ಜನಗಳ ಜ್ವಲಂತ ಪ್ರಶ್ನೆಗಳ ಮೇಲೆ ಪ್ರಚಾರಾಂದೋಲನಗಳು

ಜನಗಳ ಮೇಲೆ ಮೋದಿ ಸರಕಾರ ಹೇರುತ್ತಿರುವ ಎಲ್ಲ ಸಮಸ್ಯೆಗಳ ಮೇಲೆ ಸಾರ್ವಜನಿಕ ಪ್ರಚಾರಾಂದೋಲನ ನಡೆಸಲು ಸಿಪಿಐ(ಎಂ) ಪೊಲಿಟ್‌ಬ್ಯುರೊ ನಿರ್ಧರಿಸಿದೆ. ಹೀಗೆ ಮಾಡುವಾಗ ಸರ್ವವ್ಯಾಪಿ ಕೊರೊನಾ ವೈರಸ್ ರೋಗ ಉಂಟು ಮಾಡಿರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದು  ಹೇಳಲಾಗಿದೆ. ನಮ್ಮ ಜನತೆಯ ಎಲ್ಲ ವಿಭಾಗಗಳೊಂದಿಗೆ ಸಂಯೋಜಿಸಿ ಈ ಪ್ರತಿಭಟನೆಗಳನ್ನು ನಡೆಸಲಾಗುವುದು- ನಿರುದ್ಯೋಗದ ವಿರುದ್ಧ ಯುವಜನರೊಂದಿಗೆ, ಕಾರ್ಮಿಕರೊಂದಿಗೆ ಕ್ಲೋಶರ್‌ಗಳು, ರಾಷ್ಟ್ರೀಯ ಆಸ್ತಿಗಳ ಲೂಟಿಗಳು, ಸಾರ್ವಜನಿಕ ವಲಯದ ಖಾಸಗೀಕರಣ, ರಿಟ್ರೆಂಚ್‌ಮೆಂಟ್ ವಿರುದ್ಧ ಮತ್ತು ಕನಿಷ್ಟ ಕೂಲಿಗಾಗಿ, ಮಹಿಳೆಯರೊಂದಿಗೆ, ಅವರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳು, ಅತ್ಯಾಚಾರಗಳ ವಿರುದ್ಧ, ಆರ್ಥಿಕ ಹಿಂಜರಿತ ಉಂಟು ಮಾಡಿರುವ ಹೊರೆಗಳ ವಿರುದ್ಧ, ರೈತರು ಮತ್ತು ಕೃಷಿಕೂಲಿಕಾರರೊಂದಿಗೆ ತೀಕ್ಷ್ಣಗೊಳ್ಳುತ್ತಿರುವ ಕೃಷಿ ಸಂಕಟದ ವಿರುದ್ಧ, ವಿದ್ಯಾರ್ಥಿಗಳು, ದಲಿತರು, ಬುಡಕಟ್ಟು ಜನಗಳು ಮುಂತಾದ ಜನವಿಭಾಗಗಳೊಂದಿಗೆ ಈ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಮಾರ್ಚ್ 14 ಮತ್ತು 15ರಂದು ಸಭೆ ಸೇರಿದ ಸಿಪಿಐ(ಎಂ) ಪೊಲಿಟ್‌ಬ್ಯುರೊ ಕಳೆದ ಸಭೆಯ ನಂತರದ ಬೆಳವಣಿಗೆಗಳನ್ನು, ಮುಖ್ಯವಾಗಿ, ಕೊರೊನಾ ವೈರಸ್ ಉಂಟು ಮಾಡಿರುವ ಪರಿಸ್ಥಿತಿ, ಸಿಎಎ ಇತ್ಯಾದಿಗಳ ವಿರುದ್ಧ ಸತತವಾಗಿ ನಡೆಯುತ್ತಿರುವ ಪ್ರತಿಭಟನೆಗಳು, ದಿಲ್ಲಿಯ ಕೋಮುವಾದಿ ಹಿಂಸಾಚಾರ, ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ, ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ಪಾತ್ರದ ಬಗ್ಗೆ ಟೀಕೆಗಳು,  ರಾಜ್ಯ ಸರಕಾರಗಳನ್ನು ಉರುಳಿಸುವ ಭಂಡ ಪ್ರಜಾಪ್ರಭುತ್ವ-ವಿರೋಧಿ ನಡೆಗಳು ಹಾಗೂ ಆರ್ಥಿಕ ಹಿಂಜರಿತದ ದಿನಗಳಲ್ಲಿ ಏರುತ್ತಿರುವ  ಜನಗಳ ಮೇಲಿನ ಹೊರೆಗಳ ಬಗ್ಗೆ ಪೊಲಿಟ್‌ಬ್ಯುರೊ ಚರ್ಚಿಸಿತು.

ಸಭೆಯ ನಂತರ ಹೊರಡಿಸಿದ ಪೊಲಿಟ್‌ಬ್ಯುರೊ ಹೇಳಿಕೆಯಲ್ಲಿನ ಮತ್ತು ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಅಂಶಗಳನ್ನು ಈ ಮುಂದೆ ಕೊಡಲಾಗಿದೆ:

ಕೊವಿಡ್-19: ದೇಶದಲ್ಲಿ ಮೂರನೇ ಹಂತ ತಲುಪದಂತೆ ಕ್ರಮಗಳನ್ನು ಕೈಗೊಳ್ಳಬೇಕು

ಕೊರೊನಾ ವೈರಸ್ ಸರ್ವವ್ಯಾಪಿ ಕಾಯಿಲೆ ಈಗ ಭಾರತದಲ್ಲಿ ಎರಡನೇ ಹಂತದಲ್ಲಿದೆ. ಆರೋಗ್ಯ ಮಂತ್ರಾಲಯ ಈ ವೈರಸ್ 13 ರಾಜ್ಯಗಳಲ್ಲಿ ಕಂಡು ಬಂದಿದೆ ಎಂದು ಅಧಿಕೃತವಾಗಿ ಹೇಳಿದೆ; ದೇಶದಲ್ಲಿ ಒಟ್ಟು ಅಧಿಕೃತವಾಗಿ ದೃಢಪಡಿಸಿರುವ ಸಂಖ್ಯೆ 110 ಆಗಿದ್ದು, ಅದು ಹೆಚ್ಚುತ್ತಿದೆ. ಇವರಲ್ಲಿ ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ, ಹತ್ತು ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಈ ಸರ್ವವ್ಯಾಪೀ ರೋಗ ಭಾರತದಲ್ಲಿ ಮೂರನೇ ಹಂತ ತಲುಪದಂತೆ ತಡೆಯಲು 30 ದಿನಗಳ ಕಾಲಾವಕಾಶ ಇದೆ ಎಂದು ಎಚ್ಚರಿಸಿದೆ. ಮೂರನೇ ಹಂತ ಭೀಕರ ಪರಿಣಾಮಗಳನ್ನು ಹೊಂದಿದೆ.

ಈ ಸರ್ವವ್ಯಾಪೀ ರೋಗವನ್ನು ತಡೆದು ನಿಲ್ಲಿಸಲು ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಜನಗಳ ನಡುವೆ ಜಾಗೃತಿಯನ್ನು ಮತ್ತು ವೈಜ್ಞಾನಿಕ ಮನೋಭಾವವನ್ನು ನಿರ್ಮಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಪಕ್ಷದ ಎಲ್ಲ ಘಟಕಗಳಿಗೆ ಮತ್ತು ಕಾರ್ಯಕರ್ತರಿಗೆ ಕರೆ ನೀಡಿದೆ. ಹಲವರು ಅವೈಜ್ಞಾನಿಕ, ಮೂಢನಂಬಿಕೆಯ ತಡೆ ವಿಧಾನಗಳನ್ನು ಹರಡುತ್ತಿರುವುದನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಎದುರಿಸಿ ನಿಲ್ಲಬೇಕು ಎಂದೂ ಪೊಲಿಟ್‌ಬ್ಯುರೊ ಆಗ್ರಹಿಸಿದೆ.

