ಚುನಾವಣಾ ಬಾಂಡಿಗೆ ಸುಪ್ರಿಂ ಕೋರ್ಟಿನಲ್ಲಿ ಸಿಪಿಐ(ಎಂ) ಸವಾಲು

ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಕೋರ್ಟ್ ನೋಟೀಸು

ಎಫ್‍ಸಿಆರ್‍ಎ ಕಾಯ್ದೆ ಉಲ್ಲಂಘನೆಯ ಶಿಕ್ಷೆಯಿಂದ ಪಾರಾಗಲು ತಿದ್ದುಪಡಿ- ಯೆಚುರಿ

ಈ ವರ್ಷದ ಬಜೆಟ್‍ ಮಂಡನೆಯಾದ ಮೇಲೆ ಮಂಡಿಸುವ ಬಜೆಟ್‍ ಪ್ರಸ್ತಾಪಗಳನ್ನೊಳಗೊಂಡ ಹಣಕಾಸು ಮಸೂದೆಯಲ್ಲಿ  ಮೋದಿ ಸರಕಾರ ಮತ್ತೊಮ್ಮೆ ಗುಟ್ಟಾಗಿ ವಿದೇಶಿ ವಂತಿಗೆಗಳ ನಿಯಂತ್ರಣ ಕಾಯ್ದೆ(ಎಫ್‍ಸಿಆರ್‍ಎ)ಗೆ ತಿದ್ದುಪಡಿ ತಂದಿದೆ. ಈ ಮೂಲಕ  ವಿದೇಶಗಳಿಂದ ಅಪಾರ ಹಣ ಪಡೆದು ಈ ಕಾನೂನಿನ ಉಲ್ಲಂಘನೆ ಮಾಡಿದ್ದಕ್ಕೆ ಅನುಭವಿಸಬೇಕಾದ  ಶಿಕ್ಷೆಯಿಂದ  ಬಿಜೆಪಿ ಮತ್ತು ಕಾಂಗ್ರೆಸ್‍ ತಮ್ಮನ್ನು ಪಾರು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಸಿಪಿಐ(ಎಂ)  ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ.

ಕಳೆದ ಬಜೆಟಿನಲ್ಲಿ ಚುನಾವಣಾ ಬಾಂಡುಗಳನ್ನು ನೀಡುವ  ಸರಕಾರದ ಪ್ರಕಟಣೆಯನ್ನು ಪಶ್ನಿಸಿ ಸಿಪಿಐ(ಎಂ) ಸುಪ್ರಿಂ ಕೋಟಿನಲ್ಲಿ ಅರ್ಜಿ ಸಲ್ಲಿಸಿದ್ದು ದೇಶದ ಅತ್ಯುಚ್ಚ ನ್ಯಾಯಾಲಯ  ಈ ಬಗ್ಗೆ ಸರಕಾರದಿಂದ ವಿವರಣೆ ಕೇಳಿ ನೋಟೀಸು ಜಾರಿ ಮಾಡಿದ ಹಿನ್ನೆಲೆಯಲ್ಲಿ ಯೆಚುರಿಯವರು ಫೆಬ್ರುವರಿ 3ರಂದು ಕರೆದ ಪತ್ರಿಕಾ ಸಮ್ಮೇಳನದಲ್ಲಿ ಈ ಮಾತು ಹೇಳಿದರು.

ಸುಪ್ರಿಂ ಕೋಟ್‍ ನೋಟೀಸು ಚುನಾವಣಾ ಆಯೋಗಕ್ಕೂ ಹೋಗಿದೆ. ಆಯೋಗ ಕಳೆದ ವರ್ಷ ಚುನಾವಣಾ ಬಾಂಡಿನ ಪ್ರಸ್ತಾಪ ಬಂದಾಗ ಅದನ್ನುವಿರೋಧಿಸಿ ಸರಕಾರಕ್ಕೆ ಪತ್ರ ಬರೆದಿತ್ತು. ಆದರೆ ಈಗ ಹೊಸ ಚುನಾವಣಾ ಆಯುಕ್ತರು ಬಂದಿರುವಾಗ ಅದು ಏನು ಉತ್ತರ ಕೊಡುತ್ತದೆ ಎಂದು ಕಾದು ನೋಡಬೇಕಾಗಿದೆ ಎಂದು ಹೇಳಿದ ಯೆಚುರಿ ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್‍ ವಂತಿಗೆಯ ಪ್ರಶ್ನೆ ಪಾರದರ್ಶಕವಾಗುವ ಬದಲು ಹೆಚ್ಚೆಚ್ಚು ನಿಷ್ಪಾರದರ್ಶಕವಾಗುತ್ತಿದೆ, ಈ ಕಾರ್ಪೊರೇಟ್‍ ವಂತಿಗೆಗಳೇ  ಭ್ರಷ್ಟಾಚಾರಕ್ಕೆ ಆಹ್ವಾನ ನೀಡುವಂತವು ಎಂದಿದ್ದಾರೆ.

“ಈ ಎರಡೂ ಪಕ್ಷಗಳು ವಿದೇಶಿ ಕಂಪನಿಗಳಿಂದ ಅಪಾರ ಹಣವನ್ನು ಪಡೆದಿವೆ. ಎಫ್‍ಸಿಆರ್‍ಎ ಕಾಯ್ದೆಯನ್ನು ಹಿಂದಿನಿಂದಲೇ ಅನ್ವಯವಾಗುವಂತೆ ತಿದ್ದುಪಡಿ ಮಾಡದಿದ್ದರೆ ಇವರು ಕಾಯ್ದೆಯ ಉಲ್ಲಂಘನೆಯ ವಿಚಾರಣೆಯನ್ನು ಎದುರಿಸಬೇಕಾಗಿತ್ತು. ಈ ತಿದ್ದುಪಡಿಯಿಂದಾಗಿ ಅದರಿಂದ ತಪ್ಪಿಸಿಕೊಂಡಿದ್ದಾರೆ” ಎಂದು ಯೆಚುರಿ ಹೇಳಿದರು.

ವಿದೇಶಿ ವಂತಿಗೆಗಳಿಂದ ಚುನಾವಣಾ ಬಾಂಡ್‍ ವರೆಗೆ ಸತತವಾಗಿ ಮೂರು ಬಜೆಟ್‍ಗಳಲ್ಲಿ ಮೂರು ವಂಚನೆಗಳು

ಹೀಗೆಂದು ವಿಶ್ಲೇಷಕರೊಬ್ಬರು ಇದನ್ನು ವರ್ಣಿಸಿದ್ದಾರೆ. ಏಕೆಂದರೆ ಸತತವಾಗಿ ಕಳೆದ ಮೂರು ಬಜೆಟ್‍ಗಳಲ್ಲಿ  ಸರಕಾರ ಬಜೆಟ್‍ ಪ್ರಸ್ತಾಪಗಳನ್ನೊಳಗೊಳ್ಳುವ  ‘ಹಣಕಾಸು ಮಸೂದೆ’ಯಲ್ಲಿ  ಈ ಕುರಿತ ಆಂಶವನ್ನು ಮುಚ್ಚುಮರೆಯಿಂದ ಸೇರಿಸಿಕೊಂಡು ಬಂದಿದೆ.  ಯೆಚುರಿಯವರೂ ತಮ್ಮ ಹೇಳಿಕೆಯಲ್ಲಿ ಇವನ್ನು ಪ್ರಸ್ತಾಪಿಸಿದರು.

2016ರಲ್ಲಿ ಮೋದಿ ಸರಕಾರ ವಿದೇಶಿ ವಂತಿಗೆಗಳ ನಿಯಂತ್ರಣ ಕಾಯ್ದೆ(ಎಫ್‍ಸಿಆರ್‍ಎ), 2010ಗೆ ತಿದ್ದುಪಡಿ ತಂದಿತು.  2017ರ ಬಜೆಟ್ ರಾಜಕೀಯ ಪಕ್ಷಗಳಿಗೆ ಹಣಕಾಸು ಬರುವುದನ್ನು ಪಾರದರ್ಶಕಗೊಳಿಸುವ ಹೆಸರಿನಲ್ಲಿ ‘ಚುನಾವಣಾ ಬಾಂಡ್‍’ಗಳನ್ನು ಜಾರಿ ಮಾಡುವ ಪ್ರಸ್ತಾವವನ್ನು ಮಂಡಿಸಿತ್ತು. ಈ ವರ್ಷದ ಬಜೆಟಿನಲ್ಲಿ 1976ರಿಂದಲೇ ಅನ್ವಯವಾಗುವಂತೆ ಮಾಡಲು  ಮತ್ತೊಂದು  ಎಫ್‍ಆರ್ಸಿಎ ತಿದ್ದುಪಡಿಯನ್ನು ಸೇರಿಸಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಮಾರ್ಚ್ 28, 2014ರಲ್ಲಿ ದಿಲ್ಲಿ ಹೈಕೋರ್ಟ್ ವಿದೇಶಿ ವಂತಿಗೆಗಳ ಕುರಿತ ಮೊಕದ್ದಮೆಯಲ್ಲಿ  ಬಿಜೆಪಿ ಮತ್ತು ಕಾಂಗ್ರೆಸ್‍ ಪಕ್ಷಗಳು 1976 ರ ಎಫ್‍ಸಿಆರ್‍ಎ ಕಾಯ್ದೆಯನ್ನು ಉಲ್ಲಂಘಿಸಿವೆ ಎಂದು ತೀರ್ಪು ನೀಡುತ್ತ, ಆರು ತಿಂಗಳೊಳಗೆ ಕಾನೂನು ಪ್ರಕಾರ ಕ್ರಮ ತಗೊಳ್ಳಬೇಕು ಎಂದು ಭಾರತದ ಚುನಾವಣಾ ಆಯೋಗಕ್ಕೆ ಹೇಳಿತು. ಚುನಾವಣಾ ಆಯೋಗ ಕೇಂದ್ರ ಗೃಹ ಮಂತ್ರಾಲಯಕ್ಕೆ ಈ ಬಗ್ಗೆ ಬರೆಯಿತು.

ಈ ನಡುವೆ ಕಾಂಗ್ರೆಸ್‍ ನೇತೃತ್ವದ ಸರಕಾರ ಹೋಗಿ ಬಿಜೆಪಿ ನೇತೃತ್ವದ ಸರಕಾರ ಬಂತು.  ನಿರೀಕ್ಷಿಸಿದಂತೆ, ಬಿಜೆಪಿ ಮತ್ತು ಕಾಂಗ್ರೆಸ್‍ ಎರಡೂ ಈ ತೀರ್ಪಿನ ವಿರುದ್ಧ  ಸುಪ್ರಿಂ ಕೋರ್ಟ್‍ಗೆ ಅಪೀಲು ಹೋದವು.

2016 ರ ಬಜೆಟಿನಲ್ಲಿ 2010ರಲ್ಲಿ ಪುನರ್ರೂಪಿಸಿದ ಎಫ್‍ಸಿಆರ್‍ಎ ಗೆ ತಿದ್ದುಪಡಿ ಬಂದದ್ದು ಈ ಹಿನ್ನೆಲೆಯಲ್ಲಿ. ಈ ತಿದ್ದುಪಡಿ ‘ಕಾಯ್ದೆಯಲ್ಲಿದ್ದ ‘ವಿದೇಶಿ ಮೂಲ’ ಎಂಬುದನ್ನು ಬಿಜೆಪಿ ಮತ್ತು ಕಾಂಗ್ರೆಸ್‍ ಹೈಕೋರ್ಟ್‍ ತೀರ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ನಿರೂಪಿಸಿತು. ಇದರ ಸಹಾಯದಿಂದ, ನವಂಬರ್‍2016ರಲ್ಲಿ  ಸುಪ್ರಿಂ ಕೋರ್ಟಿನಲ್ಲಿ ಈ ಎರಡು ಪಕ್ಷಗಳ ಅಪೀಲು ವಿಚಾರಣೆಗೆ ಬಂದಾಗ, ಅವರ ವಕೀಲರುಗಳು 2016ರ ತಿದ್ದುಪಡಿಯ ನಂತರ  ಈ ಕೇಸ್‍ಗೆ ಏನೂ ಅರ್ಥವುಳಿದಿಲ್ಲ ಎಂದು ಹೇಳಿದರು. ಆಗ ಮೂರು ಅಂಶಗಳನ್ನು ಆ ವಕೀಲರುಗಳ ಗಮನಕ್ಕೆ ತರಲಾಯಿತು-(1) ಎಫ್‍ಸಿಆರ್‍ಎ ಕಾಯ್ದೆ ಮೂಲತಃ 1976ರಲ್ಲಿ ಬಂದಿತ್ತು, (2) ಹೊಸದೊಂದು ಎಫ್‍ಸಿಆರ್‍ಎ 2010ರಲ್ಲಿ ಬಂತು, (3) ಬಿಜೆಪಿ ಮತ್ತು    ಕಾಂಗ್ರೆಸ್‍ ವಿದೇಶಿ ವಂತಿಗೆಗಳನ್ನು ಪಡೆದದ್ದು 2010ರ ಮೊದಲಾದ್ದರಿಂದ, ಅದಕ್ಕೆ ಅನ್ವಯವಾಗುವದು ಎಫ್‍ಸಿಆರ್‍ಎ, 1976. ಆದ್ದರಿಂದ  ಕೇಸನ್ನು ಅದರ ಅಡಿಯಲ್ಲಿ ಇತ್ಯರ್ಥ ಮಾಡಬೇಕಾಗಿದೆ.

ಆಗ ಬಿಜೆಪಿ ಮತ್ತು ಕಾಂಗ್ರೆಸ್‍ ವಕೀಲರುಗಳು ತಮ್ಮ ಕಕ್ಷಿದಾರರೊಡನೆ ಈ ಕುರಿತು ಸಮಾಲೋಚಿಸಬೇಕಾಗಿದೆ ಎನ್ನುತ್ತ  ಅಪೀಲನ್ನು ಹಿಂತೆಗೆದುಕೊಂಡರು, ಅಂದರೆ ಈಗ ದಿಲ್ಲಿ ಹೈಕೋರ್ಟ್‍ ತೀರ್ಪನ್ನು ಜಾರಿಗೆ ತಂದು ಈ ಎರಡೂ ಪಕ್ಷಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿತ್ತು. ಹಾಗೆ ಮಾಡದ್ದರಿಂದ ದಿಲ್ಲಿ ಹೈಕೋರ್ಟಿನಲ್ಲಿ ಕೇಂದ್ರ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಅರ್ಜಿ ಹಾಕಲಾಯಿತು. ಕೇಂದ್ರ ಸರಕಾರದ ವಕೀಲರುಗಳು ಒಂದಿಲ್ಲೊಂದು ಕಾರಣ ಮುಂದೊಡ್ಡುತ್ತಿರುವುದರಿಂದ ಈ ಅರ್ಜಿ ಇನ್ನೂ ಇತ್ಯರ್ಥವಾಗದೆ ಉಳಿದಿದೆ.

2018ರ ಎಫ್‍ಸಿಆರ್‍ಎ ತಿದ್ದುಪಡಿ ಬಂದಿರುವುದು ಈ ಹಿನ್ನೆಲೆಯಲ್ಲಿ. ಇದು ಬಿಜೆಪಿ ಮತ್ತು ಕಾಂಗ್ರೆಸನ್ನು ಕಾನೂನು ಉಲ್ಲಂಘನೆಗೆ ಶಿಕ್ಷೆಯಿಂದ ಉಳಿಸುವ ಉದ್ದೇಶದಿಂದಲೇ ಎಂಬುದು ಸ್ಪಷ್ಟ. ಇದು ‘ವಿದೇಶಿ ಮೂಲಗಳ’ ನಿರೂಪಣೆಯನ್ನು 1976 ರಿಂದಲೇ ಅನ್ವಯ ವಾಗುವಂತೆ ಮಾಡುವ ತಿದ್ದುಪಡಿ. ಅಂದರೆ ತಮ್ಮ ಪಕ್ಷವನ್ನು(ಜತೆಗೆ ಅದು ಬಯಸದಿದ್ದರೂ ಅನಿವಾರ್ಯವಾಗಿ ಕಾಂಗ್ರೆಸನ್ನೂ) ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಹತಾಶ ಮೋದಿ ಸರಕಾರ ಈಗ ಅಸ್ತಿತ್ವದಲ್ಲೇ ಇಲ್ಲದ ಕಾಯ್ದೆಯೊಂದನ್ನು ತಿದ್ದುಪಡಿ ಮಾಡ ಹೊರಟಿದೆ!

ಈ ನಡುವೆ 2017ರ ಬಜೆಟಿನೊಂದಿಗೆ ಬಂದ ಹಣಕಾಸು ಕಾಯ್ದೆಯಲ್ಲಿ ಚುನಾವಣಾ ಬಾಂಡ್‍ನ್ ಪರಿಕಲ್ಪನೆಯನ್ನು ಸೇರಿಸಲು ನಾಲ್ಕು ಶಾಸನಗಳನ್ನು, ಭಾರತ ರಿಝರ್ವ್ ಬ್ಯಾಂಕ್‍ ಕಾಯ್ದೆ 1934, ಜನತಾ ಪ್ರಾತಿನಿಧ್ಯ ಕಾಯ್ದೆ, 1951 , ಆದಾಯ ತೆರಿಗೆ ಕಾಯ್ದೆ , 1961 ಮತ್ತು ಕಂಪನಿ ಕಾಯ್ದೆ ,2013ನ್ನು ತಿದ್ದುಪಡಿ ಮಾಡಿತು.  ಇದು ಜನವರಿ 2ರಂದು ಒಂದು ಅಧಿಸೂಚನೆಯ ಮೂಲಕ ಜಾರಿಗೆ ಬಂದಿದೆ.

ಕಾರ್ಪೊರೇಟ್‍ ವಂತಿಗೆ ನಿಷೇಧಿಸದೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಅಸಾಧ್ಯ

ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್‍ ವಂತಿಗೆಗಳನ್ನು ನಿಷೇಧಿಸಬೇಕು ಎಂದು ಯೆಚುರಿ ಪತ್ರಿಕಾ ಸಮ್ಮೇಳನದಲ್ಲಿ ಸಿಪಿಐ(ಎಂ)ನ ನಿಲುವನ್ನು ಪುನರುಚ್ಚರಿಸುತ್ತ ಆಗ್ರಹಿಸಿದರು.  ಕಾಂಗ್ರೆಸ್‍ ಮತ್ತು ಬಿಜೆಪಿ ಇವೆರಡೂ ತಮಗೆ ಸಿಕ್ಕಿದ ಅಧಿಕಾರವನ್ನು ತಮ್ಮ ‘ಗೆಳೆಯ’ ಕಾರ್ಪೊರೇಟ್‍ ಗಳಿಗೆ ಅನುಕೂಲವಾಗುವ ಧೋರಣೆಗಳನ್ನು ರೂಪಿಸಲು ಬಳಸಿವೆ, ಈ ಕಾರ್ಪೊರೇಟ್‍ ವಂತಿಗೆಗಳೇ ನಮ್ಮ ವ್ಯವಸ್ಥೆಯನ್ನು ಕೊರೆಯುತ್ತಿರುವ ಭ್ರಷ್ಟಾಚಾರಕ್ಕೆ ಆಹಾರ ಪೂರೈಸುವಂತದ್ದು, ಆದ್ದರಿಂದ ಕಾರ್ಪೊರೇಟ್‍ ವಂತಿಗೆಗಳನ್ನು ನಿಷೇಧಿಸದೆ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಈಗ ಜಾರಿಗೆ ಬಂದಿರುವ ಚುನಾವಣಾ ಬಾಂಡಂತೂ ಈ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವ ಕ್ರಮ ಎಂದು ಅವರು ಹೇಳಿದರು. ಈ ಹಿಂದೆ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್‍ ವಂತಿಗೆಯ ಮೇಲೆ ಮಿತಿಯಿತ್ತು. ಅವು ಹಿಂದಿನ ಮೂರು ವರ್ಷಗಳ ಲಾಭಗಳ 7% ದಷ್ಟು ಮಾತ್ರ ಕೊಡಬಹುದಾಗಿತ್ತು. ಆದರೆ ಈಗ  ಇಂತಹ ಯಾವ ಮಿತಿಯೂ ಇಲ್ಲ, ಅಲ್ಲದೆ ವಿದೇಶಿ  ಕಂಪನಿಗಳು ಕೂಡ ನೀಡಬಹುದು. ಈ ಬಾಂಡನ್ನು ಯಾರು ಯಾರಿಗೆ ನೀಡಿದ್ದಾರೆ ಎಂದು ತಿಳಿಸಬೇಕಾಗಿಲ್ಲ . ಇದು ಕಪ್ಪು ಹಣವನ್ನು ಬಿಳ ಮಾಡಲೆಂದೇ ರಚಿಸುವ ‘ಶೆಲ್’’ ಕಂಪನಿಗಳು ಹೆಚ್ಚಲು ಅವಕಾಶ ಕಲ್ಪಿಸುತ್ತದೆಯೇ ವಿನಹ ಮೋದಿ ಸರಕಾರ ಹೇಳುವಂತೆ  ರಾಜಕೀಯ ವಂತಿಗೆಗಳ ಪಾರದರ್ಶಕತೆಯನ್ನು ಖಂಡಿತಾ ಹೆಚ್ಚಿಸುವುದಿಲ್ಲ. ಆದ್ದರಿಂದಲೇ ರಾಜ್ಯಸಭೆ ಯೆಚುರಿ ಮತ್ತಿತರರ ಮುತುವರ್ಜಿಯಿಂದ ಇದಕ್ಕೆ 5 ತಿದ್ದುಪಡಿಗಳನ್ನು ಸೂಚಿಸಿತು. ಆದರೆ ಇದನ್ನು ಬೇಕೆಂದೇ ‘ಹಣದ ಮಸೂದೆ’(ಮನಿ ಬಿಲ್) ಎಂದು ಮಂಡಿಸಿದ್ದರಿಂದ ಲೋಕಸಭೆ ಈ ತಿದ್ದುಪಡಿಗಳನ್ನು ಗಮನಕಕ್ಏ ತೆಗೆದುಕೊಳ್ಳದಿರಲು ಸಾಧ್ಯವಾಯಿತು. ಮೇಲೆ ಹೇಳಿದಂತೆ ಈ ಜನವರಿ 2ರಿಂದ ಒಂದು ಅಧಿಸೂಚನೆಯ ಮೂಲಕ ಅದು ಜಾರಿಗೆ ಬಂದಿದೆ.

ಚುನಾವಣಾ ಬಾಂಡ್‍ ಇಲ್ಲದೆಯೇ 2016-17ರಲ್ಲಿ ಕಾರ್ಪೊರೇಟ್‍ ವಂತಿಗೆಗಳಲ್ಲಿ 89% ಈಗಿನ ಆಳುವ ಪಕ್ಷ ಬಿಜೆಪಿಗೆ ಹೋಗಿದೆ ಎಂಬ ಸುದ್ದಿ ಇತ್ತೀಚೆಗೆ ಬಂದಿದೆ. ಜತೆಗೆ ಕಳೆದ ವರ್ಷ ಉತ್ಪತ್ತಿಯಾದ ಸಂಪತ್ತಿನಲ್ಲಿ 73% ಕೇವಲ 1% ಅತ್ಯಂತ ಶ್ರೀಮಂತರ ಪಾಲಾಗಿದೆ ಎಂಬ ಸುದ್ದಿಯೂ ಬಂದಿದೆ. ಅಲ್ಲದೆ ಕಳೆದ ಮೂರುವರ್ಷಗಳಲ್ಲಿ 2ಲಕ್ಷ ಕೋಟಿ ರೂ.ಗಳಷ್ಟು ಕಾರ್ಪೊರೇಟ್‍ ಸಾಲಬಾಕಿಗಳನ್ನು ಲೆಕ್ಕದಿಂದ ತೆಗೆದು ಹಾಕಲಾಗಿದೆ. ಇದು ಅತ್ಯಂತ ಕೆಟ್ಟ ರೀತಿಯ ಚಮಚಾ ಬಂಡವಾಳಶಾಹಿಗೆ ಅನುವು ಮಾಡಿಕೊಡುತ್ತದೆ ಎಂಬ ವಾದ ದರಿಂದ ನಿಜವಾಗಿದೆ. ಚುನಾವಣಾ ಬಾಂಡ್‍ ಇದನ್ನು ಮತ್ತಷ್ಟು ಹೊಲಸಾಗಿಸುತ್ತದೆ ಎಂದು ಯೆಚುರಿ ಆತಂಕ ವ್ಯಕ್ತಪಡಿಸಿದರು.

“ಇದರ ಒಟ್ಟು ಪರಿಣಾಮವೆಂದರೆ, ವಿದೇಶಿ ಒಡೆತನದ ಕಂಪನಿಯೂ ಸೇರಿದಂತೆ, ಯಾವುದೇ ನೈಸರ್ಗಿಕ ಅಥವ ಕಾನೂನು ಗುರುತಿಸುವ ವ್ಯಕ್ತಿ,  ಭಾರತದಲ್ಲಿನ ಒಂದು ರಾಜಕೀಯ ಪಕ್ಷಕ್ಕೆ ಯಾವುದೇ ಮಿತಿಯಿಲ್ಲದೆ, ಮತ್ತು ವಂತಿಗೆ ನೀಡಿದವರ ಮತ್ತು ವಂತಿಗೆ ಪಡೆದ ರಾಜಕೀಯ ಪಕ್ಷದ ಹೆಸರನ್ನು ತಿಳಿಸದೆಯೇ ಹಣಕಾಸು ಒದಗಿಸಬಹುದಾಗಿದೆ. ಇದು ಆಳುವ ಪಕ್ಷ ಯಾವುದೇ ರೀತಿಯ ವ್ಯಕ್ತಿ, ಸಂಸ್ಥೆಗಳೊಂದಿಗೆ ಎಲ್ಲ ರೀತಿಯ ಪ್ರತಿಫಲದ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಒಂದು ಪಕ್ವವಾದ ದಾರಿ” ಎಂದು ಈ ಕುರಿತ ಸಿಪಿಐ(ಎಂ) ಹೇಳಿಕೆ ವರ್ಣಿಸಿದೆ.

ಚುನಾವಣಾ ಬಾಂಡ್ ಎರಡು ರೀತಿಗಳಲ್ಲಿ ಸಂವಿಧಾನಕ್ಕೆ ಸವಾಲು ಹಾಕಿದೆ ಎಂದು ಸಿಪಿಐ(ಎಂ)ನ ಅರ್ಜಿ ಹೇಳಿದೆ. ಸಂವಿಧಾನದ ಕಲಮು 19ರಲ್ಲಿರುವ  ‘ತಿಳಿಯುವ ಹಕ್ಕ’ನ್ನು ಬದಿಗೊತ್ತಿದೆ, ಆಮೂಲಕ ಕಲಮು 14ನ್ನು ಉಲ್ಲಂಘಿಸಿದೆ . ಅಲ್ಲದೆ, ಇದನ್ನು ಕುರಿತ ಮಸೂದೆಯನ್ನು ‘ಹಣಕಾಸು ಮಸೂದೆ’ ಎಂದು ಅದನ್ನು ಪಾಸು ಮಾಡಿಸಿಕೊಂಡು ಸಂವಿಧಾನವನ್ನು ವಂಚಿಸಿದೆ, ಏಕೆಂದರೆ ಸಂವಿಧಾನದ ಕಲಮು110 ರ ಪ್ರಕಾರ ಇದು ಹಣಕಾಸು ಮಸೂದೆಯಾಗಲು ಸಾಧ್ಯವಿಲ್ಲ ಎಂದು ಸೀತಾರಾಂ ಯೆಚುರಿ ವಿವರಿಸಿದರು. ಇದು ಸಂವಿಧಾನದ ಉಲ್ಲಂಘನೆ ಎಂದು ಸಾರಬೇಕೆಂಬುದೂ  ಸಿಪಿಐ(ಎಂ) ಸುಪ್ರಿಂ ಕೋರ್ಟನ್ನು ಕೇಳಿದೆ.

