ಪಠ್ಯ ಪುಸ್ತಕ ಪರಿಷ್ಕರಣೆ – ಹೊಣೆಗೇಡಿ ಸಚಿವ ನಾಗೇಶ್ ವಜಾಗೊಳಿಸಿ

ಪ್ರಸಕ್ತ ಸಾಲಿನ ಶಾಲಾ ಪಠ್ಯಗಳಲ್ಲಿ ಇರಬಹುದಾದ ಸೂಕ್ಷ್ಮ ಸಂಕೀರ್ಣ ವಿಷಯಗಳ ಕುರಿತು ಪರಿಶೀಲಿಸಿ ವರದಿ ನೀಡುವುದಕ್ಕೆ ರಚಿಸಲಾದ ರೋಹಿತ್ ಚಕ್ರತೀರ್ಥ ಅಧ್ಯಕ್ಷೀಯ ಸಮಿತಿ ತನಗೆ ವಹಿಸಿದ ಜವಾಬ್ದಾರಿಯನ್ನು ಮೀರಿ, ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾದ ದುಷ್ಕೃತ್ಯವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

ಈ ಸರಕಾರದಲ್ಲಿ ಯಾರು ಹೇಗೆ ಬೇಕಾದರೂ ವರ್ತಿಸಬಹುದೆಂಬುದನ್ನು ಮತ್ತು ಆಡಳಿತದ ಮೇಲೆ ಸರಕಾರದ ಯಾವುದೇ ನಿಯಂತ್ರಣವಿಲ್ಲವೆಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ. ಯಾವುದೇ ಸೂಕ್ತ ವೇದಿಕೆಗಳಲ್ಲಿ ಚರ್ಚಿಸದೇ, ಸೂಕ್ತ ಆದೇಶ ಹೊರಡಿಸದೇ ತಮಗೆ ತಿಳಿದಂತೆ ಕಾರ್ಯ ನಿರ್ವಹಿಸುವುದು, ಇಲ್ಲವೇ ಮತ್ಯಾವುದೋ ಅವಿತಿಟ್ಟುಕೊಂಡ ದುಷ್ಠ ಶಕ್ತಿಯ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ಇದು ಮತ್ತೊಮ್ಮೆ ಎತ್ತಿ ತೋರಿಸುತ್ತದೆ.

ಈ ಅಧಿಕಾರ ದುರುಪಯೋಗದಿಂದ ಮತ್ತು ತಜ್ಞರಲ್ಲದವರ ದುರ್ನಡೆಯಿಂದ ನಾಡಿನ ಗಣ್ಯ ವ್ಯಕ್ತಿಗಳು ಅಪಮಾನಿತರಾಗುವಂತಾಯಿತು. ರಾಜ್ಯದ ದಶಲಕ್ಷಾಂತರ ಶಾಲಾ ಮಕ್ಕಳು ಪಠ್ಯಪುಸ್ತಕ ಲಭ್ಯವಿಲ್ಲದೇ ಶೈಕ್ಷಣಿಕವಾಗಿ ಈ ವರ್ಷವೂ ತೊಂದರೆಗೀಡಾಗುವಂತಾಗುತ್ತಿದೆ. ಮಾತ್ರವಲ್ಲಾ,  ರಾಜ್ಯದ ಬೊಕ್ಕಸದ ನೂರಾರು ಕೋಟಿ ರೂ.ಗಳ ಮೊತ್ತ ದುರ್ವಿನಿಯೋಗವಾಗುವಂತಾಯಿತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರವರ ಇಂತಹ ಜವಾಬ್ದಾರಿ ಹೀನ ಮತ್ತು ದೂರದೃಷ್ಠಿ ರಹಿತ ದುರ್ವರ್ತನೆಗಳಿಂದ ಕರ್ನಾಟಕದ ಭವಿಷತ್ತಿನ ಅಭಿವೃದ್ಧಿಯ ಮೇಲೆ ಖಂಡಿತಾ ದುಷ್ಪರಿಣಾಮ ಬೀರಲಿದೆ. ಇದೊಂದು, ನಾಗರೀಕ ಜಗತ್ತಿನ ಮುಂದೆ ಕರ್ನಾಟಕದ ಜನತೆ  ಮತ್ತೊಮ್ಮೆ ನಾಚಿಕೆಯಿಂದ ತಲೆ ತಗ್ಗಿಸುವಂತಹ ಪ್ರಸಂಗವಾಗಿದೆ.

ಮುಖ್ಯಮಂತ್ರಿಗಳಿಗೆ ಸ್ವಲ್ಪವಾದರು ನಾಚಿಕೆ ಎಂಬುದೇನಾದರು ಇದ್ದರೇ ಶಿಕ್ಷಣ ಸಚಿವರು ಹಾಗೂ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯನ್ನು ಈ ಕೂಡಲೇ ವಜಾ ಮಾಡುವಂತೆ ಸಿಪಿಐ(ಎಂ) ಪಕ್ಷವು ಬಲವಾಗಿ ಆಗ್ರಹಿಸುತ್ತದೆ.

ಕೋವಿಡ್ ಕಾರಣದಿಂದ ಈಗಾಗಲೇ ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಸರಕಾರಕ್ಕೆ ಆಡಳಿತದ ಮೇಲೆ ಯಾವುದೇ ಹಿಡಿತವಿಲ್ಲದೇ ಇರುವುದರಿಂದ ಉಂಟಾದ ಈ ಅನಗತ್ಯ ಪ್ರಹಸನದಿಂದ ಈ ವರ್ಷವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಹಳೆಯ ಪಠ್ಯಕ್ರಮವನ್ನೇ ಮುಂದುವರೆಸುವಂತೆ ಮತ್ತು ರಾಜ್ಯದ ಬೊಕ್ಕಸಕ್ಕಾದ ನಷ್ಟವನ್ನು ಅಧಿಕಾರ ದುರುಪಯೋಗ ಮಾಡಿಕೊಂಡ ಸಚಿವ ಬಿ.ಸಿ. ನಾಗೇಶ್ ಮತ್ತು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ವಸೂಲಿ ಮಾಡುವಂತೆ ಸಿಪಿಐ(ಎಂ) ಪಕ್ಷವು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತದೆ.

ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *