ಆಗಸ್ಟ್ 1-15: ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಆಚರಣೆ ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ಸೆಪ್ಟಂಬರ್ 14-24: ಮೋದಿ ಸರಕಾರದ ಧೋರಣೆಗಳ ವಿರುದ್ಧ ಪ್ರಚಾರಾಂದೋಲನ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಆಗಸ್ಟ್ 1-15 ರಿಂದ ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ, ಪಕ್ಷದ ಎಲ್ಲಾ ಕಚೇರಿಗಳಲ್ಲಿ ರಾಷ್ಟ್ರೀಯ ಧ್ವಜಾರೋಹಣ ಮತ್ತು ಸಂವಿಧಾನದ ಪೀಠಿಕೆಯ ಮೇಲೆ ಪ್ರತಿಜ್ಞೆ ಮಾಡುವುದರೊಂದಿಗೆ ಇದು  ಸಮಾಪನಗೊಳ್ಳುತ್ತದೆ. ಸ್ವಾತಂತ್ರ್ಯ ಹೋರಾಟ, ಪ್ರಜಾಪ್ರಭುತ್ವದ ರಕ್ಷಣೆ, ಪ್ರಜಾಸತ್ತಾತ್ಮಕ ಹಕ್ಕುಗಳು, ನಾಗರಿಕ ಸ್ವಾತಂತ್ರ್ಯಗಳು ಮತ್ತು ಭಾರತದ ಜಾತ್ಯತೀತ, ಪ್ರಜಾಸತ್ತಾತ್ಮಕ, ಸಾಂವಿಧಾನಿಕ ಮೌಲ್ಯಗಳಲ್ಲಿ ಕಮ್ಯುನಿಸ್ಟರ ಭವ್ಯ ಪಾತ್ರವನ್ನು ಈ ಅಭಿಯಾನವು ಎತ್ತಿ ತೋರಿಸುತ್ತದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.

ಇದಲ್ಲದೆ, ಸೆಪ್ಟೆಂಬರ್ 14 ರಿಂದ 24 ರವರೆಗೆ, ಜನರ ಜೀವನೋಪಾಯದ ಮೇಲೆ ಬಿಜೆಪಿ ಕೇಂದ್ರ ಸರ್ಕಾರದ ಹೆಚ್ಚುತ್ತಿರುವ ದಾಳಿಗಳ ಕುರಿತು ಪ್ರಚಾರಾಂದೋಲನವನ್ನು  ನಡೆಸಲಾಗುವುದು. ಈ ಕುರಿತ ಪ್ರತಿ ರಾಜ್ಯದಲ್ಲಿನ ಕ್ರಿಯಾ ಯೋಜನೆಯನ್ನು ರಾಜ್ಯ ಸಮಿತಿಗಳು ಯೋಜಿಸುತ್ತವೆ. ಈ ಅಭಿಯಾನವು ರಾಜ್ಯಗಳ ರಾಜಧಾನಿಗಳಲ್ಲಿ ರಾಜ್ಯಮಟ್ಟದ  ಸಾರ್ವಜನಿಕ ಸಭೆಯೊಂದಿಗೆ ಮುಕ್ತಾಯಗೊಳ್ಳಲಿದೆ.

ಇವುಗಳೊಂದಿಗೆ ಕೇರಳ ಎಲ್‌ಡಿಎಫ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳ ವಿರುದ್ಧ ದೇಶಾದ್ಯಂತ ಅಭಿಯಾನಗಳನ್ನು ನಡೆಸಲು  ಸಿಪಿಐ(ಎಂ) ಕೇಂದ್ರ ಸಮಿತಿ ನಿರ್ಧರಿಸಿದೆ. ಈ ಅಭಿಯಾನವು ಎಲ್‌ಡಿಎಫ್ ಸರ್ಕಾರ ಅನುಸರಿಸುತ್ತಿರುವ ಜನಪರ ಪರ್ಯಾಯ ನೀತಿಗಳನ್ನು ಎತ್ತಿ ತೋರಿಸಲಾಗುವುದು ಎಂದು ಅದು ಹೇಳಿದೆ.