ಯೆಚುರಿಯವರು ಈ ಪತ್ರಿಕಾಸ ಮ್ಮೇಳನದಲ್ಲಿ 2005ರಿಂದ 2010ರ ನಡುವೆ  ಬಿಜೆಪಿ ಮತ್ತು ಕಾಂಗ್ರೆಸಿಗೆ ವಿದೇಶಿ ವಂತಿಗೆಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದರು.

ಚುನಾವಣಾ ಸುಧಾರಣೆಯ ಅಗತ್ಯ

ಇದು ದೇಶದಲ್ಲಿ ಚುನಾವಣಾ ಸುಧಾರಣೆಯ ವಿಶಾಲ ಪ್ರಶ್ನೆಯ ಭಾಗ. ಇದನ್ನು ಈಗ ಕೈಗೆತ್ತಿಕೊಳ್ಳಬೇಕಾದ ತುರ್ತಿನತ್ತಲೂ ಇದು ಗಮನ ಸೆಳೆದಿದೆ ಎಂದು ಯೆಚುರಿ ಹೇಳಿದರು.

ಇದು ರಾಜಕೀಯ ಪಕ್ಷಗಳಿಗೆ ಕಾರ್ಪೊರೇಠ್‍ ವಂತಿಗೆಯ ನಿಷೇಧದಿಂದಲೇ ಆರಂಭವಾಗಬೇಕು. ಈಗ ‘ಕಾರ್ಪೊರೇಟ್‍ ಸಾಮಾಜಿಕ ಹೊಣೆಗಾರಿಕೆ’ (ಸಿಎಸ್‍ಆರ್‍) ಎಂಬುದು ಇರುವಂತೆ  ಪ್ರಜಾಪ್ರಭುತ್ವವನ್ನು ಬಲಪಡಿಸುವ ದು ನಿಧಿಯನ್ನು ಆರಂಭಿಸಬೇಕು, ಅದಕ್ಕೆ ಕಾರ್ಪೊರೇಟ್‍ಗಳು ಸಿಎಸ್‍ಆರ್‍ ರೀತಿಯಲ್ಲೇ ವಂತಿಗೆ ನೀಡುವಂತಾಗಬೇಕು. ಏಕಂದರೆ ಪ್ರಜಾಪ್ರಭುತ್ವವನ್ನು ಬಲಪಡಿಸುವ ಜವಾಬ್ದಾರಿ ಅವಕ್ಕೂ ಇದೆ. ಈ ನಿಧಿಯಿಂದ ಪ್ರಭುತ್ವವೇ ಚುನಾವಣಾ ವೆಚ್ಚಕ್ಕೆ ವ್ಯವಸ್ಥೆ ಮಾಡುವ ಬಗ್ಗೆ  ವಿಧಿ-ವಿಧಾನಗಳನ್ನು ರೂಪಿಸಬಹುದು.

ಇದರ ಜತೆಗೆ ಭಾಗಶಃ ಆನುಪಾತಿಕ ಪ್ರಾತಿನಿಧಿತ್ವವನ್ನು  ಒಳಗೊಂಡ ಮತದಾನ ವ್ಯವಸ್ಥೆಯನ್ನು ರೂಪಿಸುವ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದು ಅವರು ಹೇಳಿದರು. ಸಿಪಿಐ(ಎಂ)ನ ಈ ಸಲಹೆಯನ್ನು ಈ ಹಿಂದೆ ಪ್ರತಿಪಕ್ಷವಾಗಿದ್ದಾಗ ಬಿಜೆಪಿ ಕೂಡ ಬೆಂಬಲಿಸಿತ್ತು. ಆದರೆ ಈಗ ಕೇವಲ 31% ಮತಗಳಿಂದ, ಮತದಾನದಲ್ಲಿ ಭಾಗವಹಿಸಿದ 69% ಮಂದಿ ವಿರೋಧಿಸಿದರೂ ಸರಕಾರ ನಡೆಸುವ ಅವಕಾಶ ಪಡೆದ ಮೇಲೆ ಅದರ ಬಗ್ಗೆ ಮಾತಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *