ರಾಜ್ಯ ಸಭೆ ಚುನಾವಣೆ: ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅಕ್ಷಮ್ಯ ಹೊಣೆಗೇಡಿತನ

ಕರ್ನಾಟಕದ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸದಸ್ಯರ ಆಯ್ಕೆಗಾಗಿ ಜೂನ್ 10 ರಂದು ನಡೆದ ಚುನಾವಣಾ ಫಲಿತಾಂಶವು ಅಚ್ಚರಿ ಮತ್ತು ರಾಜಕೀಯವಾಗಿ ಗಂಭೀರ ಪರಿಣಾಮವನ್ನು ಬೀರಬಲ್ಲ ಸಂಕೇತಗಳನ್ನು ನೀಡಿದೆ. ಒಬ್ಬ ಅಭ್ಯರ್ಥಿ ಗೆಲುವಿಗೆ 45 ಮತಗಳು ಅಗತ್ಯ ಎಂದು ಭಾವಿಸಿದಲ್ಲಿ ವಿಧಾನಸಭೆಯಲ್ಲಿನ ವಿವಿಧ ಪಕ್ಷಗಳ ಸಂಖ್ಯಾಬಲವನ್ನು ಪರಿಗಣಿಸಿದರೆ ಬಿಜೆಪಿ ಎರಡು ಸ್ಥಾನ, ಕಾಂಗ್ರೆಸ್ ಒಂದು ಸ್ಥಾನವನ್ನು ಅನಾಯಾಸವಾಗಿ ಗೆಲ್ಲುವುದು ನಿರೀಕ್ಷಿತವಾಗಿತ್ತು. ಈ ನಂತರದಲ್ಲೂ ವಿವಿಧ ಪಕ್ಷಗಳಲ್ಲಿ ಉಳಿಯುವ ಹೆಚ್ಚುವರಿ ಸಂಖ್ಯೆಯನ್ನು ಲಕ್ಷಿಸಿದರೆ ಬಿಜೆಪಿ ಹೊರತು ಪಡಿಸಿಯೂ ಮತ್ತೊಬ್ಬ ಅಭ್ಯರ್ಥಿಯ ಆಯ್ಕೆಯು ಆಗಲಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ತೀವ್ರ ಕಿತ್ತಾಟದಿಂದಾಗಿ ಅದು ಕೈತಪ್ಪಿ ಸುಲಭವಾಗಿ ಬಿಜೆಪಿಗೆ ದೊರೆಯುವಂತೆ ಮಾಡಿದ್ದು ರಾಜಕೀಯವಾಗಿ ಅತ್ಯಂತ ನಕಾರಾತ್ಮಕ ಬೆಳವಣಿಗೆ.

ಫ್ಯಾಸಿಸ್ಟ್ ಮನೋಭಾವದ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ತಕ್ಕ ಉತ್ತರವನ್ನು ನೀಡಿ ಭವಿಷ್ಯದ ರಾಜಕೀಯ ಬೆಳವಣಿಗೆಗಳಿಗೆ ಜನತೆಯಲ್ಲಿ ಆತ್ಮವಿಶ್ವಾಸವನ್ನು ಉಂಟು ಮಾಡುವ, ರಾಜ್ಯದ ಹಿತವೇ ಪ್ರಮುಖ ಎಂದು ಸಾರಿ ಹೇಳುವ ಅತ್ಯಂತ ಮಹತ್ವದ ಒಂದು ಸಂದರ್ಭವನ್ನು ಇದು ಕಳೆದುಕೊಳ್ಳುವಂತೆ ಮಾಡಿದೆ. ಇದರಲ್ಲಿ ಕೆಲವರ ವ್ಯಕ್ತಿ ಪ್ರತಿಷ್ಠೆ, ಸೇಡು ಹಾಗೂ ರಾಜಕೀಯ ಹೊಣೆಗೇಡಿತನ ಎದ್ದು ಕಾಣುತ್ತದೆ. ಜಾತ್ಯಾತೀತ ಪಕ್ಷಗಳ ನಡುವಿನ ವೈರುದ್ಯಗಳನ್ನು ಬಿ.ಜೆ.ಪಿ ಪಕ್ಷ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಶಕ್ತಿವರ್ಧನೆ ಮಾಡಿಕೊಂಡಿದೆ. ಮಾತ್ರವಲ್ಲದೆ ವಿರೋಧಪಕ್ಷಗಳ ಸದಸ್ಯ ಬಲದ ಬುಟ್ಟಿಗೆ ಕೈಹಾಕಿ ಯಶಸ್ಸು ಪಡೆಯಬಲ್ಲೆ ಎನ್ನುವ ಬಿಜೆಪಿಯ ರಾಜಕೀಯ ಬೆದರಿಕೆಯನ್ನು ಇದು ಎತ್ತಿ ತೋರಿಸುತ್ತದೆ. ಇದೇ ಚುನಾವಣೆಯಲ್ಲಿ ಮಹಾರಾಷ್ಟ್ರ ಮುಂತಾದೆಡೆ ಅದರ ರಾಜಕೀಯ ಆಕ್ರಮಣ ನಿಚ್ಚಳವಾಗಿ ಕಂಡಿದೆ.