ಜುಲೈ 30 ಮತ್ತು 31ರಂದು ನವದೆಹಲಿಯಲ್ಲಿ ಸಭೆ ಸೇರಿದ ಕೇಂದ್ರ ಸಮಿತಿಯ  ಸಭೆಯ ನಂತರ ಕೇಂದ್ರ ಸಮಿತಿ ನೀಡಿರುವ ಹೇಳಿಕೆಯಲ್ಲಿ ಈ ಕರೆಗಳನ್ನು ಕೊಡಲಾಗಿದೆ. ಈ ಹೇಳಿಕೆಯ ಪೂರ್ಣ ಪಾಟ ಹೀಗಿದೆ:

ಸಿಪಿಐ(ಎಂ)ನ 23ನೇ ಮಹಾಧಿವೇಶನದ  ಮುಕ್ತಾಯದ ನಂತರ ಕಳೆದ ನಾಲ್ಕು ತಿಂಗಳುಗಳು ನವ-ಉದಾರವಾದಿ ಸುಧಾರಣೆಗಳ ಆಕ್ರಮಣಕಾರಿ ಅನುಸರಣೆಯಿಂದ ಬಂಟ ಬಂಡವಾಳಶಾಹಿ ಮತ್ತು ಕೋಮುವಾದಿ-ಕಾರ್ಪೊರೇಟ್‍ ಬಂಡವಾಳಶಾಹಿ ನಂಟನ್ನು ಬಲಪಡಿಸಿ  ಭಾರತದ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸುವ ಮತ್ತು ಜನರ ಮೇಲೆ ಅಭೂತಪೂರ್ವ ಹೊರೆಗಳನ್ನು ಹೇರುವ ಜೊತೆಗೆ ಫ್ಯಾಸಿಸ್ಟ್ ತೆರನ ಆರ್‌ಎಸ್‌ಎಸ್‌ನ ಹಿಂದುತ್ವ ಅಜೆಂಡಾವನ್ನು ಆಕ್ರಾಮಕ ರೀತಿಯಲ್ಲಿ ಮುಂದೊತ್ತಲಾಗುತ್ತಿದೆ ಎಂಬುದನ್ನು ಮೈನಡುಗಿಸುವ ರೀತಿಯಲ್ಲಿ  ದೃಢೀಕರಿಸುತ್ತಿವೆ.

ಹಣದುಬ್ಬರದ ನಾಗಾಲೋಟ

ಅಭೂತಪೂರ್ವ ಬೆಲೆಯೇರಿಕೆ, ಇದರಿಂದಾಗಿ ಸಗಟು ಬೆಲೆ ಸೂಚ್ಯಂಕ ಮತ್ತು ಗ್ರಾಹಕ ಬೆಲೆ ಸೂಚ್ಯಂಕಗಳೆರಡೂ ದಾಖಲೆಯ ಎತ್ತರಕ್ಕೆ ಜಿಗಿದಿರುವುದು, ಜನರ ಜೀವನೋಪಾಯವನ್ನು ಧ್ವಂಸಗೊಳಿಸುತ್ತಿದೆ, ಅವರ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತಿದೆ, ಇದರಿಂದಾಗಿ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯ ಮಟ್ಟಗಳನ್ನು ಮತ್ತಷ್ಟು ಇಳಿಯುವಂತಾಗುತ್ತಿದೆ. ಕುಗ್ಗುತ್ತಿರುವ ಆಂತರಿಕ ಬೇಡಿಕೆಯು ಉತ್ಪಾದನಾ ಚಟುವಟಿಕೆಯನ್ನು ಕೆಳಕ್ಕೆ ತಳ್ಳುತ್ತಿದೆ, ಇದು ಅರ್ಥವ್ಯವಸ್ಥೆಯಲ್ಲಿ ಮತ್ತಷ್ಟು ನಿಧಾನಗತಿ ಮತ್ತು ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಿದೆ.

