ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿರುವಂತೆಯೇ ತ್ರಿಪುರಾದಲ್ಲಿ ತೀವ್ರಗೊಂಡ ಹಲ್ಲೆ- ಹಿಂಸಾಚಾರ

ದೃಢ, ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸಿಪಿಐ(ಎಂ) ಮನವಿ ಪತ್ರ

ತ್ರ‍್ರಿಪುರಾ ವಿಧಾನ ಸಭೆಗೆ ಚುನಾವಣೆಗಳ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸುತ್ತಿರುವಂತೆಯೇ ಅಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಸೇರಿದಂತೆ ವಿರೋಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಆಳುವ ಪಕ್ಷದ ಗೂಂಡಾಗಳಿಂದ ನಡೆಯುತ್ತಿರುವ ಹಲ್ಲೆ-ಹಿಂಸಾಚಾರಗಳು ತೀವ್ರಗೊಂಡಿವೆ. ಇದನ್ನು ಕುರಿತಂತೆ ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರ ನೇತೃತ್ವದ ಮೂವರು ಸದಸ್ಯರ ನಿಯೋಗವೊಂದು ಪೂರ್ಣ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಒಂದು ಮನವಿ ಪತ್ರವನ್ನು ಸಲ್ಲಿಸಿ, ಅದು ತ್ರಿಪುರಾದ ಜನತೆಗೆ ಭರವಸೆ ನೀಡಿರುವಂತೆ ಹಿಂಸಾಚಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವತ್ತ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದೆ. ಮನವಿ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

ಮಾನ್ಯರೇ,

ತ್ರಿಪುರಾಕ್ಕೆ ಭಾರತ ಚುನಾವಣಾ ಆಯೋಗದ ಪೂರ್ಣ ತಂಡ ಭೇಟಿ ನೀಡಿದ ನಂತರ ತಕ್ಷಣವೇ ಸಿಪಿಐ(ಎಂ) ಸೇರಿದಂತೆ ವಿರೋಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ತೀವ್ರ ಹಿಂಸಾಚಾರವನ್ನು ಹರಿಯಬಿಟ್ಟಿರುವುದು  ಅತ್ಯಂತ ಕಳವಳಕಾರಿಯಾಗಿದೆ. ಹಿಂಸಾಚಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲಿದೆ ಎಂದು ತ್ರಿಪುರಾದ ಜನತೆಗೆ ಇ.ಸಿ.ಐ.(ಭಾರತ ಚುನಾವಣಾ ಆಯೋಗ)ದ ನಿಯೋಗ ನೀಡಿದ ಖಚಿತ ಭರವಸೆಯ ನಂತರ ಈ ಬೆಳವಣಿಗೆಗಳು ನಡೆಯುತ್ತಿರುವುದು ವಿಪರ್ಯಾಸ. ತ್ರಿಪುರಾದ ಮುಖ್ಯ ಚುನಾವಣಾ ಅಧಿಕಾರಿ(ಸಿಇಒ) ನಿರ್ದಿಷ್ಟವಾಗಿ ಚುನಾವಣಾ ಹಿಂಸಾಚಾರ-ಶೂನ್ಯ ಮಿಷನ್ನನ್ನೇ ಪ್ರಾರಂಭಿಸಿದ್ದರು. ಆದಾಗ್ಯೂ, ಆಡಳಿತ, ವಿಶೇಷವಾಗಿ ಪೊಲೀಸ್ ಆಡಳಿತ ಹಿಂದಿನಂತೆಯೇ ಇ.ಸಿ.ಐ.ಯ ಭರವಸೆಗಳ ಪರಿವೆಯೇ ಇಲ್ಲದಂತೆ ವರ್ತಿಸುತ್ತಿದೆ.

ನಿನ್ನೆ ಚುನಾವಣೆ ಘೋಷಣೆಯಾದ ನಂತರ ಹಲ್ಲೆಗಳು ಮತ್ತು ಹಿಂಸಾಚಾರದ ತೀವ್ರತೆ ಹೆಚ್ಚಾಗಿದೆ. ಹಿಂಸಾಚಾರದ ವಿಧಾನವು  ಸ್ಪಷ್ಟವಾಗಿ ಭಯೋತ್ಪಾದನೆಯ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಇದು ಮುಕ್ತ ಮತ್ತು ನ್ಯಾಯಸಮ್ಮತವಾದ ಮತದಾನವನ್ನು ನಡೆಸಲು ಇರಬೇಕಾದ  ವಾತಾವರಣವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಇತ್ತೀಚಿನ ಹಿಂಸಾಚಾರದ ಘಟನೆಗಳ ಪಟ್ಟಿಯನ್ನು ನಾವು ಅನುಬಂಧದಲ್ಲಿ ಲಗತ್ತಿಸುತ್ತಿದ್ದೇವೆ.

ಕಳೆದ ಐದು ವರ್ಷಗಳಲ್ಲಿ ನಡೆಯುತ್ತಿರುವುದಕ್ಕೆ ವ್ಯತಿರಿಕ್ತವಾಗಿ, ರಾಜ್ಯ ವಿಧಾನಸಭೆಗೆ ಮುಕ್ತ ಮತ್ತು ನ್ಯಾಯಸಮ್ಮತ ಮತದಾನವನ್ನು ನಡೆಸಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ನಾವು ನಿಮ್ಮನ್ನು ಆಗ್ರಹಿಸುತ್ತಿದ್ದೇವೆ.

ಚುನಾವಣಾ ಆಯೋಗದ ಕಡೆಯಿಂದ ಒಂದು ದೃಢವಾದ ಮತ್ತು ನಿರ್ಣಾಯಕ ಕ್ರಮವನ್ನು ನಾವು ನಿರೀಕ್ಷಿಸುತ್ತೇವೆ.

ಇಂತಿ,

(ಸೀತಾರಾಮ್ ಯೆಚೂರಿ)
ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *