ಆದಿವಾಸಿ ಸಮುದಾಯಗಳ ಐಕ್ಯ ಚಳುವಳಿಯನ್ನು ದುರ್ಬಲಗೊಳಿಸಲು ಕ್ರಿಶ್ಚಿಯನ್ ಸಮುದಾಯದ ಮೇಲೆ ಹಿಂಸಾಚಾರ

ಸಿಪಿಐ(ಎಂ) ನಿಯೋಗದ ಭೇಟಿ ಮತ್ತು ಛತ್ತೀಸ್‌ಗಡ ಮುಖ್ಯಮಂತ್ರಿಗಳಿಗೆ ಆಗ್ರಹ

ಛತ್ತೀಸ್‌ಗಡದಲ್ಲಿ ಇತ್ತೀಚೆಗೆ ಕ್ರಿಶ್ಚಿಯನ್ನರ ವಿರುಧ ಹಿಂಸಾಚಾರದ ಹಲವು ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರನ್ನು ಭೇಟಿಯಾಗಿ ಸತ್ಯಸಂಗತಿಗಳನ್ನು ತಿಳಿಯಲ ಬೃಂದಾ ಕಾರಟ್, ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ ಬ್ಯುರೊ ಸದಸ್ಯರು, ಧರಂರಾಜ್ ಮಹಾಪಾತ್ರ, ಸಿಪಿಐ(ಎಂ)ನ ಛತ್ತೀಸ್‌ಗಢ ರಾಜ್ಯ ಸಮಿತಿಯ ಹಂಗಾಮಿ ಕಾರ್ಯದರ್ಶಿ, ಬಾಲ್ ಸಿಂಗ್, ರಾಜ್ಯ ಕಾರ್ಯದರ್ಶಿ, ಆದಿವಾಸಿ ಏಕತಾ ಮಹಾಸಭಾ, ನಜೀಬ್ ಖುರೇಷಿ ಮತ್ತು ವಾಸುದೇವ್ ದಾಸ್ ಅವರುಗಳಿದ್ದ ನಿಯೋಗವೊಂದು ಜನವರಿ 20ರಿಂದ 22 ರ ವರೆಗೆ ಛತ್ತೀಸ್‌ಗಢಕ್ಕೆ ಭೇಟಿ ನೀಡಿ ಕ್ರಿಶ್ಚಿಯನ್ ಸಮುದಾಯದ ವಿರುದ್ಧದ ಈ ಹಿಂಸಾಚಾರದ ಪೀಡಿತರು ಮತ್ತು ಸಂತ್ರಸ್ತ ಜನರನ್ನು ಭೇಟಿ ಮಾಡಿತು. ಭೇಟಿಯ ನಂತರ ಜನವರಿ 22 ರಂದು ಛತ್ತೀಸ್‌ಗಢದ ಮುಖ್ಯಮಂತ್ರಿಯವರಿಗೆ ರಾಜ್ಯದ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಜನಸಂಖ್ಯೆಯ ಸಂಕಷ್ಟಗಳನ್ನು ವಿವರಿಸುವ ಪತ್ರವನ್ನು ಸಲ್ಲಿಸಿದ ನಿಯೋಗ ತಾನು ಎತ್ತಿರುವ ಪ್ರಶ್ನೆಗಳ ಮೇಲೆ ತುರ್ತಾಗಿ ಕ್ರಮಗಳನ್ನು ಕೈಗೊಂಡು ಅವನ್ನು ಪರಿಹರಿಸಬೇಕು ಎಂದು ಆಗ್ರಹಿಸಿದೆ. ಈ ಹಿಂಸಾಚಾರಗಳಲ್ಲಿ ಬಿಜೆಪಿಯ ಪಾತ್ರ ಕಂಡು ಬಂದಿದೆ. ಆದರೆ ಸರಕಾರದ ಯಾವುದೇ ಸಚಿವರು ಅಥವಾ ಸರ್ಕಾರದಿಂದ ನಿಯೋಜಿಸಲಾದ ಯಾವುದೇ ಹಿರಿಯ ನಾಯಕರು ಈ ಪ್ರದೇಶಕ್ಕೆ ಭೇಟಿ ನೀಡಿಲ್ಲ ಏಕೆ ಎಂದು ಈ ಪತ್ರದಲ್ಲಿ ಆಶ್ಚರ್ಯ ವ್ಯಕ್ತಪಡಿಸಲಾಗಿದೆ. ಈ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ: ನಿಯೋಗದಲ್ಲಿನ ಐದು ಸದಸ್ಯರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ಆತ್ಮೀಯ ಮುಖ್ಯಮಂತ್ರಿ ಶ್ರೀ ಬಘೇಲ ಜೀ,

ನಮಸ್ಕಾರ.

ಉತ್ತರ ಬಸ್ತಾರ್ ಜಿಲ್ಲೆಗಳಾದ ಕಂಕೇರ್, ಕೊಡಗಾಂವ್ ಮತ್ತು ನಾರಾಯಣಪುರದಲ್ಲಿ ಕ್ರಿಶ್ಚಿಯನ್ ಸಮುದಾಯದವರ ಮೇಲೆ ಹಲ್ಲೆಗಳು ನಡೆದಿರುವ ಕೆಲವು ತುರ್ತು ಪ್ರಶ್ನೆಗಳ ಬಗ್ಗೆ ನಿಮ್ಮ ಗಮನ ಸೆಳೆಯಲು ಈ ಜ್ಞಾಪಕ ಪತ್ರ. ಬೃಂದಾ ಕಾರಟ್ (ಪಾಲಿಟ್ ಬ್ಯೂರೋ ಸದಸ್ಯರು) ಧರಂರಾಜ್ ಮಹಾಪಾತ್ರ (ಛತ್ತೀಸ್‌ಗಢ ರಾಜ್ಯ ಸಮಿತಿಯ ಹಂಗಾಮಿ ಕಾರ್ಯದರ್ಶಿ), ಬಾಲ್ ಸಿಂಗ್, (ರಾಜ್ಯ ಕಾರ್ಯದರ್ಶಿ, ಆದಿವಾಸಿ ಏಕತಾ ಮಹಾಸಭಾ) ನಜೀಬ್ ಖುರೇಷಿ ಮತ್ತು ವಾಸುದೇವ್ ದಾಸ್ ಅವರನ್ನೊಳಗೊಂಡ ಸಿಪಿಐ(ಎಂ) ಮತ್ತು ಆದಿವಾಸಿ ಅಧಿಕಾರ ರಾಷ್ಟ್ರೀಯ ಮಂಚ್‌ನ ನಿಯೋಗವು ಜನವರಿ 20 ರಿಂದ 22 ರವರೆಗೆ ಈ ಪ್ರದೇಶಗಳಿಗೆ ಭೇಟಿ ನೀಡಿದೆ. ನಿಯೋಗದ ಉದ್ದೇಶವು ಹಿಂಸಾಚಾರದ ಸಂತ್ರಸ್ತರಿಗೆ ಸೌಹಾರ್ದವನ್ನು ವ್ಯಕ್ತಪಡಿಸುವುದು ಮತ್ತು ಇದುವರೆಗೆ ಸಾಮರಸ್ಯದಿಂದ ಬದುಕುತ್ತಿದ್ದ ಆದಿವಾಸಿ ಸಮುದಾಯಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಗುವ ಇಂತಹ ತೀಕ್ಷ್ಣವಾದ ವಿಭಜನೆಗಳು ಹೇಗೆ ಸಂಭವಿಸಿತು ಎಂಬುದನ್ನು ಅರ್ಥಮಾಡಿಕೊಳ್ಳುವುದು. ಹಿಂಸಾಚಾರದ ಸಂತ್ರಸ್ತರು, ಪ್ಯಾಸ್ಟರ್‌ಗಳು, ಪಾದ್ರಿಗಳು, ಆದಿವಾಸಿಗಳು, ಆದಿವಾಸಿ ಸಂಘಟನೆಗಳ ಸದಸ್ಯರು, ಸ್ಥಳೀಯ ಸಂಸ್ಥೆಗಳ ಕೆಲವು ಚುನಾಯಿತ ಸದಸ್ಯರು, ಕಾರ್ಯಕರ್ತರು, ಛತ್ತೀಸ್‌ಗಢದ ಪ್ರಗತಿಪರ ಕ್ರಿಶ್ಚಿಯನ್ ಒಕ್ಕೂಟದ ಮುಖಂಡರು ಸೇರಿದಂತೆ 100 ಕ್ಕೂ ಹೆಚ್ಚು ಜನರನ್ನು ನಿಯೋಗ ಭೇಟಿ ಮಾಡಿತು. ನಾವು ಕಂಕೇರ್ ಜಿಲ್ಲೆಯ ಎಸ್‌ಪಿ ನಾರಾಯಣಪುರದ ಕಲೆಕ್ಟರ್, ಕೊಡಗಾಂವ್‌ನ ಎಸ್‌ಡಿಎಂ ಮತ್ತು ಇತರ ಕೆಲವು ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ.

