ಟಿ ಹಾಕಬೇಕೆನ್ನುವ ಕಾಯ್ದೆಯು ಮತಾಂಧ ಸರ್ವಾಧಿಕಾರಿ ಧೋರಣೆಯನ್ನು ಕಾನೂನು ಬದ್ಧಗೊಳಿಸುವಂತಿದೆ. ಜೊತೆಗೆ ಮತಾಂತರ ನಡೆಸಲಾಗುತ್ತಿದೆ ಎಂಬ ಹೆಸರಿನಲ್ಲಿ ಸಮಾಜದಲ್ಲಿ ಗೂಂಡಾಗಿರಿ ನಡೆಸುತ್ತಿರುವ ಸಂಘ ಪರಿವಾರದ ಕಾರ್ಯಕರ್ತರ ಪುಂಡಾಟಿಕೆಗಳಿಗೆ ಇನ್ನಷ್ಟು ಕುಮ್ಮಕ್ಕು ಕೊಡುವಂತಿದೆ.

ಯಾವುದೇ ವ್ಯಕ್ತಿಯು ಮದುವೆಯ ನಂತರ ಮತ್ತು ಮದುವೆಯ ಮುಂಚೆ ಸಹ ಮದುವೆಯ ಕಾರಣಕ್ಕಾಗಿ ಮತಾಂತರ ಆಗುವುದನ್ನು ಸಹ ಈ ಕಾಯ್ದೆಯು ನಿರ್ಬಂಧಿಸುತ್ತದೆ. ಮದುವೆ ಮತ್ತು ಮತಧರ್ಮ ಪಾಲನೆಯು ಯಾವುದೇ ವ್ಯಕ್ತಿಯ ವೈಯುಕ್ತಿಕ ಹಕ್ಕಾಗಿದ್ದು ಆಳುವ ಸರಕಾರಗಳಿಗೆ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಕೊಡುವುದು ಎಂದರೆ ಸಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೂಲತತ್ವಗಳನ್ನು ಮಣ್ಣುಪಾಲು ಮಾಡುವುದು ಎಂದೇ ಆಗುತ್ತದೆ. ವಯಸ್ಕ ಯುವಕ-ಯುವತಿಯರು ತಮ್ಮ ಆಯ್ಕೆಯಂತೆ ಮದುವೆ ಆಗುವುದನ್ನು ಮತ್ತು ಅಂತರ್ ಧರ್ಮೀಯ ಪ್ರೇಮ ವಿವಾಹಗಳಾಗುವುದನ್ನು ತಡೆಯುವ ದುರುದ್ದೇಶ ಈ ಕಾಯ್ದೆಯಲ್ಲಿ ಅಡಗಿದೆ. ಇದಲ್ಲದೇ ಮತಾಂತರದ ನೆಪದಲ್ಲಿ ಈ ವಿಷಯಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ಸಹ ಮತ್ತೊಬ್ಬರ ಖಾಸಗಿ ವಿಷಯಗಳಲ್ಲಿ ತಲೆಹಾಕಲು ಮತ್ತು ದೂರುಕೊಡಲು ಈ ಕಾಯ್ದೆಯು ಅವಕಾಶ ಮಾಡಿಕೊಡುತ್ತದೆ. ಮತಾಂತರದ ಆರೋಪ ಹೊರಿಸಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ, ಯಾವುದೇ ಅಲ್ಪಸಂಖ್ಯಾತ ಸಂಘ-ಸಂಸ್ಥೆಗಳಿಗೆ ಕಿರುಕುಳ ನೀಡಲು ಮತ್ತು ಸರಕಾರದ ಅನುದಾನವನ್ನು ತಡೆಹಿಡಿಯಲು ಬೇಕಾದಂತೆ ಕಾಯ್ದೆಯಲ್ಲಿ ಅವಕಾಶವನ್ನು ಸೃಷ್ಟಿಸಿಕೊಳ್ಳಲಾಗಿದೆ.

ಇದನ್ನು ಓದಿ: ಅಶಾಂತಿ ಉಂಟು ಮಾಡಲು, ವಂಚಕ ಜಾತಿಪದ್ಧತಿಯನ್ನು ಮುಂದುವರೆಸಲು, ಮತಾಂಧ ಹಾಗೂ ಜಾತಿವಾದಿ ಪುಂಡಾಟಿಕೆಗೆ ನೆರವಾಗುವ ಸಂವಿಧಾನ ವಿರೋಧಿ ದುಷ್ಕೃತ್ಯ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ವಿಧೇಯಕ– ಸಿಪಿಐ(ಎಂ)

ದುರುದ್ದೇಶಪೂರಿತ ಮತಾಂತರ ಮಾಡಲಾಗಿದೆ ಎಂದು ಯಾರ ಮೇಲಾದರೂ ಆರೋಪಿಸಿದರೆ ಅದನ್ನು ಸಾಬೀತು ಮಾಡುವುದು ಆರೋಪ ಮಾಡಿದವರ ಮತ್ತು ಸರಕಾರದ ಹೊಣೆಯಾಗಬೇಕು. ಇದು ಸಹಜ ನ್ಯಾಯ. ಆದರೆ ಈ ಕಾಯ್ದೆಯು ಆರೋಪಕ್ಕೆ ಗುರಿಯಾದವರು ತಾವು ದುರುದ್ದೇಶದ ಮತಾಂತರ ಮಾಡಿಲ್ಲ ಎಂದು ಸಾಬೀತು ಪಡಿಸಬೇಕು ಎಂದು ಈ ಕಾಯ್ದೆ ಹೇಳುತ್ತಿದೆ. ಅಲ್ಲದೇ ಜಿಲ್ಲಾಧಿಕಾರಿಗಳ ಪರವಾನಗಿ ಪಡೆಯಬೇಕು ಎನ್ನುವುದೂ ಅಸಂಬದ್ಧ, ಅಸಮರ್ಥನೀಯ.

ರಾಜ್ಯ ಮತ್ತು ಕೇಂದ್ರ ಸರಕಾರಗಳು ಜನರ ಗಮನವನ್ನು ಆಳುವ ಸರಕಾರಗಳ ವೈಫಲ್ಯಗಳ ಕಡೆಯಿಂದ ಬೇರೆಡೆಗೆ ಸೆಳೆದು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿವೆ. ಇಂತಹ ಪಿತೂರಿಗಳ ಭಾಗವಾಗಿ `ಮತಾಂತರ’, `ಲವ್ ಜಿಹಾದ್’ ಮುಂತಾದ ಹೆಸರಿನಲ್ಲಿ ಜನರ ಒಗ್ಗಟ್ಟನ್ನು ಮುರಿಯುವಂತಹ ಉದ್ದೇಶದಿಂದಲೇ ಬಲವಂತದ ಮತಾಂತರ ನಿಷೇಧದ ಹೆಸರಿನ ಈ ಕಾಯ್ದೆಯನ್ನು ತರಲಾಗಿದೆ ಎಂಬುದು ನಿಚ್ಚಳ.