ಈ ಹಣದುಬ್ಬರದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯೊಂದಿಗೆ. ಆಹಾರ ಮತ್ತು ಇಂಧನ ಬೆಲೆಗಳೇ ಮುಖ್ಯ ಅಂಶಗಳಾಗಿವೆ. ಇದರ ಮೇಲೆ ಇತ್ತೀಚಿನ ಸುತ್ತಿನ ಜಿಎಸ್‌ಟಿ ಹೆಚ್ಚಳ ಬಂದಿರುವುದು ದೈನಂದಿನ ಬಳಕೆಯ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಿಪಿಐ(ಎಂ) ಕೇಂದ್ರ ಸಮಿತಿಯು ಜಿಎಸ್‌ಟಿಯಲ್ಲಿ ಹೆಚ್ಚಳ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್/ಸರ್‌ಚಾರ್ಜ್‌ಗಳನ್ನು ಹಿಂಪಡೆಯಬೇಕು ಎಂದು  ಆಗ್ರಹಿಸುತ್ತದೆ.

ಮೋದಿ ಸರ್ಕಾರವು ಜನರ ಮೇಲೆ ಹೊರೆ ಹೇರುವ ಬದಲು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಮಹಾ ಶ್ರೀಮಂತರ ಮೇಲೆ ತೆರಿಗೆ ವಿಧಿಸಬೇಕು.

ದಾಖಲೆ ನಿರುದ್ಯೋಗ

20-24 ವರ್ಷ ವಯಸ್ಸಿನವರಲ್ಲಿ ನಿರುದ್ಯೋಗ ದರ 42%ದಷ್ಟು  ಭಾರೀ ಪ್ರಮಾಣದಲ್ಲಿದೆ. ಇದರ ಜೊತೆಗೇ, ನಮ್ಮ 90 ಕೋಟಿ ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಿ (2020ರಲ್ಲಿ)) 61.2% ದಷ್ಟು ಜನರು ಉದ್ಯೋಗಗಳನ್ನು ಹುಡುಕುವುದನ್ನೇ ನಿಲ್ಲಿಸಿದ್ದಾರೆ. ಶ್ರಮ ಬಲದ ಭಾಗವಹಿಸುವಿಕೆಯ ಪ್ರಮಾಣವು ಅತ್ಯಂತ ಕೆಳಮಟ್ಟದಲ್ಲಿ, 38.8% ರಷ್ಟಿದೆ. ಇದು ಅತಿ ಹೆಚ್ಚಾಗಿ ತಟ್ಟಿರುವುದು ಮಹಿಳೆಯರನ್ನು. ಕಳೆದ ಎಂಟು ವರ್ಷಗಳಲ್ಲಿ ಮೋದಿ ಸರ್ಕಾರವು ಅತ್ಯಲ್ಪ ಪ್ರಮಾಣದಲ್ಲಿ, ಶೇಕಡಾ 0.33 ಅರ್ಜಿದಾರರಿಗೆ ಮಾತ್ರ ಸರ್ಕಾರಿ ಉದ್ಯೋಗಗಳನ್ನು ಒದಗಿಸಿದೆ ಎಂಬುದನ್ನು ಸಂಸತ್ತಿನಲ್ಲಿ ಒಪ್ಪಿಕೊಂಡಿದೆ.. ಹತ್ತು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.

ಮೋದಿ ಸರ್ಕಾರವು ತಕ್ಷಣವೇ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು MGNREGS ಗಾಗಿ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸಬೇಕು ಮತ್ತು ನಮ್ಮ ಯುವಜನತೆ ಹಾಗೂ ಜನಸಂಖ್ಯಾ ಲಾಭಾಂಶವನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು.

