ಪಠ್ಯ ಪರಿಷ್ಕರಣೆ: ನಾಡಿಗೆ ಕೇಡು ಬಗೆಯುವ ನಿರ್ಧಾರ, ಧಿಕ್ಕರಿಸಲೇಬೇಕು

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಪಠ್ಯಕ್ರಮಗಳನ್ನು ಪರಿಷ್ಕರಿಸಲು ನೇಮಿಸಿದ್ದ ರೋಹಿತ್ ಚಕ್ರತೀರ್ಥ ರವರ ನೇತೃತ್ವದ ಸಮಿತಿ ನಡೆಸಿದ ಅವಾಂತರಗಳನ್ನು ಸಂಪೂರ್ಣ ಕೈ ಬಿಡುವ ಬದಲು ಕೇವಲ ತಾಂತ್ರಿಕ ನಿರ್ಧಾರವನ್ನು ಪ್ರಕಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ರಮ ಅತ್ಯಂತ ನಿರಾಶಾದಾಯಕವಾಗಿದೆ. ಯಾವುದೇ ವೈಚಾರಿಕ ವಿಮರ್ಶೆಗಳಿಗೆ ಕಿವಿಗೊಡದೇ ಮರು ಪರಿಷ್ಕರಣ ಸಮಿತಿಯ ನಿರ್ಧಾರಗಳನ್ನೇ ಸದಾ ಪ್ರತಿಪಾದಿಸುತ್ತಿದ್ದ ಶಿಕ್ಷಣ ಸಚಿವ ನಾಗೇಶ್ ರವರ ಅಭಿಪ್ರಾಯದಂತೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದೂ ಸ್ಪಷ್ಟ. ಈ ಮೂಲಕ ಅವರು ಆರ್.ಎಸ್.ಎಸ್.ನ ಕಾರ್ಯಸೂಚಿಯ ಜಾರಿಗೆ ಬದ್ಧರೆಂಬುದನ್ನು ತೋರಿಸಿದ್ದಾರೆ. ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುವ ಮೊದಲೇ ಶಿಕ್ಷಣ ಸಚಿವರು ಬದಲಾವಣೆ ಅಸಾಧ್ಯ ಎಂದು ಘೋಷಿಸುತ್ತಿದ್ದರು ಎನ್ನುವುದು ಗಮನಾರ್ಹ.

ವಿವಾದ ಮತ್ತು ನಾಡಿನ ಪ್ರಜ್ಞಾವಂತರ ಪ್ರತಿರೋಧ ಭುಗಿಲೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವಿವೇಕ ಹಾಗೂ ವಿವೇಚನೆಯ ನಿರ್ಧಾರವನ್ನು ಕೈಗೊಳ್ಳುವ ನಿರೀಕ್ಷೆ ಇತ್ತು. ಆದರೆ ಹಾಗೆ ಮಾಡದೇ `ಸಂಘ’ ದ ಕೈಗೊಂಬೆ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.

ಪಠ್ಯ ಪರಿಷ್ಕರಿಸುವ ನೆಪದಲ್ಲಿ ಸಂಘಪರಿವಾರದ ಫ್ಯಾಸಿಸ್ಟ್ ಮಾದರಿಯ ಚಿಂತನೆಗಳನ್ನು ಎಳೆಯ ಮನಸ್ಸುಗಳಲ್ಲಿ ರೂಢಿಸುವ ದುಷ್ಟ ಯೋಜನೆ ಇದೆ. ಈ ದೆಸೆಯಲ್ಲಿ ನಿಜ ಚರಿತ್ರೆ ಮತ್ತು ವೈಚಾರಿಕತೆಯನ್ನು ವಿಕೃತಗೊಳಿಸುವುದಕ್ಕೆ ಆದ್ಯತೆ ಕೊಟ್ಟಿರುವುದು ನಾಡದ್ರೋಹ. ಆರೋಗ್ಯಪೂರ್ಣ ಚಿಂತನೆಗಳಿಂದ ನಾಡಿನ ಸಾಮಾಜಿಕ ಸ್ವಾಸ್ಥ್ಯ ಕಾಯುವ, ಮಕ್ಕಳ ಭವಿಷ್ಯವನ್ನು ರೂಪಿಸುವ ಕಾಳಜಿ ಹೊಣೆ ಇರುವ ಸರಕಾರದ ನಡೆ ಅತ್ಯಂತ ಖಂಡನೀಯ, ಬೇಜವಾಬ್ದಾರಿಯುತ ಮತ್ತು ಹೊಣೆಗೇಡಿತನದಿಂದ ಕೂಡಿದೆ.

ಮೊದಲನೆಯದಾಗಿ ಸಮಿತಿಯ ಅದ್ಯಕ್ಷರ ಆಯ್ಕೆಯ ಅರ್ಹತೆಯೇ ಪ್ರಶ್ನೆಗೊಳಗಾಗಿತ್ತು. ಮೇಲಾಗಿ ಪರಿಷ್ಕರಣೆ ಮಾಡುವಲ್ಲಿ ಅನುಸರಿಸ ಬೇಕಿದ್ದ ಮೂಲ ನೀತಿ ನಿಯಮಗಳನ್ನೇ ಉಲ್ಲಂಘಿಸಲಾಗಿತ್ತು. ಸಮಾನತೆ, ಸಾಮಾಜಿಕ ನ್ಯಾಯದ ಕಲ್ಪನೆಯನ್ನೇ ಬುಡಮೇಲು ಮಾಡಲಾಗಿತ್ತು. ಸಂವಿಧಾನಿಕ ಚೌಕಟ್ಟುಗಳನ್ನು ಮೀರಲಾಗಿತ್ತು. ಚಾರಿತ್ರಿಕ ಸಂಗತಿಗಳನ್ನು ವಿಕೃತಗೊಳಿಸಿದ್ದಲ್ಲದೇ ಬಸವಣ್ಣ, ಸಾವಿತ್ರಿಬಾಯಿ ಫುಲೆ, ನಾರಾಯಣ ಗುರು ರಂತಹ ಸಮಾಜ ಸುಧಾರಕರ, ಡಾ.ಅಂಬೇಡ್ಕರ್, ಭಗತ್ ಸಿಂಗ್  ರಂಥಹ ಸ್ವಾತಂತ್ರ್ಯ ಹೋರಾಟಗಾರರ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂತಹವರ ಪಠ್ಯ ಕೈಬಿಡುವ, ಮನ ಬಂದಂತೆ ತಿದ್ದುವ, ಮಹಿಳಾ ಸಂವೇದನೆಯೇ ಇಲ್ಲದ ಹಾಗೂ ಸೌಹಾರ್ದತೆ ಸಾರುವ ಕೆ.ನೀಲಾ, ಅನುಪಮಾ ಮುಂತಾದ ಮಹಿಳಾ ಲೇಖಕರ ಕಥೆ, ಬರಹಗಳನ್ನೇ ಇಲ್ಲವಾಗಿಸಿದ, ಆದಿವಾಸಿಗಳ ಬಗ್ಗೆ ಒಂದಿಷ್ಟೂ ಮಾಹಿತಿ ಇಲ್ಲದ, ಆದರೆ ಅವರನ್ನು ಹೀಗೆಳೆಯುವ, ಮುಂತಾದ ಭಾರೀ ಪ್ರಮಾದಗಳನ್ನು ಮಾಡಲಾಗಿದೆ. ಇದರಿಂದಾಗಿ ಕನ್ನಡದ ಅನೇಕ ಲೇಖಕರು, ಕವಯಿತ್ರಿಗಳು ಪ್ರತಿಭಟನಾರ್ಥವಾಗಿ ತಮ್ಮ ಪಠ್ಯ ಮತ್ತು ಕವಿತೆಗಳನ್ನು ವಾಪಸ್ ಪಡೆದಿದ್ದಾರೆ. ಆದರೂ ಬದಲಾಗದ ಸರಕಾರದ ನಿರ್ಧಾರವನ್ನು ಕೂಲಂಕುಶವಾಗಿ ಅವಲೋಕಿಸಿದರೆ ಪುರೋಗಾಮಿ ವಿಚಾರಗಳು ಮತ್ತು ಚಾರಿತ್ರಿಕ, ಸಾಮಾಜಿಕ-ಸಾಂಸ್ಕೃತಿಕ ವಾಸ್ತವಗಳನ್ನು ಮತ್ತು ವೈಚಾರಿಕ ಪ್ರಜ್ಞೆಯನ್ನು ಇಲ್ಲವಾಗಿಸಿ ಆ ಜಾಗದಲ್ಲಿ ಮೌಢ್ಯತೆ, ಮತೀಯವಾದಿಗಳ ವಿಜೃಂಬಣೆ ಚಿಂತಕರು ಮತ್ತು ಅವರ ಚಿಂತನೆಗಳನ್ನು ವಿಕೃತ ಗೊಳಿಸುವುದೇ ಮೂಲ ಆಶಯ ವಾಗಿರುವುದು ಕಂಡುಬರುತ್ತದೆ. ಹುತಾತ್ಮ ವೀರ ಭಗತ್ ಸಿಂಗರನ್ನು ಕೈ ಬಿಟ್ಟು, ಸ್ವಾತಂತ್ರ್ಯ ಹೋರಾಟವನ್ನೇ ಮಾಡದ ಆರೆಸ್ಸೆಸ್ಸಿನ ಸಂಸ್ಥಾಪಕ ಹೆಡ್ಗೆವಾರ್ ಅವರನ್ನು ಓದಿಸುವಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ವಿಮೋಚನಾ ಹೋರಾಟವನ್ನು ನೇಪಥ್ಯಕ್ಕೆ ತಳ್ಳುವ ಹುನ್ನಾರವು ಗೋಚರಿಸುತ್ತದೆ. ಅಂದರೆ ಶೈಕ್ಷಣಿಕ, ಸಾಹಿತ್ಯ, ಸಾಂಸ್ಖೃತಿಕ ಕ್ಷೇತ್ರದಲ್ಲಿ ಅನುಭವಗಳನ್ನು ಒಳಗೊಂಡ ನೂರಾರು ತಜ್ಞರ ಚಿಂತನ-ಮಂಥನ ದಿಂದ ರೂಪಿಸಲಾದ ಪಠ್ಯಕ್ರಮಗಳನ್ನು ಕಸದ ಬುಟ್ಟಿಗೆ ತಳ್ಳಿ ಸಂಘಪರಿವಾರ ಪ್ರಣಿತ ಕಪೋಲ ಕಲ್ಪಿತ ಬೋಧನೆಗಳನ್ನು ಕಲಿಸುವ ಉದ್ದೇಶವಿದೆ.

ಅಪಾರ ತಪ್ಪುಗಳುಳ್ಳ ಹೊಸ ಪರಿಷ್ಕರಣೆಯನ್ನು ರದ್ದುಗೊಳಿಸಿ ಹಿಂದಿನದನ್ನೇ ಮುಂದುವರಿಸಬೇಕಿತ್ತು. ಆದರೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಮಂತ್ರಿಗಳು ನೀಡಿದ ನಿರ್ಧಾರದ ಟಿಪ್ಪಣೆಯಲ್ಲಿ ಚಕ್ರತೀರ್ಥರ ಪರಿಷ್ಕಣೆಯಲ್ಲಿ ಆದ ಬಹು ದೊಡ್ಡ ಪ್ರಮಾದಗಳನ್ನು ಸರಿಪಡಿಸುವ ಚಿಂತನೆಯ ಯಾವ ಒಂದು ಸಣ್ಣ ಎಳೆಯೂ ಅಲ್ಲಿಲ್ಲ. ವಿಕೃತ ಮನಸ್ಸಿನ ಚಕ್ರತೀರ್ಥರ ಹುಚ್ಚಾಟಗಳಿಗೆ ಛೀಮಾರಿ ಹಾಕುವ, ಪ್ರಮಾದಗಳನ್ನು ಸರಿಪಡಿಸುವ ಬದಲು ಸಮಿತಿಯ ಕಾರ್ಯ ಮುಗಿದಿರುವುದರಿಂದ ವಿಸರ್ಜಿಸಲಾಗಿದೆ ಎನ್ನುವ ತಾಂತ್ರಿಕ ನಿರ್ಧಾರದಿಂದ ಚಕ್ರತೀರ್ಥ ಸಮಿತಿಯ ಪಠ್ಯಗಳನ್ನೇ ಒಪ್ಪಿ ಬೋಧಿಸುವ ಮಾನ್ಯತೆಯನ್ನು ನೀಡಲಾಗಿದೆ. ಈ ಪಠ್ಯಗಳು ವಿದ್ವಾಂಸರ ಚಿಂತನ ಮಂಥನಗಳಿಂದ ರೂಪುಗೊಳ್ಳದೇ ಕೇಶವ ಶಿಲ್ಪದ ಕಾಷ್ಡದಲ್ಲಿ ಎರಕ ಹೊಯ್ದು ಹೊರ ಬಂದಂತಿವೆ. ಮುಖ್ಯಮಂತ್ರಿಗಳ ನಿರ್ಧಾರವು ನಾಡಿನ ಹಿರಿಯ ಸಾಹಿತಿಗಳು, ಚಿಂತಕರ ಜಾಗೃತಿ ಮತ್ತು ವಿವೇಕದ ಮಾತುಗಳನ್ನು ಧಿಕ್ಕರಿಸಿ ಆರೆಸ್ಸೆಸ್ ಸಿದ್ಧಾಂತಕ್ಕೆ ಪುರಸ್ಕಾರ ನೀಡಿದೆ. ಇಂತಹ ಪಠ್ಯಗಳಿಂದ ನಮ್ಮ ನಾಡು, ನುಡಿ ಮತ್ತು ಮಕ್ಕಳ ಭೌದ್ಧಿಕತೆ ಏನಾದೀತು ಎನ್ನುವ ಕನಿಷ್ಠ ಕಾಳಜಿಯೂ ಇವರಲ್ಲಿ ಇಲ್ಲವಾಗಿರುವುದು ಸಾಹಿತಿ ದೇವನೂರರು ಹೇಳಿದಂತೆ ಕೇಡಿನ ಸಂಕೇತ.

ಈಗಲೂ ಕುವೆಂಪು, ಬಸವಣ್ಣ ನವರ ಕುರಿತ ಆಕ್ಷೇಪಗಳನ್ನು ಪರಿಶೀಲಿಸಿ ಸರಿಪಡಿಸುವ, ಕೆಂಪೇಗೌಡರ ಪಾಠ ಸೇರಿಸುವ, ಮಾತುಗಳು ಲಿಂಗಾಯತ, ಒಕ್ಕಲಿಗ ಜಾತಿಗಳ ಜನರನ್ನು ಯಾಮಾರಿಸುವ ಕಣ್ಣೊರೆಸುವ ಉದ್ದೇಶದ್ದಷ್ಟೇ. ಇಂತಹ ಗಿಮಿಕ್ ತಂತ್ರಗಳಿಗೆ ಜನತೆ ಬಲಿಯಾಗಬಾರದು. ಸರಕಾರದ ಈಗಿನ ನಿರ್ಧಾರ ಎಳ್ಳಷ್ಟೂ ಒಪ್ಪುವಂತಹುದಲ್ಲ. ಈಗಾಗಲೇ ಪುಸ್ತಕಗಳು ಮದ್ರಣ ಆಗಿದ್ದು ವಿತರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿರುವಾಗ ಮುಖ್ಯಮಂತ್ರಿ ಹೇಳಿದ ಪರಿಷ್ಕರಣೆಯಾದರೂ ಹೇಗೆ ಸಾಧ್ಯ? ಇಷ್ಟೊಂದು ಗೊಂದಲ, ಗೋಜಲಿನ ನಡುವೆ ಶೈಕ್ಷಣಿಕ ವಾತಾವರಣಕ್ಕೂ, ಕಲಿಕೆಗೂ ಮಾರಕವಾಗಿರುವ ಈ ಇಡೀ ಪರಿಷ್ಕೃತ ಪಠ್ಯಗಳನ್ನು ರದ್ದುಗೊಳಿಸಿ ಪ್ರೊ.ಬರಗೂರು ನೇತೃತ್ವದ ಸಮಿತಿಯ ಹಿಂದಿನ ಪಠ್ಯಗಳನ್ನೇ ಮುಂದುವರಿಸಬೇಕು. ಅದಕ್ಕಾಗಿ ಜನತೆಯ ಆಂದೋಲನ ವ್ಯಾಪಕವಾಗಿ ಮುಂದುವರಿಯಬೇಕು. ಸರಕಾರ ಒಪ್ಪಿರುವ ಪಠ್ಯಗಳ ಹೂರಣ, ಅದರ ಉದ್ದೇಶಗಳನ್ನು ಜನರೆದುರು ತೆರೆದಿಡುವಂತಹ ಪ್ರಯತ್ನಗಳೂ ಸಾಗಬೇಕು. ಇವೆಲ್ಲವೂ ಭಂಡ ಸರಕಾರಕ್ಕೆ ಬುದ್ದಿ ಕಲಿಸುವ ರಾಜಕೀಯ ಪ್ರತಿಕ್ರಿಯೆಯಾಗಬೇಕು.

Leave a Reply

Your email address will not be published. Required fields are marked *