ಕೇರಳದ ಎಲ್‌ಡಿಎಫ್ ಸರಕಾರ ಮತ್ತೊಮ್ಮೆ, ತನ್ನ ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಮೂಲಕ ಈ ಸರ್ವವ್ಯಾಪೀ ರೋಗವನ್ನು ತಡೆಗಟ್ಟುವಲ್ಲಿ ಮತ್ತು ಹಾನಿಗಳನ್ನು ಸೀಮಿತಗೊಳಿಸುವಲ್ಲಿ ತೋರಿರುವ ದಕ್ಷತೆಯನ್ನು ಪೊಲಿಟ್‌ಬ್ಯುರೊ ಪ್ರಶಂಸಿಸಿದೆ.

ಸೋಂಕು ಶಂಕಿತರನ್ನು ಪತ್ತೆ ಹಚ್ಚುವಲ್ಲಿ ಭಾರತ ಈಗಲೂ ಬಾಧಿತ ದೇಶಗಳ ಪೈಕಿ ತಳಮಟ್ಟದಲ್ಲೇ ಉಳಿದಿದೆ. ಹೆಚ್ಚೆಚ್ಚು ಪರೀಕ್ಷಣಾ ಕೇಂದ್ರಗಳನ್ನು ಯುದ್ಧೋಪಾದಿಯಲ್ಲಿ ಲಭ್ಯಗೊಳಿಸಬೇಕು, ಇಲ್ಲಿ ಎಲ್ಲ ಸೋಂಕು ಶಂಕಿತ ವ್ಯಕ್ತಿಗಳನ್ನು ತಕ್ಷಣವೇ ಪರೀಕ್ಷಿಸಲು ಮತ್ತು ಅದಕ್ಕನುಗುಣವಾದ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಮಾಡಬೇಕಾಗಿದೆ. ಇಂದೂ ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಬಹಳ ಅಸಮರ್ಪಕವಾಗಿರುವ ನಮ್ಮ ಗ್ರಾಮೀಣ ಪ್ರದೇಶಗಳನ್ನು ಈ ಸೌಕರ್ಯಗಳಿಂದ ಸಜ್ಜುಗೊಳಿಸಬೇಕಾಗಿದೆ.

ಭಾರತ ಸರಕಾರ ಈ ಸರ್ವವ್ಯಾಪೀ ರೋಗವನ್ನು ತಡೆಗಟ್ಟಲು ಇಂತಹ ಒಂದು ಮೂಲರಚನೆಯನ್ನು ತಕ್ಷಣವೇ ಒದಗಿಸುವಂತೆ ಮಾಡಲು ಎಲ್ಲ ರಾಜ್ಯಗಳಿಗೆ ನೆರವು ನೀಡಬೇಕಾಗಿದೆ. ಆರೋಗ್ಯಕ್ಕೆ ಹಣ ನೀಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಮೂಲಕ ದೇಶದಲ್ಲಿ ಒಂದು ಸರಿಯಾದ ಆರೋಗ್ಯಪಾಲನೆ ವ್ಯವಸ್ಥೆ ಏರ್ಪಡುವಂತೆ ಖಾತ್ರಿಪಡಿಸಬೇಕು. ಈ ಸಂದರ್ಭದಲ್ಲಿ, ಕೇಂದ್ರ ಸರಕಾರ ಈ ಸರ್ವವ್ಯಾಪೀ ರೋಗವನ್ನು ನಿಭಾಯಿಸುವಲ್ಲಿ ‘ರಾಜ್ಯ ಅನಾಹುತ ಸ್ಪಂದನೆ ನಿಧಿ’(ಎಸ್‌ಡಿಆರ್‌ಎಫ್)ಯನ್ನು ಬಳಸಿಕೊಳ್ಳಲು ರಾಜ್ಯಗಳಿಗೆ ಅನುಮತಿ ನೀಡಿದ ಆದೇಶವನ್ನು, ಅದನ್ನು ನೀಡಿದ ಕೆಲವೇ ಗಂಟೆಗಳಲ್ಲಿ, ಭಾಗಶಃ ಮಾರ್ಪಾಡು ಮಾಡಿರುವುದನ್ನು ಪೊಲಿಟ್‌ಬ್ಯುರೊ ಖಂಡಿಸಿದೆ. ಈ ಮಾರ್ಪಾಡಿನ ಮೂಲಕ ಈ ವೈರಸ್‌ನಿಂದ ತಮ್ಮ ಸದಸ್ಯನೊಬ್ಬನನ್ನು ಕಳಕೊಂಡ ಕುಟುಂಬಗಳಿಗೆ ಮತ್ತು  ಸೋಂಕು ತಟ್ಟಿದವರ ಶುಶ್ರೂಷೆಗೆ ಪರಿಹಾರವನ್ನು ಹಿಂತೆಗೆದುಕೊಳ್ಳಲಾಗಿದೆ. ಇದನ್ನು ತಕ್ಷಣವೇ ಬದಲಿಸಬೇಕು ಎಂದು ಪೊಲಿಟ್‌ಬ್ಯುರೊ ಆಗ್ರಹಿಸಿದೆ.

ಕೇಂದ್ರ ಸರಕಾರ ಈ ಸರ್ವವ್ಯಾಪೀ ರೋಗ ಹರಡಿರುವುದರಿಂದಾಗಿ ಆಗಿರುವ ಮುಚ್ಚಿಕೆಗಳಿಂದಾಗಿ ಕೆಲಸ ಕಳಕೊಳ್ಳಬಹುದಾದ ಅಥವ ಲೆ-ಆಫ್ ಆಗಬಹುದಾದ ಅನೌಪಚಾರಿಕ ವಲಯದ ಮತ್ತು ಸಂಘಟಿತ ವಲಯದ ಕಾರ್ಮಿಕರಿಗೆ ನೆರವು ಒದಗಿಸಲು ಅನುವಾಗುವಂತೆ ಒಂದು ನಿಧಿಯನ್ನು ನಿರ್ಮಿಸಲು ಆನುಷಂಗಿಕ ಯೋಜನೆಗಳನ್ನು ರೂಪಿಸಬೇಕು ಎಂದೂ ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಸಿಎಎ/ಎನ್‌ಪಿಆರ್/ಎನ್‌ಆರ್‌ಸಿ ಪ್ರತಿಭಟನಾ ಚಳುವಳಿ ಮುಂದುವರೆಯುತ್ತದೆ

ಸಿಎಎ/ಎನ್‌ಪಿಆರ್/ ಎನ್‌ಆರ್‌ಸಿ ವಿರುದ್ಧ ಎಡೆಬಿಡದೆ ನಡೆಯುತ್ತಿರುವ  ಶಾಂತಿಯುತ ಸಾಮೂಹಿಕ ಪ್ರತಿಭಟನೆಗಳು ದೇಶದೆಲ್ಲೆಡೆಗಳಲ್ಲಿ ಮುಂದುವರೆದಿವೆ. ಕೇರಳ ರಾಜ್ಯ ಸರಕಾರದ ಕ್ರಮವನ್ನು ಅನುಸರಿಸಿ ಹೆಚ್ಚೆಚ್ಚು ರಾಜ್ಯ ಸರಕಾರಗಳು ಮುಂದೆ ಬಂದು ಎನ್‌ಪಿಆರ್ ಮತ್ತು ಎನ್‌ಆರ್‌ಸಿಗಳನ್ನು ವಿವಿಧ ಮಟ್ಟಗಳವರೆಗೆ ವಿರೋಧಿಸಿವೆ. ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಛತ್ತೀಸ್‌ಗಡ, ಪಾಂಡಿಚೇರಿ ಮತ್ತು ರಾಜಸ್ಥಾನ ಎನ್‌ಪಿಆರ್ ನಡೆಸುವುದಿಲ್ಲ ಎಂದು ಪ್ರಕಟಿಸಿವೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ದಿಲ್ಲಿ, ಒಡಿಶಾ ಮತ್ತು ಬಿಹಾರ ಎನ್‌ಪಿಆರ್‌ನ್ನು 2010ರ ವಿಧಾನಕ್ಕೆ ಬದ್ಧಗೊಳಿಸದಿದ್ದರೆ ಅದನ್ನು ಜಾರಿಗೊಳಿಸುವುದಿಲ್ಲ ಎಂದಿವೆ. ಮಹಾರಾಷ್ಟ್ರದಲ್ಲಿ ಒಂದು ಮಂತ್ರಿಮಂಡಳಿಯ ಸಮಿತಿ ಈ ವಿಷಯವನ್ನು ಪರಿಶೀಲಿಸುತ್ತಿದೆ.

ಎನ್‌ಪಿಆರ್ ಸಮಕಾಲಿಕಗೊಳಿಸುವ ಪ್ರಕ್ರಿಯೆಯಲ್ಲಿ ಯಾರನ್ನೂ ಸಂದೇಹಾಸ್ಪದ ವ್ಯಕ್ತಿ ಎಂದು ಗುರುತಿಸುವುದಿಲ್ಲ ಎಂದು ಕೇಂದ್ರ ಗೃಹಮಂತ್ರಿ ಅಮಿತ್ ಷಾ ಸಂಸತ್ತಿನಲ್ಲಿ ನೀಡಿರುವ ಹೇಳಿಕೆ ಪೌರತ್ವ ತಿದ್ದುಪಡಿ ಕಾಯ್ದೆ 2003ರ ಅಡಿಯಲ್ಲಿನ ನಿಬಂಧನೆಗಳು ಇರುವವರೆಗೆ ನಿಷ್ಪ್ರಯೋಜಕ. ಗೃಹಮಂತ್ರಿಗಳು ತಮ್ಮ ಮಾತುಗಳ ಬಗ್ಗೆ ಪ್ರಾಮಾಣಿಕರಾಗಿದ್ದರೆ, ಈ ನಿಬಂಧನೆಗಳನ್ನು, ಮುಖ್ಯವಾಗಿ ನಿಬಂಧನೆ ಸಂಖ್ಯೆ 3, 4, 5, 6 ಮತ್ತು 7ನ್ನು ರದ್ದುಗೊಳಿಸಬೇಕು. ಪರಿಣಾಮವಾಗಿ, ತಿದ್ದುಪಡಿಗೊಳಿಸಿದ ನಿರ್ಣಯದಲ್ಲಿ ಎನ್‌ಆರ್‌ಸಿಗೆ ಅವಕಾಶ ನೀಡಿರುವುದು ನಿರರ್ಥಕಗೊಳ್ಳುತ್ತದೆ. ಅದರಿಂದಾಗಿ 2003ರ ಪೌರರ‍್ವ ತಿದ್ದುಪಡಿ ಕಾಯ್ದೆಯನ್ನೂ ತಿದ್ದುಪಡಿ ಮಾಡಬೇಕಾಗುತ್ತದೆ. ಈ ಕ್ರಮಗಳನ್ನು ಭಾರತ ಸರಕಾರ ಕೈಗೊಳ್ಳದಿದ್ದರೆ ಶಾಂತಿಯುತ ಪ್ರತಿಭಟನೆಗಳು ಮುಂದುವರೆಯುತ್ತವೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಎಡಪಕ್ಷಗಳು ಮಾರ್ಚ್ 23ರಂದು, ಭಗತ್‌ಸಿಂಗ್, ರಾಜಗುರು ಮತ್ತು ಸುಖದೇವ್ ಹುತಾತ್ಮರಾದ ದಿನದ ವಾರ್ಷಿಕಾಚರಣೆಯ ಸಂದರ್ಭದಲ್ಲಿ ದೇಶಾದ್ಯಂತ ಸಿಎಎ/ಎನ್‌ಪಿಆರ್/ ಎನ್‌ಆರ್‌ಸಿಗೆ ವಿರೋಧವನ್ನು ಎತ್ತಿ ಹಿಡಿದು, ದಿಲ್ಲಿಯಲ್ಲಿ ಕೋಮುವಾದಿ ಹಿಂಸಾಚಾರವನ್ನು ಖಂಡಿಸಿ ಮತ್ತು ಬಹುಪಾಲು ಜನಗಳ ಮೇಲೆ ಅಭೂತಪೂರ್ವ ಆರ್ಥಿಕ ಹೊರೆಗಳನ್ನು ಹೇರುತ್ತಿರುವುದರ ವಿರುದ್ಧ ಪ್ರತಿಭಟನೆಗಳನ್ನು ನಡೆಸಬೇಕು ಎಂದು ಕರೆ ನೀಡಿವೆ. ಕೊರೊನ ವೈರಸ್ ಸರ್ವವ್ಯಾಪಿಯಾಗಿರುವ ಹಿನ್ನೆಲೆಯಲ್ಲಿ ದೊಡ್ಡ ಸಭೆಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಲಾಗುವುದಿಲ್ಲ. ಆದರೆ ಪ್ರತಿವರ್ಷದಂತೆ ಈ ದಿನಾಚರಣೆಯನ್ನು ನಡೆಸಲಾಗುವುದು ಎಂದು ಪೊಲಿಟ್‌ಬ್ಯುರೊ ಹೇಳಿದೆ.