ಆದಿವಾಸಿಗಳ ಹಕ್ಕುಗಳ ಮೇಲೆ ದಾಳಿ

ಅರಣ್ಯ ಸಂರಕ್ಷಣಾ ಕಾಯಿದೆಯಡಿಯಲ್ಲಿ ತಿದ್ದುಪಡಿ ಮಾಡಲಾದ ನಿಯಮಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಕೇಂದ್ರ ಸಮಿತಿ ಒತ್ತಾಯಿಸುತ್ತದೆ.  ಅರಣ್ಯ ಭೂಮಿಯನ್ನು ಬೇರೆ ಉದ್ದೇಶಕ್ಕೆ  ತಿರುಗಿಸುವ ಮೊದಲು ಗ್ರಾಮ ಸಭೆಗಳು, ಬುಡಕಟ್ಟು ಸಮುದಾಯಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಪೂರ್ವ-ಸಮ್ಮತಿಯನ್ನು ಕಡ್ಡಾಯವಾಗಿ  ಪಡೆಯಬೇಕು. ಅವರ  ಈ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಖಾಸಗಿ ಕಾರ್ಪೊರೇಟ್‌ಗಳಿಗೆ ಗರಿಷ್ಟ ಲಾಭ ಪಡೆಯಲು ಮತ್ತು ಅರಣ್ಯಗಳ ನಾಶಕ್ಕೆ ಈ ತಿದ್ದುಪಡಿಗಳು ಅನುಕೂಲ ಮಾಡಿ ಕೊಡುತ್ತದೆ.  ಇದು ಹವಾಮಾನ ಬದಲಾವಣೆಯ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ.

ಪೂರ್ಣಪ್ರಮಾಣದ  ಸರ್ವಾಧಿಕಾರ

ಇ.ಡಿ.(ಜಾರಿ ನಿರ್ದೇಶನಾಲಯ) ಮತ್ತು ಸಿಬಿಐ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಮತ್ತು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುವ ಮೋದಿ ಸರ್ಕಾರದ ರಾಜಕೀಯ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನೇನು ನಿವೃತ್ತಿಯಾಗಲಿದ್ದ ನ್ಯಾಯಾಧೀಶರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ, ಅವರ ನಿವೃತ್ತಿಯ ಸ್ವಲ್ಪವೇ ಮೊದಲು ನೀಡಿದ ತೀರ್ಪು ಇ.ಡಿ. ಯನ್ನು ಮತ್ತಷ್ಟು ಮಾರಕವಾಗಿ ಸಜ್ಜುಗೊಳಿಸುವ ಹಣ ಮಡಿಗೊಳಿಸುವುದಕ್ಕೆ ತಡೆ ಕಾಯ್ದೆ(PMLA)ಗೆ 2019ರ ಎಲ್ಲಾ ತಿದ್ದುಪಡಿಗಳನ್ನು ಎತ್ತಿಹಿಡಿದಿದೆ. ಇದು ಪ್ರಜಾಪ್ರಭುತ್ವದ ಮೇಲೆ ಅತ್ಯಂತ ಹಾನಿಕಾರಕ ಏಟು.

ಸಂಸತ್ತಿನ ಮೇಲೆ ಪ್ರಹಾರ: ಬೆಲೆ ಏರಿಕೆ, ನಿರುದ್ಯೋಗ ಮುಂತಾದ ಜನರ ಜ್ವಲಂತ ಸಮಸ್ಯೆಗಳ ಕುರಿತು ಯಾವುದೇ ಮಹತ್ವದ ನಿರ್ಣಯವನ್ನು ಚರ್ಚಿಸಲು ನಿರಾಕರಿಸುವ ಮೂಲಕ ಮೋದಿ ಸರ್ಕಾರ ಸಂಸತ್ತಿನ ಮೇಲೆ ಅಭೂತಪೂರ್ವ ದಾಳಿ ನಡೆಸುತ್ತಿದೆ. 27 ಸಂಸತ್ ಸದಸ್ಯರನ್ನು ಈ ಅಧಿವೇಶನದ ಅವಧಿಗೆ ಅಮಾನತುಗೊಳಿಸಲಾಗಿದೆ. ಸ್ವತಂತ್ರ ಭಾರತದಲ್ಲಿ ಇದು ಅಭೂತಪೂರ್ವ.

ಮಾನವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಖ್ಯಾತ ಪ್ರತಿಪಾದಕಿ ಮತ್ತು ಕೋಮುವಾದದ ವಿರುದ್ಧ ಧೀರ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿದ ವಿಧಾನವನ್ನು ಕೇಂದ್ರ ಸಮಿತಿ ಖಂಡಿಸುತ್ತದೆ.  ಈ ಬಂಧನವನ್ನು ಮತ್ತೆ ಅದೇ ನ್ಯಾಯಾಧೀಶರ ನೇತೃತ್ವದ ಪೀಠದ ಸುಪ್ರಿಂ ಕೋರ್ಟ್‍  ತೀರ್ಪು ಸುಗಮಗೊಳಿಸಿತು.

ಜುಬೇರ್ ಅಹ್ಮದ್ ಅವರನ್ನು ಕ್ಷುಲ್ಲಕ ಆಧಾರದ ಮೇಲೆ ಬಂಧಿಸಿದ ರೀತಿ, ಈ ಮೋದಿ ಸರ್ಕಾರದಲ್ಲಿ ಹಿಂಸಾಚಾರಕ್ಕೆ ಕಾರಣವಾಗುವ ದ್ವೇಷ ಭಾಷಣ ಮಾಡುವವರನ್ನು ಮತ್ತು  ಪ್ರಚೋದಿಸುವವರನ್ನು ಪ್ರಭುತ್ವು ರಕ್ಷಿಸುತ್ತದೆ, ಆದರೆ ಅಂತಹ ಭಾಷಣಗಳನ್ನು ಬಯಲಿಗೆಳೆದು ಸತ್ಯವನ್ನು ಜನರ ಎದುರು ತರುವವರನ್ನು ಬಂಧಿಸಲಾಗುತ್ತದೆ, ಕಂಬಿ ಎಣಿಸುವಂತೆ ಮಾಡಲಾಗುತ್ತದೆ.

ಭೀಮಾ ಕೋರೆಗಾಂವ್ ಕೈದಿಗಳು ಮೂರು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಪತ್ರಕರ್ತರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವರನ್ನು ಕರಾಳ  ನಿರ್ಬಂಧ ಕಾಯ್ದೆಗಳಡಿ ಬಂಧಿಸಲಾಗಿದೆ.

ತೀಸ್ತಾ ಸೆಟಲ್ವಾಡ್, ಆರ್.ಬಿ.ಶ್ರೀಕುಮಾರ್, ಭೀಮಾ ಕೋರೆಗಾಂವ್ ಬಂಧಿಗಳು ಮತ್ತಿತರರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ಸಮಿತಿ  ಒತ್ತಾಯಿಸುತ್ತದೆ.

ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಪಿಡುಗು

ಆಳುವ ಪಕ್ಷದ ಕೃಪಾಪೋಷಣೆಯಲ್ಲಿ ಹಿಂದುತ್ವ ಸಂಘಟನೆಗಳಿಂದ ಕೋಮು ಧ್ರುವೀಕರಣದ ಘಟನೆಗಳು ಪಿಡುಗಿನಂತೆ ಹೆಚ್ಚುತ್ತಿರುವುದನ್ನು, ಇದರಿಂಧಾಗಿ ಹಲವು ರಾಜ್ಯಗಳಲ್ಲಿ ಹಿಂಸಾಚಾರದ ಘಟನೆಗಳು ಮತ್ತು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸುವ ಘಟನೆಗಳು ಸಂಭವಿಸುತ್ತಿರುವುದನ್ನು ಕೇಂದ್ರ ಸಮಿತಿ  ಖಂಡಿಸುತ್ತದೆ. ದೆಹಲಿ ಮತ್ತು ಇತರ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಬುಲ್ಡೋಜರ್ ರಾಜಕೀಯದ ದೊಡ್ಡ ಪ್ರಮಾಣದ ನಿಯೋಜನೆಯು ಕೋಮು ಧ್ರುವೀಕರಣವನ್ನು ಮತ್ತಷ್ಟು ತೀಕ್ಷ್ಣಗೊಳಿಸಿದೆ. ಆರೆಸ್ಸೆಸ್/ಬಿಜೆಪಿ ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯದ ಅವಶೇಷಗಳ ಮೇಲೆ ಹಿಂದುತ್ವ ರಾಷ್ಟ್ರದ ಉದ್ದೇಶವನ್ನು ಸಾಧಿಸಲಿಕ್ಕಾಗಿ ಜನರಲ್ಲಿ ಹಿಂದುತ್ವ ಪ್ರಜ್ಞೆಯನ್ನು ಮೂಡಿಸುವುದನ್ನು ಕ್ರೋಡೀಕರಿಸಲು ಧ್ರುವೀಕರಣ ಮತ್ತು ಹಿಂಸಾಚಾರಕ್ಕೆ ಕಾರಣವಾಗುವ ದ್ವೇಷ ಮತ್ತು ಭಯೋತ್ಪಾದನೆಯ ವಿಷಕಾರಿ ಪ್ರಚಾರವನ್ನು ಹರಡುತ್ತಿವೆ.

ಹೊಸ ಸಂಸತ್ ಭವನದ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಪ್ರಧಾನಿಯವರು ಹಿಂದೂ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸುವುದರೊಂದಿಗೆ ಮತ್ತೊಮ್ಮೆ ಭಾರತೀಯ ಗಣರಾಜ್ಯದ ಸ್ವರೂಪದ ಮೇಲೆ ಪ್ರಹಾರ ಕಾಣಬಂದಿದೆ. ಇದು ಸ್ಪಷ್ಟವಾಗಿ ಭಾರತೀಯ ಪ್ರಭುತ್ವ  ಮತ್ತು ಸರ್ಕಾರವನ್ನು ಭಾರತದ ಸಂವಿಧಾನದೊಂದಿಗೆ ಗುರುತಿಸುವ ಬದಲು ಹಿಂದುತ್ವದೊಂದಿಗೆ ಗುರುತಿಸುವ ಕೃತ್ಯ.

ಭಾರತೀಯ ಸಂವಿಧಾನ, ಜಾತ್ಯತೀತ ಪ್ರಜಾಪ್ರಭುತ್ವ ಮತ್ತು ನಮ್ಮ ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಖಾತರಿಯ ರಕ್ಷಣೆಗಾಗಿ ಒಟ್ಟುಗೂಡಬೇಕು ಎಂದು ಎಲ್ಲಾ ಜಾತ್ಯತೀತ ಮನಸ್ಸಿನ ಜನರು ಮತ್ತು ಶಕ್ತಿಗಳಿಗೆ ಕೇಂದ್ರ ಸಮಿತಿ ಮನವಿ ಮಾಡುತ್ತದೆ.

ಕೇರಳದ ಬೆಳವಣಿಗೆಗಳು

ಕೇರಳ ಎಲ್‌ಡಿಎಫ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರೀಯ ಸಂಸ್ಥೆಗಳನ್ನು  ಬಲವಾಗಿ ದುರುಪಯೋಗ ಪಡಿಸಿಕೊಳ್ಳಲು ತೀವ್ರ ಪ್ರಯತ್ನಗಳನ್ನು ನಡೆಸುತ್ತಿರುವುದನ್ನು ಕೇಂದ್ರ ಸಮಿತಿ ಬಲವಾಗಿ ಖಂಡಿಸಿದೆ. ರಾಜ್ಯದಲ್ಲಿ ಎಲ್‌ಡಿಎಫ್ ಸರ್ಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಚಳುವಳಿಗಳ ಸರಣಿಯನ್ನು ಆರಂಭಿಸಿದೆ. ಎಲ್‌ಡಿಎಫ್ ಸರ್ಕಾರದ ವಿರುದ್ಧ ಬಿಜೆಪಿ ಜತೆಗೂಡಿ  ಅದು ಕಾರ್ಯನಿರ್ವಹಿಸುತ್ತಿದೆ.

ಕೇಂದ್ರದ ಕೂಡು ಆದಾಯದಲ್ಲಿ ಕೇರಳಕ್ಕೆ ಸಲ್ಲಬೇಕಾದ ಕಾನೂನುಬದ್ಧ ಪಾಲನ್ನು ನಿರಾಕರಿಸುವಲ್ಲಿ ಕೇಂದ್ರ ಸರ್ಕಾರವು ಬಳಸಿದ ತಾರತಮ್ಯದ ನೀತಿಗಳು ಮತ್ತು ತಂತ್ರಗಳನ್ನು ಕೇಂದ್ರ ಸಮಿತಿ  ಬಲವಾಗಿ ಖಂಡಿಸುತ್ತದೆ . ಇದು  ತೀವ್ರ ಸಂಪನ್ಮೂಲ ಬಿಕ್ಕಟ್ಟನ್ನು ಹೇರುತ್ತದೆ. ಕೇರಳ ಎಲ್‌ಡಿಎಫ್ ಸರ್ಕಾರ ಮತ್ತು ಅದರ ಪರ್ಯಾಯ ಜನಪರ ನೀತಿಗಳ ರಕ್ಷಣೆಗಾಗಿ ಮತ್ತು ಎಲ್‌ಡಿಎಫ್ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಕೇಂದ್ರದ ಹಸ್ತಕ್ಷೇಪವನ್ನು ಖಂಡಿಸಲು ಮತ್ತು ತಾರತಮ್ಯವನ್ನು ಖಂಡಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸಲು ಕೇಂದ್ರ ಸಮಿತಿ ನಿರ್ಧರಿಸಿದೆ.

ತ್ರಿಪುರಾ ಬೆಳವಣಿಗೆಗಳು

ಬಿಜೆಪಿಯು ತನ್ನ ರಾಜ್ಯ ಸರ್ಕಾರ ಒಟ್ಟಾರೆಯಾಗಿ ಜನರ ವಿರುದ್ಧ ಮತ್ತು ವಿಶೇಷವಾಗಿ ತ್ರಿಪುರಾದಲ್ಲಿ ಸಿಪಿಐ(ಎಂ) ಮತ್ತು ಅದರ ಕಾರ್ಯಕರ್ತರ ವಿರುದ್ಧ ನಡೆಸಿದ ಫ್ಯಾಸಿಸ್ಟ್ ತೆರನ ದಾಳಿಗಳನ್ನು ಕೇಂದ್ರ ಸಮಿತಿ ಖಂಡಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯದ ಮುಖ್ಯಮಂತ್ರಿಯನ್ನು ಬದಲಾಯಿಸಿದ್ದು, ರಾಜಕೀಯ ಚಟುವಟಿಕೆಗಳಲ್ಲಿ ಜನರು ಭಾಗವಹಿಸದಂತೆ ಭಯೋತ್ಪಾದನೆ ಮತ್ತು ಭೀತಿಯ ವಾತಾವರಣವನ್ನು ಹೆಚ್ಚಿಸಿದೆ. ಬಿಜೆಪಿ ಸರ್ಕಾರ ಮತ್ತು ಅದರ ಭಯೋತ್ಪಾದನೆ ಮತ್ತು ಕೋಮು ಧ್ರುವೀಕರಣದ ರಾಜಕೀಯದ ವಿರುದ್ಧ ಜಾತ್ಯತೀತ ಶಕ್ತಿಗಳ ಅತಿದೊಡ್ಡ ಅಣಿನೆರಿಕೆಯನ್ನು ರೂಪಿಸಲು ಸಿಪಿಐ(ಎಂ) ನಿರ್ಧರಿಸಿದೆ.

ಬಂಗಾಳದ ಬೆಳವಣಿಗೆಗಳು

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರದಲ್ಲಿ ಟಿಎಂಸಿ ಯ ಪ್ರಬಲ ವ್ಯಕ್ತಿ ಮತ್ತು ಸಚಿವ, ಪಾರ್ಥ ಚಟರ್ಜಿಯ ಬಂಧನವು ಭಯೋತ್ಪಾದನೆ ಮತ್ತು ಹಿಂಸಾಚಾರದ ರಾಜಕೀಯದೊಂದಿಗೆ ಟಿಎಂಸಿ ಸರ್ಕಾರದ ಅಡಿಯಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರದ ಬಗ್ಗೆ ಸಿಪಿಐ(ಎಂ)ನ ನಿಲುವನ್ನು ಪ್ರತಿಧ್ವನಿಸುತ್ತದೆ. ಬಂಧನದ ಹಿನ್ನೆಲೆಯಲ್ಲಿ ಸಚಿವರನ್ನು ವಜಾಗೊಳಿಸಿರುವುದು ಟಿಎಂಸಿ ಸರ್ಕಾರದ ಜನವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಸ್ವಭಾವವನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಹಿಂದಿನ ನಾರದ, ಶಾರದ ಮತ್ತು ಇತರ ಚಿಟ್ ಫಂಡ್ ಹಗರಣಗಳ ವಿಚಾರಣೆಯಲ್ಲಿ ಬಿಜೆಪಿ ಸರ್ಕಾರದ ಅಡಿಯಲ್ಲಿ ಕೇಂದ್ರ ಏಜೆನ್ಸಿಗಳು ಮುಂದುವರೆಯದೆ  ಅವು ಹಾಗೆಯೇ ಉಳಿದುಕೊಂಢಿವೆ.

ರಾಜ್ಯದಲ್ಲಿ ಸಿಪಿಐ(ಎಂ) ಮತ್ತು ಎಡರಂಗವು ಸಾಕಷ್ಟು ಜನಬೆಂಬಲವನ್ನು ಪಡೆಯುತ್ತಿದ್ದು ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಆಯೋಜಿಸಿದೆ.

ಕೇಂದ್ರ ಸಮಿತಿ  ಕರೆಗಳು:

  1. ಆಗಸ್ಟ್ 1-15, ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸುವುದು, ಪಕ್ಷದ ಎಲ್ಲಾ ಕಚೇರಿಗಳಲ್ಲಿ ರಾಷ್ಟ್ರೀಯ ಧ್ವಜಾರೋಹಣ ಮತ್ತು ಸಂವಿಧಾನದ ಪೀಠಿಕೆಯ ಮೇಲೆ ಪ್ರತಿಜ್ಞೆ ಮಾಡುವುದರೊಂದಿಗೆ ಅದು ಸಮಾಪನಗೊಳ್ಳುತ್ತದೆ. ಸ್ವಾತಂತ್ರ್ಯ ಹೋರಾಟ, ಪ್ರಜಾಪ್ರಭುತ್ವದ ರಕ್ಷಣೆ, ಪ್ರಜಾಸತ್ತಾತ್ಮಕ ಹಕ್ಕುಗಳು, ನಾಗರಿಕ ಸ್ವಾತಂತ್ರ್ಯಗಳು ಮತ್ತು ಭಾರತದ ಜಾತ್ಯತೀತ, ಪ್ರಜಾಸತ್ತಾತ್ಮಕ, ಸಾಂವಿಧಾನಿಕ ಮೌಲ್ಯಗಳಲ್ಲಿ ಕಮ್ಯುನಿಸ್ಟರ ಭವ್ಯ ಪಾತ್ರವನ್ನು ಅಭಿಯಾನವು ಎತ್ತಿ ತೋರಿಸುತ್ತದೆ.
  2. ಸೆಪ್ಟೆಂಬರ್ 14 ರಿಂದ 24 ರವರೆಗೆ, ಜನರ ಜೀವನೋಪಾಯದ ಮೇಲೆ ಬಿಜೆಪಿ ಕೇಂದ್ರ ಸರ್ಕಾರದ ಹೆಚ್ಚುತ್ತಿರುವ ದಾಳಿಗಳ ಕುರಿತು ಪ್ರಚಾರಾಂದೋಲನವನ್ನು ನಡೆಸುವುದು. ಪ್ರತಿ ರಾಜ್ಯದಲ್ಲಿನ ಕ್ರಿಯಾ ಯೋಜನೆಯನ್ನು ರಾಜ್ಯ ಸಮಿತಿಗಳು ಯೋಜಿಸುತ್ತವೆ. ಈ ಅಭಿಯಾನವು ರಾಜ್ಯ ರಾಜಧಾನಿಗಳಲ್ಲಿ ರಾಜ್ಯಮಟ್ಟದ  ಸಾರ್ವಜನಿಕ ಸಭೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.
  3. ಕೇರಳ ಎಲ್‌ಡಿಎಫ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳ ವಿರುದ್ಧ ದೇಶಾದ್ಯಂತ ಅಭಿಯಾನಗಳನ್ನು ನಡೆಸುವುದು. ಈ ಅಭಿಯಾನವು ಎಲ್‌ಡಿಎಫ್ ಸರ್ಕಾರ ಅನುಸರಿಸುತ್ತಿರುವ ಜನಪರ ಪರ್ಯಾಯ ನೀತಿಗಳನ್ನು ಎತ್ತಿ ತೋರಿಸುತ್ತದೆ.

Leave a Reply

Your email address will not be published. Required fields are marked *