Congress-JDS-BJP

ಕರ್ನಾಟಕ ವಿಧಾನ ಸಭೆಯಲ್ಲಿರುವ 121 ಬಿಜೆಪಿ ಶಾಸಕರ ಸಂಖ್ಯೆಯನ್ನು ಲಕ್ಷಿಸಿದರೆ ಅಭ್ಯರ್ಥಿಯಾಗಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಿನಿಮಾ ನಟ ಜಗ್ಗೇಶ್ ಅವರು ಆಯ್ಕೆಯಾಗಿ ಅದರ ಬಳಿ 31 ಸಂಖ್ಯೆಯ ಮತದಾರರು ಉಳಿಯುತ್ತಿದ್ದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿದ್ದ ಮಾಜಿ ಸಚಿವ ಜೈರಾಮ್ ರಮೇಶ್ ಅವರ ಆಯ್ಕೆಯ ನಂತರ ಅದರ ಬಳಿ 25 ಉಳಿಯುತ್ತಿದ್ದವು. 32 ಸದಸ್ಯರನ್ನು ಹೊಂದಿದ್ದ ಜಾತ್ಯಾತೀತ ಜನತಾದಳ ತನ್ನ ಅಭ್ಯರ್ಥಿಯಾದ ಕುಪೇಂದ್ರರೆಡ್ಡಿಯವರ ಗೆಲುವಿಗೆ ಸರಳ ಲೆಕ್ಕಾಚಾರ ಹಾಕಿತ್ತಾದರೂ ಬೇರೆ ಪಕ್ಷದ ಮತಗಳು ಇಲ್ಲವೇ ಎರಡನೆಯ ಪ್ರಾಶಸ್ತ್ಯದ ಮತಗಳಿಲ್ಲದೇ ಗೆಲ್ಲುವುದು ದುರ್ಲಭವಾಗಿದ್ದ ಜೆಡಿಎಸ್ ಪಕ್ಷದ ಸ್ಥಿತಿ ಹಗ್ಗದ ಮೇಲಿನ ನಡಿಗೆಯಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಬೇರೊಂದು ಪಕ್ಷದ ಮತದಾರರ ಬೆಂಬಲ ಅಗತ್ಯವಿತ್ತು. ಕಾಂಗ್ರೆಸ್ಸಿನ ಬೆಂಬಲವನ್ನು ಅದು ನಿರೀಕ್ಷಿಸಿದ್ದು ಸಹಜವಾಗಿತ್ತು. ಆರಂಭದಲ್ಲಿ ಕೇವಲ ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಇಳಿಸುವುದಾಗಿ ನಿರ್ಧರಿಸಿದ್ದ ಕಾಂಗ್ರೆಸ್ ಪ್ರಕ್ರಿಯೆಯ ಒಂದು ಹಂತದಲ್ಲಿ ಎರಡನೆಯ ಅಭ್ಯರ್ಥಿಯಾಗಿ ಮಮ್ತಾಜ್ ಅಲಿ ಖಾನ್ ರವರನ್ನು ಕಣಕ್ಕೆ ಇಳಿಸಿದ್ದು ಜೆ.ಡಿ.ಎಸ್. ನ ನಿರೀಕ್ಷೆಯನ್ನು ಆತಂಕಕ್ಕೆ ಈಡು ಮಾಡಿತ್ತು. ಇಂತಹ ನಿರ್ಧಾರದ ಹಿಂದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಬಹು ಮುಖ್ಯ ಪಾತ್ರ ಹಾಗೂ ರಾಜಕೀಯ ತಂತ್ರಗಾರಿಕೆ ಇದೆ ಎಂದೂ ಹೇಳಲಾಗುತ್ತಿದೆ. ಆರಂಭದಲ್ಲಿ ಎರಡನೆಯ ಅಭ್ಯರ್ಥಿಗೆ ಒಪ್ಪಿಗೆಯಿಲ್ಲದ ಹೈಕಮಾಂಡ್ ನಂತರದ ಬೆಳವಣಿಗೆಯಲ್ಲಿ ಸಮ್ಮತಿ ನೀಡಿತು.

ಇದರಲ್ಲಿ ಜೆ.ಡಿ.ಎಸ್ ನಾಯಕರು ವಿಶೇಷವಾಗಿ ಅಭ್ಯರ್ಥಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಮತ್ತು ವಿಧಾನಪರಿಷತ್ತಿನ ನಾಯಕರಾದ ಬಿ.ಕೆ.ಹರಿಪ್ರಸಾದ ರವರನ್ನು ಕಂಡು ಮಾತನಾಡಿದರೆಂದು, ಸಿದ್ದರಾಮಯ್ಯನವರನ್ನು ಕಂಡು ಮಾತನಾಡಿಲ್ಲ ಎನ್ನುವ ಮುಜುಗರದ ಒಂದು ಪ್ರಶ್ನೆಯೂ ಕಾರಣವಾಯಿತೇ ಎಂಬ ಅಂಶ ಚರ್ಚೆಗೆ ಒಳಪಟ್ಟಿದೆ. ಎರಡೂ ಪಕ್ಷಗಳಿಂದ ಸಮಾನಾಂತರ ದೂರ ಎಂದು ಜೆ.ಡಿ.ಎಸ್ ಹೇಳಿಕೊಂಡಿದ್ದರೂ ಬಿಜೆಪಿಗೆ ಎದುರಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಈ ಸನ್ನಿವೇಶದಲ್ಲಿ ಈಗ ಕಾಂಗ್ರೆಸ್ಸಿನ ಬೆಂಬಲದ ನಿರೀಕ್ಷೆ ಇಟ್ಟುಕೊಂಡಿದ್ದ ಜೆ.ಡಿ.ಎಸ್ ಪಕ್ಷಕ್ಕೆ ಖಾನ್ ರವರ ಅಭ್ಯರ್ಥಿತನದಿಂದ ಆತಂಕಕ್ಕೆ ಈಡಾದದ್ದು ಸಹಜವಾಗಿದೆ. ಆದಾಗ್ಯೂ, ಕೊನೆಯ ಗಳಿಗೆಯವರೆಗೆ ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಆಂತರಿಕ ಮತ್ತು ಬಹಿರಂಗ ಮಾತುಕತೆಗಳು ನಡೆಯುತ್ತಲೇ ಇದ್ದವು. ಕೊನೇ ಪಕ್ಷ ಮೊದಲ ಪ್ರಾಶಸ್ತ್ಯ ಮತ ನೀಡದಿದ್ದರೂ ಎರಡನೆಯ ಪ್ರಾಶಸ್ತ್ಯದ ಮತಗಳನ್ನಾದರೂ ನೀಡಿ ಎನ್ನುವುದು ಜೆ.ಡಿ.ಎಸ್ ನ ಕೋರಿಕೆಯಾಗಿತ್ತು. ಮತದಾನದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜೆ.ಡಿ.ಎಸ್.ನ್ನು ಬೆಂಬಲಿಸಲಿಲ್ಲ. ಮಾತ್ರವಲ್ಲ, ಮತ್ತೊಂದೆಡೆ ಜೆ.ಡಿ.ಎಸ್ ಪಕ್ಷದಲ್ಲಿದ್ದ ಕೋಲಾರದ ಶ್ರೀನಿವಾಸಗೌಡ, ಗುಬ್ಬಿ ಕ್ಷೇತ್ರದ ಶ್ರೀನಿವಾಸ್ ಈ ಇಬ್ಬರು ಶಾಸಕರು ಅಡ್ಡ ಮತದಾನ ಮಾಡುವ ಮೂಲಕ ಬಿಜೆಪಿಯ ಲೆಹರ್ ಸಿಂಗ್ ರ ಗೆಲುವು ಇನ್ನಷ್ಟು ಸುಭವಾಗಲು ಕಾರಣರಾದರು. ಹೀಗಾಗಿ ಜೆ.ಡಿ.ಎಸ್. ನಿಕಟದಲ್ಲಿ ಪರಾಭವವಾಯಿತು.

ಕಾಂಗ್ರೆಸ್ ಮೂರನೇ ಅಭ್ಯರ್ಥಿಯನ್ನಾಗಿ ಅಲಿಖಾನ್ ರವನ್ನು ಕಣಕ್ಕಿಳಿಸಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಗೆಲ್ಲಿಸಲು ಜೆ.ಡಿ.ಎಸ್ ಪಕ್ಷ ಮುಂದಾಗಲಿಲ್ಲ ಎನ್ನುವ ಒಂದು ಆರೋಪವನ್ನು ಅದರ ಮೇಲೆಯೇ ಹೊರಿಸಬಹುದಾದ ರಾಜಕೀಯ ತಂತ್ರವೂ ಇತ್ತು ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ಸಿನ ಆ ನಡೆಯ ಹಿಂದೆ ಆ ಪಕ್ಷದ ಕೆಲವು ಮತ್ತು ಬಿಜೆಪಿ ಪಕ್ಷದೊಳಗಿನ ಕೆಲವು ನಾಯಕರ ನಡುವಿನ ಒಳ ಒಪ್ಪಂದಗಳು ಕಾರಣವಾಗಿವೆ. ಅದಕ್ಕಾಗಿ ಜೆ.ಡಿ.ಎಸ್ ನಾಯಕರ ವಿರುದ್ಧವಿರುವ ಕಾಂಗ್ರೆಸ್ಸಿನ ವೈಷಮ್ಯಗಳನ್ನು ಬಿಜೆಪಿ ಯಶಸ್ವಿಯಾಗಿ ಬಳಸಿಕೊಂಡಿದೆ ಎಂದೂ ಹೇಳಲಾಗುತ್ತಿದೆ. ಬಿಜೆಪಿಯನ್ನು ಎದುರಿಸಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಜೆ.ಡಿ.ಎಸ್ ಪಕ್ಷವೇ ತನ್ನ ಮೊದಲ ಶತ್ರುವೆಂದು ಭಾವಿಸಿ ವರ್ತಿಸಿದೆ ಎಂದು, ಬಿಜೆಪಿ ವಿರುದ್ಧದ ಹೋರಾಟ ಎನ್ನುವುದು ಸೋಗಲಾಡಿತನ ಎಂದು ಜೆ.ಡಿ.ಎಸ್ ಸಹ ತೀವ್ರವಾಗಿ ಟೀಕಿಸಿದೆ. ಟೀಕೆ ಆರೋಪ-ಪ್ರತ್ಯಾರೋಪಗಳ ಸತ್ಯಾಸತ್ಯತೆ ಏನೇ ಇದ್ದರೂ ಅಂತಿಮವಾಗಿ, ಬಿಜೆಪಿಯ ಶಕ್ತಿ ಬಲಗೊಳ್ಳಲು ಇವೆಲ್ಲಾ ಕಾರಣವಾದವು ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ಅಕ್ಷಮ್ಯ.

ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಗೊಳ್ಳುವ ಈ ಚುನಾವಣೆ ಖರ್ಚುಗಳು ಸಹ ಅತ್ಯಂತ ದುಬಾರಿ ’ವ್ಯವಹಾರ’ವಾಗಿರುವಾಗ ತಕ್ಕಡಿಯ ಮುಳ್ಳು ಯಾರತ್ತ ವಾಲಿದೆ ಎನ್ನುವುದೂ ಊಹಾತೀತ!

ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ತೀವ್ರ ದುರಾಡಳಿತ ಮತ್ತು ಆರ್.ಎಸ್.ಎಸ್. ಪರಿವಾರದ ಕೋಮುದ್ವೇಷದ ಬಹುಮುಖಿ ಅಪಾಯಕಾರಿ ದಾಳಿಗಳಿಂದ ಜನತೆ ಬೇಸತ್ತಿದ್ದಾರೆ ಮತ್ತು ಆತಂಕಿತರಾಗಿದ್ದಾರೆ. ವಿದೇಶಿ ಮತ್ತು ಸ್ವದೇಶಿ ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ಭಾರತ ದೇಶದ ಐಕ್ಯತೆ, ಸಮಗ್ರತೆ, ಪ್ರಗತಿಗೆ ಮಾರಕವಾದ ಫ್ಯಾಸಿಸ್ಟ್ ಸ್ವರೂಪದ ದಾಳಿಗಳನ್ನು ನಡೆಸಲಾಗುತ್ತಿದೆ. ಭಾರತ ದೇಶವನ್ನು ಗಂಡಾಂತರಕ್ಕೆ ದೂಡಲ್ಪಡುವ ನೀತಿಗಳ ವಿರುದ್ಧವಾಗಿ ಎಲ್ಲಾ ದೇಶಪ್ರೇಮಿ, ಜಾತ್ಯಾತೀತ ಶಕ್ತಿಗಳು ಒಂದಾಗಿ ಹೋರಾಡಬೇಕಾಗಿದೆ. ಬಿಜೆಪಿಯ ದುಷ್ಟ ಆಟಗಳಿಗೆ ಸರಿಯಾದ ರೀತಿಯಲ್ಲಿ ಉತ್ತರ ನೀಡುವ ಒಂದು ಅವಕಾಶಕ್ಕಾಗಿ ಮತ್ತು ಅಂತಹ ರಾಜಕೀಯ ಬದಲಾವಣೆಯನ್ನು ಬಯಸಿದ ಜನರಿರುವಾಗ ಕಾಂಗ್ರೆಸ್ ಪಕ್ಷ ಮತ್ತು ಜೆ.ಡಿ.ಎಸ್ ಪಕ್ಷಗಳ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಆದರೀಗ ಅವು ತೆಗೆದುಕೊಂಡ ನಿಲುವು ಅತ್ಯಂತ ಹೊಣೆಗೇಡಿತನ ಮತ್ತು ಸಂದರ್ಭ ಸಾಧಕತೆಯಿಂದ ಕೂಡಿದೆ. ಇದು ಜಾತ್ಯತೀತ ಶಕ್ತಿಗಳಲ್ಲಿ ತೀವ್ರವಾದ ಹತಾಶೆಯನ್ನು ಉಂಟು ಮಾಡಬಲ್ಲದು. ಪರಿಣಾಮವಾಗಿ, ಬಿಜೆಪಿ ಸೋಲಿಸುವ ಕೇಂದ್ರ ಗುರಿಯನ್ನು ಪ್ರಧಾನವಾಗಿಸಿ, ಒಂದು ಸಮರ್ಥ ಪರ್ಯಾಯವನ್ನು ಕಟ್ಟುವ ಜನ ಮಾನಸದೊಳಗಿನ ಪ್ರಕ್ರಿಯೆ ಗೊಂದಲಕ್ಕೂ ಈಡಾಗಬಹುದು. ಹೀಗಾದಲ್ಲಿ ಪ್ರತಿರೋಧವೂ ಹಂಚಿ ಹೋಗಬಹುದು. ಇದರ ಅರ್ಥ ಕೋಮುವಾದಿ ಶಕ್ತಿಗಳನ್ನು ಎದುರಿಸುವ ಎಲ್ಲ ಶಕ್ತಿಗಳ ನಡುವೆ ರಾಜಕೀಯ ಮೈತ್ರಿ ಏರ್ಪಡಬೇಕು ಎಂಬುದಲ್ಲ. ಬದಲಾಗಿ ತಮ್ಮ ಸ್ವಂತ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಲೇ ಒದಗಿ ಬರುವ ನಿರ್ಣಾಯಕ ಸಂದರ್ಭದಲ್ಲಿ  ರಾಜಕೀಯ ಗುರಿ ತಲುಪುವ ಹೋರಾಟವನ್ನು ಹೇಗೆ ತಂತ್ರಬದ್ಧ ಆದ್ಯತೆಯಾಗಿ ನಿರ್ವಹಿಸಬೇಕು ಎನ್ನುವ ಸೂಕ್ಷ್ಮ ಚಿಂತನೆ ಮತ್ತು ಕ್ರಿಯಾಶೀಲತೆಯೇ ಪ್ರಮುಖ ಕರ್ತವ್ಯ ಆಗಿದೆ.

ಹಿಂದಿನ ಚುನಾವಣೆಗಳ ಫಲಿತಾಂಶಗಳನ್ನು ವಿಶ್ಲೇಷಿಸಿದರೆ ಬಿಜೆಪಿಯನ್ನೂ ಒಳಗೊಂಡು ಯಾವುದೇ ಒಂದು ಪಕ್ಷ ಸರಳ ಬಹುಮತದಿಂದಲಾದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಪರಿಸ್ಥಿತಿ ಇದೆಯೇ ಎನ್ನುವುದನ್ನೂ ವಾಸ್ತವಿಕ ನೆಲೆಯಲ್ಲಿ ಯೋಚಿಸಬೇಕು.

ಕರ್ನಾಟಕದ ಇಂದಿನ ರಾಜಕೀಯ ಸಂದರ್ಭದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯ ಬೇಕಾದದ್ದು ಅತ್ಯಂತ ತುರ್ತಿನ ರಾಜಕೀಯ ಅವಶ್ಯಕತೆಯಾಗಿದೆ. ಇದರಿಂದ ರಾಜ್ಯದ ಜನತೆ ಮತ್ತು ವಿಶೇಷವಾಗಿ ಜಾತ್ಯಾತೀತ ರಾಜಕೀಯ ಶಕ್ತಿಗಳು ಈಗಿನ ಬೆಳವಣಿಗೆಗಳಿಂದ ವಿಚಲಿತರಾಗಬಾರದು.

ದೇಶದ ಜನತೆ ಮೋದಿ ಸರ್ಕಾರದ ಬಗ್ಗೆ ಭ್ರಮನಿರಸನ ಗೊಳ್ಳುತ್ತಿರುವಾಗ ಅತ್ಯಂತ ಸೀಮಿತವಾಗಿಯಾದರೂ ದೇಶದಲ್ಲಿ ಇತ್ತೀಚೆಗೆ ನಡೆದ ರಾಜ್ಯಸಭೆಯ ಚುನಾವಣೆಯ ಫಲಿತಾಂಶದಿಂದ ಬಿಜೆಪಿ ಒಂದಿಷ್ಟು ಹುಮ್ಮಸ್ಸು ಪಡೆದಿದೆ. ಇದರ ಪರಿಣಾಮ ಜನತೆಯ ಮೇಲೆ ಮತ್ತಷ್ಟು ಧಾಳಿಗಳು ಹೆಚ್ಚಾಗಲೂಬಹುದು. ಇಂತಹ ಸನ್ನಿವೇಶವನ್ನು ಅತ್ಯಂತ ದೃಢತೆ ಮತ್ತು ವಿಶಾಲವಾದ ಒಗ್ಗಟ್ಟಿನ ನೆಲೆಯಲ್ಲಿ ಎದುರಿಸಲೇಬೇಕು ಬಿಜೆಪಿ ಮತ್ತು ಆರೆಸ್ಸೆಸ್ ನಂತಹ ಪ್ರಬಲ ಶಕ್ತಿಗಳನ್ನು ಎದುರಿಸುವಲ್ಲಿ ಸ್ವಾರ್ಥದ ವ್ಯಕ್ತಿನಿಷ್ಠ ಸಂಕುಚಿತ ರಾಜಕೀಯ ನಿಲುವುಗಳಿಗೆ ಯಾರೂ ಇಳಿಯಬಾರದು. ಈಗಿನ ಆತಂಕವನ್ನು ನಿವಾರಿಸಿ ಫ್ಯಾಸಿಸ್ಟ್ ಮನೋಭಾವದ ಬಿಜೆಪಿಯ ವಿರುದ್ಧ ಹೋರಾಟವನ್ನು ವಿಸ್ತೃತಗೊಳಿಸಲು ಮತ್ತು ಜಾತ್ಯಾತೀತ ಶಕ್ತಿಗಳಲ್ಲಿ ಆತಂಕವನ್ನು ನಿವಾರಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ.

Leave a Reply

Your email address will not be published. Required fields are marked *