ಹುಟ್ಟಿನಿಂದ ಬರುವ ಮತಧರ್ಮವು ಯಾವುದೇ ವ್ಯಕ್ತಿಯ ಸ್ವಂತ ಆಯ್ಕೆಯಲ್ಲ. ವ್ಯಕ್ತಿಗಳು ಬೆಳೆದು ವಯಸ್ಕರರಾದಾಗ ತಮಗೆ ಸರಿ ಕಂಡ ಮತಧರ್ಮವನ್ನು ಆರಿಸಿಕೊಳ್ಳುವ ಹಕ್ಕು ಅಥವಾ ಯಾವುದೇ ಮತಧರ್ಮವನ್ನು ಅನುಸರಿಸದಿರುವ ಹಕ್ಕು ಯಾವುದೇ ವ್ಯಕ್ತಿಗೆ ಇದ್ದೇ ಇದೆ. ಎಲ್ಲ ಆಧುನಿಕ ಪ್ರಜಾಪ್ರಭುತ್ವ ರಾಷ್ಟ್ರಗಳೂ ಮೂಲಭೂತ ಈ ಮಾನವ ಹಕ್ಕನ್ನು ಮಾನ್ಯ ಮಾಡಿವೆ ಮತ್ತು ಮಾನ್ಯ ಮಾಡಬೇಕಾಗುತ್ತದೆ. ಅಲ್ಲದೇ ಯಾವುದೇ ಒಂದು ಧರ್ಮದಿಂದ ಜನರು ಮತ್ತೊಂದು ಧರ್ಮಕ್ಕೆ ಬದಲಾಗುತ್ತಾರೆ ಎಂದಾದರೆ ಆ ಧರ್ಮದ ಧಾರ್ಮಿಕ ಮುಖಂಡರು ಮತ್ತು ಧಾರ್ಮಿಕ ಪ್ರತಿಪಾದಕರು ತಮ್ಮ ಮತ ಧರ್ಮದಲ್ಲಿರುವ ದೋಷ, ಸಮಸ್ಯೆಗಳ ಕಡೆಗೆ ಗಮನ ನೀಡಿ ಅವುಗಳನ್ನು ನಿವಾರಿಸಬೇಕು. ಧಾರ್ಮಿಕ ಸುಧಾರಣೆಗಳನ್ನು ತಂದು ಜನರ ವಿಶ್ವಾಸವನ್ನು ಗಳಿಸಿಕೊಳ್ಳಬೇಕೆ ಹೊರತು ಸರ್ವಾಧಿಕಾರಿ ಕಾನೂನುಗಳ ಮೂಲಕ ಅದನ್ನು ತರುವುದು ನ್ಯಾಯವಲ್ಲ.

ಆದ್ದರಿಂದ ಸರಕಾರ ಈ ಮಸೂದೆಯನ್ನು ರದ್ದುಗೊಳಿಸಬೇಕು. ಸಂವಿಧಾನ ವಿರೋಧಿ ಮಸೂದೆಗೆ ರಾಜ್ಯಪಾಲರು ಅಂಗೀಕಾರ ನೀಡದೇ ತಿರಸ್ಕರಿಸಬೇಕು. ರಾಜ್ಯದಲ್ಲಿ ಮತೀಯ ದ್ವೇಷದ ದಳ್ಳುರಿ ಹಚ್ಚಿರುವ ಸರಕಾರ ಮತ್ತು ಸಂಘ ಪರಿವಾರ ಈ ಕಾಯ್ದೆ ಮೂಲಕ ಶಾಂತಿ, ಸಾಮರಸ್ಯವನ್ನು ಕದಡುವ ಸಾಧನವಾಗಬಾರದು.

ಈ ಕಾಯ್ದೆ ವಿಧಾನಪರಿಷತ್ ನಲ್ಲಿ ಅನುಮೋದನೆ ಪಡೆಯಬೇಕಿತ್ತು. ಜೆಡಿಎಸ್ ಕಾಯ್ದೆಯನ್ನು ವಿರೋಧಿಸಿದ್ದರಿಂದ ಬಹುಮತ ಸಿಗದೇ ಹೋಗುವ ಅನುಮಾನ ಸರ್ಕಾರಕ್ಕೆ ಇತ್ತು. ಈ ಹಿನ್ನೆಲೆಯಲ್ಲಿಯೂ ಸರ್ಕಾರದ ಕ್ರಮ ಅನೈತಿಕ ಅಡ್ಡಹಾದಿ ಹಿಡಿದದ್ದೇ ಆಗಿದೆ.

Leave a Reply

Your email address will not be published. Required fields are marked *