  1. ಪೀಡಿತರನ್ನು ಮತ್ತು ಸಂತ್ರಸ್ತ ಜನರನ್ನು ಭೇಟಿ ಮಾಡಲು ಯಾವುದೇ ಸಚಿವರು ಅಥವಾ ಸರ್ಕಾರದಿಂದ ನಿಯೋಜಿಸಲಾದ ಯಾವುದೇ ಹಿರಿಯ ನಾಯಕರು ಈ ಪ್ರದೇಶಕ್ಕೆ ಭೇಟಿ ನೀಡಿಲ್ಲ ಎಂದು ತಿಳಿದು ನಮಗೆ ಆಶ್ಚರ್ಯವಾಯಿತು. ನಾವು ಇದನ್ನು ನಿಮ್ಮೊಂದಿಗೆ ಪ್ರಸ್ತಾಪಿಸುತ್ತೇವೆ ಏಕೆಂದರೆ ಇದು ವಿವಿಧ ಅಧಿಕಾರಿಗಳೊಂದಿಗಿನ ನಮ್ಮ ಸಂವಾದದಲ್ಲಿ ನಾವು ಒಂದು ನಿಲುವನ್ನು ಗಮನಿಸಿದ್ದೇವೆ, ಅದೆಂದರೆ, ಹಿಂಸಾಚಾರ ಪೀಡಿತರ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯದ ಮತ್ತು ಅವರ ಸಂಕಟಗಳತ್ತ ಪ್ರಮಾಣವನ್ನು ಅಂದಾಜು ಮಾಡದಿರುವುದು. ಮನೆಗಳು, ಚರ್ಚ್‍ಗಳು, ಸಾಮಾನುಗಳು, ಜೀವನೋಪಾಯಗಳಿಗೆ ವ್ಯಾಪಕ ಹಾನಿಯಾಗಿದೆ. ಆದರೂ ಇನ್ನೂ ಯಾವುದೇ ಪರಿಹಾರವನ್ನು ಪಡೆದ ಒಂದೇ ಒಂದು ಕುಟುಂಬವಾಗಲೀ ಅಥವಾ ವ್ಯಕ್ತಿಯಾಗಲೀ ಇಲ್ಲ, ಅಥವಾ ಉಂಟಾದ ಹಾನಿಯನ್ನು ನಿರ್ಧರಿಸುವ ಯಾವುದೇ ಪ್ರಯತ್ನ ನಡೆದಿಲ್ಲ. ಸುಮಾರು 1500 ಸಂತ್ರಸ್ತ ಜ£ರು ತಮ್ಮ ಹಳ್ಳಿಗಳಿಂದ ಪಲಾಯನ ಮಾಡಲೇ ಬೇಕಾಗಿ ಬಂದು ಅಥವ ಬಲವಂತವಾಗಿ ಓಡಿಸಲ್ಪಟ್ಟು ಆಡಳಿತ ನಡೆಸುವ ಪರಿಹಾರ ಶಿಬಿರಗಳಲ್ಲಿ ಇದ್ದರು, ಅವರನ್ನು ಈಗ “ಮನೆಗೆ ಕಳುಹಿಸಲಾಗಿದೆ”. ಆಡಳಿತದಿಂದ ಅವರ ಸುರಕ್ಷತೆಗೆ ಭರವಸೆ ನೀಡಲಾಗಿದ್ದರೂ, ಮತ್ತೆ ತಮ್ಮ ಮನೆಗಳನ್ನು ತೊರೆಯ ಬೇಕಾಗಿ ಬಂದ ಅನೇಕ ಕುಟುಂಬಗಳನ್ನು ನಾವು ಭೇಟಿ ಮಾಡಿದ್ದೇವೆ. ಅವರು ಸಂಬಂಧಿಕರೊಂದಿಗೆ ಅಥವಾ ಚರ್ಚ್‍ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಒಂದು ಉದಾಹರಣೆಯನ್ನು ನೀಡುವುದಾದರೆ, ತೆಂಬ್ರುಗಾಂವ್ ಗ್ರಾಮದಲ್ಲಿ, ಆಡಳಿತವು ವ್ಯವಸ್ಥೆ ಮಾಡಿದ್ದ ಪಿಕಪ್ ಟ್ರಕ್ ಸಂತ್ರಸ್ತರೊಂದಿಗೆ ಗ್ರಾಮವನ್ನು ತಲುಪಿದಾಗ “ತಿಲಕಗಳನ್ನು” ಹಿಡಿದಿದ್ದ ಗುಂಪೊಂದು ಅವರಿಗೆ ಎದುರಾಯಿತು. ಅವರು “ಸಮಾಜ”ಕ್ಕೆ “ಹಿಂತಿರುಗುವ” – ಘರ್ ವಾಪಸಿಯ- ಸಂಕೇತವಾಗಿ ತಿಲಕಗಳನ್ನು ಹಚ್ಚಿಕೊಂಡರೆ ಮಾತ್ರ ಅವರು ತಮ್ಮ ಗ್ರಾಮವನ್ನು ಪ್ರವೇಶಿಸಬಹುದು, ಇಲ್ಲದಿದ್ದರೆ ಅವರನ್ನು ಗ್ರಾಮದೊಳಕ್ಕೆ ಬಿಡಲಾಗವುದಿಲ್ಲ ಎಂದು ಹೇಳಿದರು. ಟ್ರಕ್‌ನಲ್ಲಿದ್ದವರು ಯಾರೂ ಇಂತಹ ಕಾನೂನುಬಾಹಿರ ಷರತ್ತುಗಳನ್ನು ಒಪ್ಪದ ಕಾರಣ, ಅವರನ್ನು ಅವರ ಮನೆಗಳಿಗೆ ಹೋಗಲು ಬಿಡಲಿಲ್ಲ. ಕೆಲವು ಗ್ರಾಮಗಳಲ್ಲಿ ಹಿಂದೆಂದೂ ಕಂಡಿರದ ಅತ್ಯಂತ ಕ್ರೂರ ರೀತಿಯ ಸಾಮಾಜಿಕ ಬಹಿಷ್ಕಾರವನ್ನು ಹೇರಲಾಗಿದೆ. ಅಸ್ಪೃಶ್ಯರೆಂದು ಕರೆಯಲ್ಪಡುವವರ ವಿರುದ್ಧ ಮೇಲ್ಜಾತಿಯವರು ಇಂದಿಗೂ ನಡೆಸುತ್ತಿರುವ ಶುದ್ಧೀಕರಣ ಆಚರಣೆಗಳ ಬಗ್ಗೆ ನಮಗೆ ತಿಳಿದಿದೆ, ಆದರೆ ಇದು ಎಂದಿಗೂ ಆದಿವಾಸಿ ಆಚರಣೆಯ ಭಾಗವಾಗಿಲ್ಲ. ಇಂದು ಇದನ್ನು ಆದಿವಾಸಿ ಸಮುದಾಯಗಳ ಮೇಲೆ ಹೇರಲು ಯತ್ನಿಸಲಾಗುತ್ತಿದೆ. ಕ್ರಿಶ್ಚಿಯನ್ ಆದಿವಾಸಿಗಳು ಸಾಮಾನ್ಯ ನೀರಿನ ಕೈ-ಪಂಪುಗಳನ್ನು ಸ್ಪರ್ಶಿಸಲು ಬಿಡದ ಹಲವಾರು ಪ್ರಕರಣಗಳಿವೆ ಮತ್ತು ಅವರು ಹಾಗೆ ಮಾಡಿದರೆ, ಅದನ್ನು “ಶುದ್ಧೀಕರಿಸಲು” ಪದೇ ಪದೇ ತೊಳೆಯಲಾಗುತ್ತದೆ. ಕೆಲವು ಗ್ರಾಮಗಳಲ್ಲಿ ಕ್ರಿಶ್ಚಿಯನ್ ಆದಿವಾಸಿಗಳಿಗೆ ಏನನ್ನೂ ಮಾರಾಟ ಮಾಡದಂತೆ ಅಂಗಡಿಕಾರರಿಗೆ ಬೆದರಿಕೆ ಹಾಕಲಾಗಿದೆ. ಅವರಿಗೆ ಕೆಲಸ ನೀಡಲು ನಿಷೇಧವನ್ನೇ ಹಾಕಲಾಗಿದೆ. ಆದರೆ, ಇಂತಹ ಘೋರ ಕಾನೂನುಬಾಹಿರ ಕೃತ್ಯಗಳನ್ನು ತಡೆಯಲು ಆಡಳಿತದ ವತಿಯಿಂದ ಯಾವುದೇ ಸತತ ಪ್ರಯತ್ನ ನಡೆಯುತ್ತಿಲ್ಲ. ಸಂತ್ರಸ್ತರು ತಾವು ಖಚಿತವಾಗಿ ಸಾವನ್ನು ಎದುರಿಸಬೇಕಾಗಿತ್ತು ಆದರೆ ಪೊಲೀಸರು ನಮ್ಮನ್ನು ರಕ್ಷಿಸಿದರು ಎಂದು ಹೇಳಿರುವ ಪ್ರಕರಣಗಳೂ ಇವೆ ಎಂಬುದನ್ನು ಎಂದು ನಾವು ಇಲ್ಲಿ ಉಲ್ಲೇಖಿಸಬೇಕು. ಆ ಪ್ರದೇಶಕ್ಕೆ ಹೋಗಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರವು ಸಚಿವರ ತಂಡವನ್ನು ನಿಯೋಜಿಸುವುದು ಅತ್ಯಗತ್ಯ. ಪ್ರತಿ ಸಂತ್ರಸ್ತ ಕುಟುಂಬಕ್ಕೆ ಅವರ ನಷ್ಟದ ಮೌಲ್ಯಮಾಪನದ ಮೇಲೆ ಪರಿಹಾರವನ್ನು ತುರ್ತಾಗಿ ನೀಡಬೇಕಾಗಿದೆ.
  2. ನಾವು ನಿಮ್ಮ ಗಮನವನ್ನು ವಿಶೇಷವಾಗಿ ಮಹಿಳೆಯರ ದುಸ್ಥಿತಿಯತ್ತ ಸೆಳೆಯುತ್ತೇವೆ. ಕ್ರೂರವಾಗಿ ಥಳಿತಕ್ಕೊಳಗಾದ, ಆಘಾತಕ್ಕೊಳಗಾದ ಮತ್ತು ಭಯಭೀತರಾದ ಅನೇಕ ಮಹಿಳೆಯರನ್ನು ನಾವು ಭೇಟಿಯಾಗಿದ್ದೇವೆ. ಅವರಲ್ಲಿ ಇಬ್ಬರು ಗರ್ಭಿಣಿಯರು ಇದ್ದರು. ರಾಂವಂದ್ ಗ್ರಾಮದಲ್ಲಿ ಕನಿಷ್ಠ ಹನ್ನೊಂದು ಮಹಿಳೆಯರನ್ನು ಕೆಟ್ಟದಾಗಿ ಥಳಿಸಲಾಗಿದೆ. ಈ ಗ್ರಾಮದಲ್ಲಿ ನಡೆದ ಅತ್ಯಂತ ಭೀಕರ ಘಟನೆಯೊಂದರಲ್ಲಿ ಮಹಿಳೆಯರ ಗುಂಪೊಂದನ್ನು ಅಟ್ಟಿಸಿಕೊಂಡು ಅಟ್ಟಹಾಸ ಮೆರೆಯುತ್ತಿದ್ದ ಪುರುಷರು ಮೂವರು ಮಹಿಳೆಯರನ್ನು ಭಾಗಶಃ ವಿವಸ್ತ್ರಗೊಳಿಸಿ, ಅವರ ಕಾಲುಗಳನ್ನು ಬಲವಂತವಾಗಿ ಅಗಲಿಸಿ ಎತ್ತಿ ಸುತ್ತುಹಾಕಿ, ಕೊನೆಗೆ ಮುಳ್ಳಿನ ಪೊದೆಗಳಿಗೆ ಎಸೆದರು. ಅಲ್ಮೇರ್ ಗ್ರಾಮದಲ್ಲಿ ಕ್ರಿಶ್ಚಿಯನ್ ಮನೆಗಳ ಮೇಲೆ ದಾಳಿ ಮಾಡಿದ ಜನಜಂಗುಳಿಯ ಒಂದು ಭಾಗದವರು 9ನೇ ತರಗತಿಯ ಹದಿಹರೆಯದವಳನ್ನು ಆಕೆಯ ಮನೆಯಿಂದ ಅಪಹರಿಸಿ ಕಾಡಿಗೆ ಎಳೆದೊಯ್ಯಿತು. ಈ ಕ್ರಿಮಿನಲ್‌ಗಳನ್ನು ಅಟ್ಟಿಸಿಕೊಂಡು ಬಂದ ಧೈರ್ಯಶಾಲಿ ಅಜ್ಜಿಯಿಂದ ಅವಳು ಬಚಾವಾದಳು. ಬಾಲಕಿಯ ಬಟ್ಟೆ ಹರಿದಿತ್ತು. ಪುರುಷರು ಮಹಿಳೆಯರ ತಲೆೆ, ಕೈಕಾಲುಗಳಿಗೆ ಥಳಿಸಿರುವ ವಿಡಿಯೋ ಪುರಾವೆಗಳಿವೆ. ವಿಪರ್ಯಾಸವೆಂದರೆ, ಡಿಸೆಂಬರ್ 18, 2022 ರಂದು, ವಿಶ್ವಸಂಸ್ಥೆಯು “ಅಲ್ಪಸಂಖ್ಯಾತರ ದಿನ” ಎಂದು ಘೋಷಿಸಿದ ದಿನದಂದು, ಕೊಡಗಾಂವ್ ಮತ್ತು ನಾರಾಯಣಪುರದಲ್ಲಿನ ಚರ್ಚ್‍ಗಳ ಮೇಲೆ ಬಹುತೇಕ ಏಕಕಾಲದಲ್ಲಿ ದಾಳಿಗಳು ನಡೆದವು. ಲಾಠಿ ಬೀಸುವ ಜನರ ಗುಂಪು ಚರ್ಚ್ಗಳಿಗೆ ನುಗ್ಗಿ ಕಣ್ಣಿಗೆ ಕಂಡವರನ್ನೆಲ್ಲಾ ಥಳಿಸಿದರು, ಪುರುಷರು ಮಹಿಳೆಯರು ಮತ್ತು ಮಕ್ಕಳನ್ನು ಸಹ ಬಿಡಲಿಲ್ಲ. ವಿಧವೆಯಾಗಿರುವ ಅಂಗವಿಕಲ ಮಹಿಳೆಯನ್ನು ತೀವ್ರವಾಗಿ ಥಳಿಸಿ ಮನೆಯಿಂದ ಹೊರ ಹಾಕಲಾಗಿದೆ, ಮನೆಗೆ ಬೀಗ ಹಾಕಲಾಗಿದೆ. ತನ್ನ ಭೂಮಿ ಮತ್ತು ಮನೆಯನ್ನು ಆಕ್ರಮಿಸಿಕೊಳ್ಳುವುದು ಅವರ ಉದ್ದೇಶವಾಗಿದೆ ಎಂದು ಆಕೆ ಹೇಳುತ್ತಾಳೆ. ಮಕ್ಕಳು ವಾರಗಟ್ಟಲೆ ಶಾಲೆಯನ್ನು ತಪ್ಪಿಸಿಕೊಂಡರು, ಕೆಲವರು ಇನ್ನೂ ಶಾಲೆಯಿಂದ ಹೊರಗುಳಿದಿದ್ದಾರೆ. ಅವರ ಅರ್ಧವಾರ್ಷಿಕ ಪರೀಕ್ಷೆಗಳನ್ನು ನೀಡುವುದು ಅವರಿಗೆ ತುಂಬಾ ಕಷ್ಟಕರವಾಗಿದೆ ಎಂದು ಅವರ ಪೋಷಕರು ಹೇಳಿದರು. ತುರ್ತಾಗಿ ಮಹಿಳೆಯರು ಮತ್ತು ಮಕ್ಕಳಿಗೆ ನೆರವು ನೀಡುವುದು ಅಗತ್ಯವಾಗಿದೆ.
  3. ನಮಗೆ ವರದಿಯಾಗಿರುವಂತೆ ಈ ಸುತ್ತಿನ ಹಿಂಸಾಚಾರದ ಮೊದಲ ಘಟನೆಯು ಕಂಕೇರ್ ಜಿಲ್ಲೆಯ ಅಮಾಬೆಡಾ ಬ್ಲಾಕ್‌ನ ಕುರುತೋಲಾದಲ್ಲಿ ಸಂಭವಿಸಿದೆ. ನವೆಂಬರ್ 1, 2022 ರಂದು, ಸುಮಾರು 50 ವರ್ಷ ವಯಸ್ಸಿನ ಚಾತಿಬಾಯಿ ನರೇಟಿ ಕಾಮಾಲೆಯಿಂದ ನಿಧನರಾದರು. ಗ್ರಾಮದ ಮುಖಂಡರ ಒಪ್ಪಿಗೆ ಮೇರೆಗೆ ಆಕೆಯ ಕುಟುಂಬಸ್ಥರು ಆಕೆಯ ಶವವನ್ನು ಅವರದೇ ಜಮೀನಿನಲ್ಲಿ ಹೂಳಿದ್ದಾರೆ. ಆದರೆ, ಜನಜಾತೀ ಸುರಕ್ಷಾ ಮಂಚ್‌ನ ಬ್ಯಾನರ್‌ನ ಕೆಳಗಿದ್ದ ಜನರ ಗುಂಪು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಕ್ರಿಶ್ಚಿಯನ್ನರನ್ನು ಗ್ರಾಮದಲ್ಲಿ ಸಮಾಧಿ ಮಾಡಿದರೆ ಅದು ಗ್ರಾಮದ “ಜನಜಾತಿ ದೇವತೆಗಳಿಗೆ” ಅವಮಾನವಾಗುತ್ತದೆ ಮತ್ತು ಗ್ರಾಮವನ್ನು ನಾಶಪಡಿಸುತ್ತದೆ ಎಂದು ಅವರು ಹೇಳಿದರು. ಸಮಾಧಿಯ ವಿರುದ್ಧ ಅಣಿನೆರಿಕೆ ಪ್ರಾರಂಭವಾದವು. ಮೃತದೇಹವನ್ನು ಹೊರತೆಗೆಯಬೇಕು ಎಂದು ಬಿಜೆಪಿ ಮಾಜಿ ಶಾಸಕ ಭೋಜರಾಜ್ ನಾಗ್ ನೇತೃತ್ವದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಪೊಲೀಸರು ಮೃತನ ಮಗ ಮುಖೇಶ್ ನರೇಟಿಯನ್ನು ಠಾಣೆಗೆ ಕರೆಸಿದ್ದರು. ಪೊಲೀಸರ ಸಮ್ಮುಖದಲ್ಲಿಯೇ ಗುಂಪು ಆತನನ್ನು ಥಳಿಸಿದೆ ಎಂದು ವರದಿಯಾಗಿದೆ. ಶವವನ್ನು ಹೊರತೆಗೆಯಬೇಕು, ಇಲ್ಲವಾದರೆ ಅವನನ್ನು “ಎನ್ಕೌಂಟರ್” ಮಾಡಲಾಗುವುದು ಎಂದು ಆಗ್ರಹಿಸಿದರು. ಅವರ ಸಹೋದರಿ ಯೋಗೇಶ್ವರಿ ಸೇರಿದಂತೆ ಅವರ ಕುಟುಂಬದ ಸದಸ್ಯರನ್ನೂ ಥಳಿಸಲಾಗಿದೆ. ನವೆಂಬರ್ 3 ರ ರಾತ್ರಿ, ಪುರುಷರ ಗುಂಪು ಸಮಾಧಿಯಿಂದ ಶವವನ್ನು ಹೊರತೆಗೆಯಿತು, ಮರುದಿನ ಪೊಲೀಸರು ಶವವನ್ನು ತೆಗೆದುಕೊಂಡು 100 ಕಿಮೀ ದೂರದಲ್ಲಿರುವ ಕ್ರಿಶ್ಚಿಯನ್ ಸ್ಮಶಾನದಲ್ಲಿ ಹೂಳಿದರು. ್ಲ ಭಯದಿಂದ ಗ್ರಾಮದಿಂದ ಓಡಿಹೋದ ಕುಟುಂಬದ ಸದಸ್ಯರ ಅನುಪಸ್ಥಿತಿಯಲ್ಲಿ ಇದನ್ನು ಮಾಡಲಾಯಿತು. ಬಿಜೆಪಿ ನಾಯಕರು ನೇರ ಭಾಗಿಯಾಗಿರುವ ಈ ಘಟನೆ ಸರ್ಕಾರಕ್ಕೆ ಎಚ್ಚರಿಕೆಯಾಗಬೇಕಿತ್ತು. ಬದಲಿಗೆ ಅಪರಾಧಿಗಳು ನಿರ್ಭಯದಿಂದ ವರ್ತಿಸಲು ಪ್ರಾರಂಭಿಸಿದರು ಮತ್ತು ಪ್ರದೇಶದಾದ್ಯಂತ ಇಂತಹ ಘಟನೆಗಳು ವರದಿಯಾದವು. ಇದು ಇಡೀ ಸಮುದಾಯದ ಮೇಲೆ ದಾಳಿಯಾಗಿ ಉಲ್ಬಣಿಸಿತು. ಕ್ರಿಶ್ಚಿಯನ್ನರು ತಮ್ಮ ಸತ್ತವರನ್ನು ಗ್ರಾಮದಲ್ಲಿ ಯಾವುದೇ ಆಕ್ಷೇಪಣೆಯಿಲ್ಲದೆ ಹೂಳುವ ಪ್ರದೇಶದಲ್ಲಿ ಇದು ಸಮಸ್ಯೆಯಾಗಿಲ್ಲ ಎಂದು ಗಮನಿಸಬೇಕು. ಈಗಲೂ ಬಹುತೇಕ ಹಳ್ಳಿಗಳಲ್ಲಿ ಈ ಸಮಸ್ಯೆ ಇಲ್ಲ. ಆದರೆ ಧರ್ಮದ ಹೆಸರಿನಲ್ಲಿ ಆದಿವಾಸಿಗಳನ್ನು ವಿಭಜಿಸಲು ಯೋಜಿತ ಮತ್ತು ದುರುದ್ದೇಶಪೂರಿತ ರೀತಿಯಲ್ಲಿ ಇದನ್ನು ಸಂಘಟಿಸಲಾಗುತ್ತಿದೆ.
  4. ಅಕ್ಟೋಬರ್‌ನಲ್ಲೂ ಕೆಲವು ಹೆದರಿಸುವ ಮತ್ತು ಬೆದರಿಕೆಯ ಘಟನೆಗಳು ನಡೆದಿವೆ ಎಂದು ನಮಗೆ ವರದಿಯಾಗಿದೆ ಆದರೆ ಆಡಳಿತದಿಂದ ಸಮಯೋಚಿತ ಮಧ್ಯಪ್ರವೇಶವಿಲ್ಲ. ಆದರೆ ಎಲ್ಲೆಂದರಲ್ಲಿ ‘ಜನಜಾತಿ ಸುರಕ್ಷಾ ಮಂಚ್’ನವರು ಭಾಗಿಯಾಗಿದ್ದಾರೆ. ಜನಜಾತಿ ಸುರಕ್ಷಾ ಮಂಚ್ ಎಲ್ಲರಿಗೂ ಗೊತ್ತಿರುವಂತೆ ಬಿಜೆಪಿ ನಾಯಕರು ಸಂಬಂಧ ಹೊಂದಿರುವ ಸಂಘಟನೆಯಾಗಿದೆ. ಈ ಹಿಂದೆ ಈ ಪ್ರದೇಶದಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲೆ ಘರ್ ವಾಪಸಿ ದಾಳಿಗಳು ಭಜರಂಗದಳ ಮತ್ತು ಸಂಘ ಪರಿವಾರದ ಇತರ ಸಂಘಗಳ ನೇತೃತ್ವದಲ್ಲಿ ನಡೆದವು. ಈಗ “ಜನಜಾತಿ” ಹೆಸರಿನಲ್ಲಿ ಆದಿವಾಸಿ ಸಮುದಾಯವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ. ಪ್ರತಿಯೊಂದು ಪ್ರಕರಣದಲ್ಲೂ ಬಿಜೆಪಿಗೆ ಸೇರಿರುವ ನಾಯಕರೇ ಸಜ್ಜುಗೊಳಿಸಿ ದಾಳಿಯ ನೇತೃತ್ವ ವಹಿಸಿದ್ದಾರೆ ಎಂದು ಸಂತ್ರಸ್ತರು ನಮಗೆ ಹೇಳಿದರು. ಜನವರಿ 1 ರಂದು ಘೋರ್ರಾ ಗ್ರಾಮದಲ್ಲಿ ಘರ್ಷಣೆ ನಡೆದಿದ್ದು, ಎರಡೂ ಕಡೆಯ ಜನರು ಗಾಯಗೊಂಡಿದ್ದಾರೆ ಎಂದು ನಾವು ಭೇಟಿಯಾದ ಕೆಲವು ಆದಿವಾಸಿಗಳು ಮತ್ತು ಜಿಲ್ಲಾಧಿಕಾರಿಗಳು ದೃಢಪಡಿಸಿದ ಘಟನೆಯೊಂದಿದೆ. ಇಂತಹ ಘರ್ಷಣೆಯಲ್ಲಿ ಕ್ರೈಸ್ತ ಸಮುದಾಯದವರು ಭಾಗಿಯಾಗಿರುವ ಏಕೈಕ ಘಟನೆ ಇದಾಗಿದೆ. “ಎರಡೂ ಕಡೆಯಿಂದ” ಹೊಣೆಗಾರರನ್ನು ಬಂಧಿಸಲಾಗಿದೆ ಎಂದು ಕಲೆಕ್ಟರ್ ನಮಗೆ ತಿಳಿಸಿದರು. ಇದರ ಬೆನ್ನಲ್ಲೇ ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜ.2ರಂದು ನಾರಾಯಣಪುರದಲ್ಲಿ ಜೆಎಸ್‌ಎಂ ಪ್ರತಿಭಟನೆ ನಡೆಸಿತ್ತು. ಇದೇ ದಿನ ನಾರಾಯಣಪುರದ ಚರ್ಚ್ ಮೇಲೆ ಜನಜಂಗುಳಿ ದಾಳಿಗೆ ಈ ಸಭೆಯೇ ಕಾರಣವಾಯಿತು. ನಿಯೋಗವು ನಾರಾಯಣಪುರ ಚರ್ಚ್ಗೆ ಭೇಟಿ ನೀಡಿತು ಮತ್ತು ವಿಧ್ವಂಸಕ ಕೃತ್ಯಗಳು, ಭಗ್ನಗೊಂಡ ಪ್ರತಿಮೆಗಳು, ಧ್ವಂಸಗೊಳಿಸಲಾದ ಮಾಸ್ ಮತ್ತು ಇತರ ವಸ್ತುಗಳನ್ನು, ಕಿಟಕಿಗಳು ಮತ್ತು ಬಾಗಿಲುಗಳನ್ನು ನಾವು ನೋಡಿದ್ದೇವೆ. ತಪ್ಪಿತಸ್ಥರಲ್ಲಿ ಕೆಲವರನ್ನು ಬಂಧಿಸಲಾಗಿದ್ದರೂ, ಇದರಲ್ಲಿ ಭಾಗಿಯಾಗಿರುವ ನಾಯಕರ ವಿರುದ್ಧ ಸರ್ಕಾರ ದೃಢವಾಗಿ ಕ್ರಮಕೈಗೊಳ್ಳಬೇಕು.
  5. ಬಲವಂತದ ಮತಾಂತರ ನಡೆಯುತ್ತಿದೆ ಎಂಬ ಪ್ರಚಾರವು ಸತ್ಯಸಂಗತಿಗಳಿಂದ ಸಾಬೀತಾಗಿಲ್ಲ. ಅಧಿಕಾರಿಗಳ ಪ್ರಕಾರ ಬಲವಂತದ ಮತಾಂತರದ ಒಂದು ಪ್ರಕರಣವೂ ವರದಿಯಾಗಿಲ್ಲ. ಈ ವರ್ಷಾಂತ್ಯದಲ್ಲಿ ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಯ ವೇಳಾಪಟ್ಟಿಯನ್ನು ಗಮನಿಸಿದರೆ, ಈ ದಾಳಿಗಳ ಹಿಂದೆ ರಾಜಕೀಯ ಅಜೆಂಡಾ ಇದೆ ಎಂಬುದು ಸ್ಪಷ್ಟವಾಗಿದೆ.
  6. ಆದಿವಾಸಿಗಳ ವಿವಿಧ ಗುಂಪುಗಳೊಂದಿಗಿನ ನಮ್ಮ ಸಭೆಗಳಲ್ಲಿ, ಅರಣ್ಯ ಹಕ್ಕು ಕಾಯಿದೆಯನ್ನು ಜಾರಿಗೆ ತರುತ್ತಿಲ್ಲ ಎಂಬುದು ಅವರ ಮುಖ್ಯ ಕಾಳಜಿ ಎಂದು ಅವರು ನಮಗೆ ತಿಳಿಸಿದರು. ಈ ನೈಜ ದೂರುಗಳ ಬಗ್ಗೆ ನಾವು ಭೇಟಿಯಾದ ಅಧಿಕಾರಿಗಳಿಗೆ ತಿಳಿಸಿದ್ದೆವು. ನಾರಾಯಣಪುರ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯ ಎರಡು ಯೋಜನೆಗಳನ್ನು ಆದಿವಾಸಿಗಳು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಗ್ರಾಮಸಭೆಗಳ ಅಭಿಪ್ರಾಯ ಪಡೆಯದೆ ಸರಕಾರ ಯೋಜನೆಗೆ ಮುಂದಾಗಿದೆ. ಇದು ಅತ್ಯಂತ ಆಕ್ಷೇಪಾರ್ಹ. ಕಾನೂನಿನ ಪ್ರಕಾರ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸುವುದು ಸರ್ಕಾರಕ್ಕೆ ಅತ್ಯಗತ್ಯ. ಇತ್ತೀಚಿನ ಕೋಮುವಾದದ ಘಟನೆಗಳನ್ನು ಆದಿವಾಸಿಗಳ ಈ ಐಕ್ಯ ಚಳುವಳಿಯನ್ನು ದುರ್ಬಲಗೊಳಿಸಲು ರೂಪಿಸಲಾಗಿದೆ.

ನಾವು ಎತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ.

Leave a Reply

Your email address will not be published. Required fields are marked *