ಕಾಶ್ಮೀರದಲ್ಲಿ ಮುಗ್ಧ ಜನಗಳ ಹತ್ಯೆಗಳ ಹೀನ ಕೃತ್ಯ-ಸರಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು

ಕೇಂದ್ರ ಗೃಹಮಂತ್ರಿಗಳಿಗೆ ಸಿಪಿಐ(ಎಂ) ಸಂಸದ ಶಿವದಾಸನ್ ಪತ್ರ

ಕಾಶ್ಮೀರದಲ್ಲಿ ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ, ನಾಗರಿಕರ ಬದುಕಿನ ಹಕ್ಕನ್ನು ಖಾತ್ರಿಪಡಿಸಬೇಕಾಗಿದೆ, ಇದಕ್ಕಾಗಿ ಸರಕಾರ ಮುಂದಾಗಿ ಕ್ರಮಗಳನ್ನು ಕೈಗಳ್ಳಬೇಕಾಗಿದೆ, ಜನಗಳ ಜೀವ ಮತ್ತು ಜೀವನೋಪಾಯಗಳನ್ನು ರಕ್ಷಿಸಬೇಕಾಗಿದೆ ಎಂದು ರಾಜ್ಯಸಭೆಯಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಸದಸ್ಯ ವಿ. ಶಿವದಾಸನ್  ಜೂನ್ 7ರಂದು ಕೇಂದ್ರ ಗೃಹ ಮಂತ್ರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಕಾಶ್ಮೀರದಲ್ಲಿ ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ. ಅಮಾಯಕ ನಾಗರಿಕರು ನಿಲ್ಲದೆ ಸಾಗಿರುವ ಹತ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಭಯೋತ್ಪಾದಕರು ಹರಿಯಬಿಟ್ಟ ಹೀನ ದಾಳಿಗಳಿಂದ 18ಕ್ಕೂ ಹೆಚ್ಚು ಮಂದಿ ಪ್ರಾಣ ಕಳಕೊಂಡಿದ್ದಾರೆ. ಇತರ ಜನಗಳು ಜೀವ ಭಯದಿಂದ ಬದುಕುವಂತಾಗಿದೆ. ಮಹಿಳಾ ಕಲಾಕಾರರಾದ ಅಮ್ರೀನಾ ಭಟ್ ರಿಂದ ಹಿಡಿದು ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ವರೆಗೆ ವಿವಿಧ ಜನವಿಭಾಗಗಳ ಜನರನ್ನು ಒಬ್ಬೊಬ್ಬರನ್ನಾಗಿ ಗುರುತಿಸಿ ಕಗ್ಗೊಲೆ ನಡೆಸಲಾಗುತ್ತಿದೆ ಮತ್ತು ಅವರ ಕುಟುಂಬಗಳ ಸದಸ್ಯರುಗಳ ಮೇಲೆ ಹಲ್ಲೆ ನಡೆಸಲಾಗುತ್ತಿದೆ.

ಕಾಶ್ಮೀರಿ ಪಂಡಿತ್ ಸಮುದಾಯದವರು ರಕ್ಷಣೆ ಮತ್ತು ಭದ್ರತೆಗೆ ಆಗ್ರಹಿಸಿ ಬೀದಿಗಿಳಿದಿದ್ದಾರೆ. ಕಾಶ್ಮೀರದಲ್ಲಿನ ಪರಿಸ್ಥಿತಿ 1990ರ ದಶಕದಲ್ಲಿದ್ದುದಕ್ಕಿಂತಲೂ ಕೆಟ್ಟದಾಗಿದೆಂದು ಅವರಲ್ಲಿ ಹಲವರು ಭೀತಿ ವ್ಯಕ್ತಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಆಡಳಿತ ತಮ್ಮನ್ನು ಒತ್ತೆಯಾಳುಗಳಾಗಿ ಮಾಡಿಕೊಂಡಿದೆ, ತಮ್ಮನ್ನು ಒಳಗೇ ಬಂಧಿಸಿಟ್ಟಿದೆ ಎಂದೂ ಅವರು ಆರೋಪಿಸಿದ್ದಾರೆ.

ಒಂದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರ ಇಲ್ಲದಿರುವುದು ಮತ್ತು ಆಡಳಿತ ಜನಗಳಿಗೆ ಪರಿಕೀಯಗೊಂಡಿರುವುದು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ ಎಂದಿರುವ ಈ ಪತ್ರ ಮೇಲಿನಿಂದ ನೇಮಿಸಲ್ಪಟ್ಟಿರುವ ಆಡಳಿತ ತಮಗೆ ನೀಡಿರುವ ಅಧಿಕಾರವನ್ನು ಯಾರ ಮೇಲೆ ಚಲಾಯಿಸುತ್ತಿದೆಯೋ ಅಂತಹ ಜನಗಳೊಂದಿಗೆ ಸಂಪರ್ಕ ಕಳಕೊಂಡಿದೆ ಎಂದು ಖೇದ ವ್ಯಕ್ತಪಡಿಸಿದೆ. ಇದರಿಂದಾಗಿ ಆಡಳಿತ ಯಂತ್ರಕ್ಕೆ ಲಕ್ವಾ ಹೊಡೆದಂತಾಗಿದೆ, ಜನಗಳಿಂದ ದೂರವಾದ ಮತ್ತು ಪ್ರಜಾಸತ್ತಾತ್ಮಕ ಜನಾದೇಶವಿಲ್ಲದ ಆಡಳಿತ ತನ್ನ ಮುಂದಿರುವ ಕ್ಲಿಷ್ಟ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಮತ್ತು ನಿಭಾಯಿಸುವ ಸಾಮರ್ಥ್ಯ ತನಗಿಲ್ಲೆಂದು ಸಾಬೀತು ಪಡಿಸಿದೆ.

ಈ ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿನ ವಿಫಲತೆ ಕಾಶ್ಮೀರ ಪ್ರಶ್ನೆಯನ್ನು ನಿಭಾಯಿಸಲು ಕೈಗೊಂಡಿರುವ ಕ್ರಮಗಳ ವಿಫಲತೆಯನ್ನು ಬಹಿರಂಗ ಪಡಿಸುತ್ತಿದೆ. ಕೇಂದ್ರ ಸರಕಾರ ತಕ್ಷಣವೇ ಸಂಬಂಧಪಟ್ಟ ಎಲ್ಲರೊಡನೆ ಸಮಾಲೋಚನೆ ನಡೆಸಿ ಇಂತಹ ಹೀನ ಪ್ರಹಾರಗಳಿಂದ ಅಮಾಯಕ ಜನಗಳ ಅಮೂಲ್ಯ ಜೀವಗಳು ನಷ್ಟಗೊಳ್ಳದಂತೆ ಖಾತ್ರಿಪಡಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿವದಾಸನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಕಾಶ್ಮೀರಿಗಳ ಪಾಡನ್ನು ರಾಜಕೀಯ ಪ್ರಚಾರದ ಸಾಧನವಾಗಿ ಬಳಸಲಾಗುತ್ತಿದೆ. ಇದರಿಂದಾಗಿ ಕಾಶ್ಮೀರದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವಂತಾಗಿದೆ. ನಿಜವಾದ ಸಮಸ್ಯೆಯನ್ನು ಎದುರಿಸಲಾಗುತ್ತಿಲ್ಲ, ಅದನ್ನು ಅರ್ಥಮಾಡಿಕೊಂಡಂತೆಯೂ ಇಲ್ಲ. ಕಾಶ್ಮೀರದಲ್ಲೀಗ ಜನಗಳೊಂದಿಗೆ ಬಲವಾದ ಸಂಬಂಧಗಳನ್ನು ಹೊಂದಿರುವ ಒಂದು ಶಾಸನಬದ್ಧ ಮತ್ತು ಪ್ರಜಾಸತ್ತಾತ್ಮಕ ಸರಕಾರ ಬೇಕಾಗಿದೆ. ಈ ಬಗ್ಗೆ ಕೇಂದ್ರ ಸರಕಾರ ತುರ್ತಾಗಿ ಕಾರ್ಯರತವಾಗಬೇಕಾಗಿದೆ, ಕಾಶ್ಮೀರದ ನಾಗರಿಕರ ಜೀವನದ ಹಕ್ಕನ್ನು ಖಾತ್ರಿಪಡಿಸಬೇಕಾಗಿದೆ ಮತ್ತು ಜನಗಳ ಜೀವ ಮತ್ತು ಜೀವನೋಪಾಯಗಳನ್ನು ರಕ್ಷಿಸಲು ಮುಂದಾಗಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಿಪಿಐ(ಎಂ) ಸಂಸದ ಶಿವದಾಸನ್ ಕೇಂದ್ರ ಗೃಹಮಂತ್ರಿಗಳನ್ನು ತಮ್ಮ ಈ ಪತ್ರದಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *