ಮೇ 25-31: ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಅಖಿಲ ಭಾರತ ಪ್ರತಿಭಟನೆ – ಎಡಪಕ್ಷಗಳ ಕರೆ

ಅವ್ಯಾಹತವಾಗಿ ನೆಗೆಯುತ್ತಿರುವ ಬೆಲೆ ಏರಿಕೆಯು ಜನರ ಮೇಲೆ ಹಿಂದೆಂದೂ ಕಾಣದ ಹೊರೆಯನ್ನು ಹೇರುತ್ತಿದೆ. ಕೋಟಿಗಟ್ಟಲೆ ಜನರು ನರಳುತ್ತಿದ್ದಾರೆ ಮತ್ತು ಹಸಿವಿನ ಸಂಕಟದಿಂದ ಕಡು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಅಭೂತಪೂರ್ವ ಮತ್ತು ಹೆಚ್ಚುತ್ತಿರುವ ನಿರುದ್ಯೋಗದ ಮೇಲೆ ಬರುತ್ತಿರುವ ಇದು ಜನರ ಸಂಕಟಗಳನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಕಳೆದ ವರ್ಷ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಶೇ.70, ತರಕಾರಿಗಳ ಶೇ.20, ಅಡುಗೆ ಎಣ್ಣೆ ಶೇ. 23 ಮತ್ತು ಬೇಳೆಕಾಳುಗಳ ಬೆಲೆ ಶೇ.8ರಷ್ಟು ಹೆಚ್ಚಾಗಿದೆ. ಕೋಟಿಗಟ್ಟಲೆ ಭಾರತೀಯರ ಪ್ರಧಾನ ಆಹಾರವಾಗಿರುವ ಗೋಧಿ ಶೇ. 14ಕ್ಕೂ ಹೆಚ್ಚು ಬೆಲೆ ಏರಿಕೆ ಕಾಣುತ್ತಿದ್ದು, ಅದು ಕೈಗೆಟುಕದಂತಾಗುತ್ತಿದೆ. ಗೋಧಿ ಸಂಗ್ರಹಣೆ ಕುಸಿದಿದೆ. ಕೇಂದ್ರ ಸರ್ಕಾರ ಗೋದಿ ಖರೀದಿಯನ್ನು ಕಳೆದ ವರ್ಷಕ್ಕಿಂತ ಅರ್ಧಕ್ಕಿಂತ ಕಡಿಮೆ ಮಾಡಿದೆ. ಈ ವರ್ಷ ಸಂಗ್ರಹಣೆಯು 44.4 ಮೆಟ್ರಿಕ್ ಟನ್‌ಗಳ ಗುರಿಗೆ ವಿರುದ್ಧವಾಗಿ 20 ಮೆಟ್ರಿಕ್ ಟನ್‌ಗಳನ್ನು ದಾಟುವುದಿಲ್ಲ.

ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಗಳ ನಿರಂತರ ಏರಿಕೆ ಮತ್ತು ಗೋಧಿಯ ತೀವ್ರ ಕೊರತೆಯು ಈ ಒಟ್ಟಾರೆ ಹಣದುಬ್ಬರವನ್ನು ಇನ್ನೂ ಮೇಲಕ್ಕೇರಿಸುತ್ತಿವೆ. ಕಲ್ಲಿದ್ದಲು ಕೊರತೆ ಎಂಬ ವರದಿಯಿದ್ದು, ಇದು ವಿದ್ಯುತ್ ವೆಚ್ಚವನ್ನು ಹೆಚ್ಚಿಸುತ್ತದೆ.

ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಎಲ್ಲಾ ಸೆಸ್/ಸರ್‌ಚಾರ್ಜ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ವಿಶೇಷವಾಗಿ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆ ಏರಿಕೆಗಳನ್ನು ಹಿಂಪಡೆಯಬೇಕು ಎಂದು ಎಡ ಪಕ್ಷಗಳು ಒತ್ತಾಯಿಸಿವೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಗೋಧಿ ಪೂರೈಕೆಯನ್ನು ಪುನಃಸ್ಥಾಪಿಸಬೇಕು. ಈ ಬೆಲೆ ಏರಿಕೆಯನ್ನು ತಡೆಯಲು ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಆಗ್ರಹಿಸಿರುವ ಎಡಪಕ್ಷಗಳು  25-31 ಮೇ ನಡುವೆ ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಐಕ್ಯ ಮತ್ತು  ಎಡೆಬಿಡದ ರಾಷ್ಟ್ರವ್ಯಾಪಿ ಹೋರಾಟವನ್ನು ದೇಶಾದ್ಯಂತ ಸಂಯೋಜಿಸಬೇಕು ಎಂದು ತಮ್ಮ ಎಲ್ಲಾ ಘಟಕಗಳಿಗೆ ನಿರ್ದೇಶನ ನೀಡಿವೆ.

ಈ ಹೋರಾಟದ ಬೇಡಿಕೆಗಳು ಹೀಗಿವೆ:

  • ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಎಲ್ಲಾ ಹೆಚ್ಚುವರಿ ಶುಲ್ಕಗಳು/ಸೆಸ್‌ಗಳನ್ನು ಹಿಂಪಡೆಯಬೇಕು.
  • ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಡಿತರ) ಮೂಲಕ ಗೋಧಿ ಸರಬರಾಜುಗಳನ್ನು ಮತ್ತೆ ಆರಂಭಿಸಬೇಕು.
  • ಎಲ್ಲಾ ಅಗತ್ಯ ಸರಕುಗಳನ್ನು ವಿಶೇಷವಾಗಿ ಬೇಳೆಕಾಳುಗಳು ಮತ್ತು ಖಾದ್ಯ ತೈಲವನ್ನು ವಿತರಿಸುವ ಮೂಲಕ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಬೇಕು.
  • ನೇರ ನಗದು ವರ್ಗಾವಣೆಯನ್ನು ಎಲ್ಲಾ ಆದಾಯ ತೆರಿಗೆ ವ್ಯಾಪ್ತಿಗೆ ಬರದ  ಕುಟುಂಬಗಳಿಗೆ ತಿಂಗಳಿಗೆ 7,500 ರೂ.ಗೆ ಹೆಚ್ಚಿಸಬೇಕು
  • ಮನರೇಗಕ್ಕೆ (ಎಂಜಿಎನ್‌ಆರ್‌ಇಜಿಎಸ್‌ಗೆ) ಬಜೆಟ್ ಹಂಚಿಕೆಯನ್ನು ಹೆಚ್ಚಿಸಬೇಕು. ನಿರುದ್ಯೋಗ ಭತ್ಯೆಗಾಗಿ ಕೇಂದ್ರ ಯೋಜನೆಯ ಶಾಸನವನ್ನು ತರಬೇಕು.
  • ನಗರ ಪ್ರದೇಶಗಳಿಗೆ ಉದ್ಯೋಗ ಖಾತ್ರಿ ಯೋಜನೆಯ ಕಾನೂನು ತರಬೇಕು.
  • ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.

Leave a Reply

Your email address will not be published. Required fields are marked *