ದಿಲ್ಲಿ ಕೋಮುವಾದಿ ಹಿಂಸಾಚಾರ-ಸಮಯಬದ್ಧ ಸ್ವತಂತ್ರ ತನಿಖೆ ಅಗತ್ಯ

ದಿಲ್ಲಿಯ ಭೀಷಣ ಕೋಮುವಾದಿ ಹಿಂಸಾಚಾರವನ್ನು ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ ಮತ್ತು ಈ ಅಪರಾಧಗಳ ಒಂದು ನ್ಯಾಯಾಲಯದ ಉಸ್ತುವಾರಿಯ ಸ್ವತಂತ್ರ ತನಿಖೆಯನ್ನು ಸಮಯಬದ್ಧವಾಗಿ ನಡೆಸಬೇಕು ಎಂದು ಆಗ್ರಹಿಸಿದೆ. ಈ ಹಿಂಸಾಚಾರ ಎಸಗಿದವರನ್ನು ಕಾನೂನಿನ ಅಡಿಯಲ್ಲಿ ತೀವ್ರವಾಗಿ ಶಿಕ್ಷಿಸಬೇಕು ಎಂದು ಅದು ಹೇಳಿದೆ.

ಪೋಲೀಸ್ ಪಡೆ ಇಂತಹ ಹಿಂಸಾತ್ಮಕ ಹಲ್ಲೆಗಳನ್ನು ನಡೆಸಿದವರಿಗೆ ಹೇಗೆ ನೆರವಾಯಿತು, ಮತ್ತು ಕುಮ್ಮಕ್ಕು ನೀಡಿತು ಎಂಬುದರ ವೀಡಿಯೋ ಚಿತ್ರಗಳು ವ್ಯಾಪಕವಾಗಿ ಹರಡಿದ ಉದಾಹರಣೆಗಳಿವೆ. ಇದನ್ನು ಒಂದು ಸಮಯಬದ್ಧ ನ್ಯಾಯಾಂಗ ವಿಚಾರಣೆಯ ಮೂಲಕ ಆಮೂಲಾಗ್ರವಾಗಿ ತನಿಖೆ ಮಾಡಬೇಕು.

ಈ ಕೋಮುವಾದಿ ಹಿಂಸಾಚಾರಕ್ಕೆ ಹೊಣೆಗಾರರಾದವರನ್ನು ಗುರುತಿಸಲು ಮುಖ ಗುರುತಿಸುವ ತಂತ್ರಜ್ಞಾನದ ಬಳಕೆಯ ಬಗ್ಗೆ  ಗೃಹಮಂತ್ರಿಯ ದಾವೆಯನ್ನು ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ಈ ತಂತ್ರಜ್ಞಾನದ ನಿಖರತೆ ಕೇವಲ 2ಶೇ. ಎಂದು 2018ರಲ್ಲಿ ಸರಕಾರವೇ ನ್ಯಾಯಾಲಯಗಳ ಮುಂದೆ ಒಪ್ಪಿಕೊಂಡಿದೆ. ಈ ನಿಖರತೆ 2019ರಲ್ಲಿ 1ಶೇ.ಕ್ಕೆ ಇಳಿದಿದೆ. ಇದು ಲಿಂಗ ವ್ಯತ್ಯಾಸವನ್ನು ಕೂಡ ಗುರುತಿಸಲಾರದು ಎಂದೂ ಹೇಳಲಾಗಿದೆ. ಹೀಗಿರುವಾಗ ಇದು ಅಮಾಯಕ ಜನಗಳಿಗೆ ಕಿರುಕುಳ ಮತ್ತು ಪೀಡನೆಯ ಸಾಧ್ಯತೆಗಳನ್ನು ತೆರೆದು ಕೊಡುತ್ತದೆ. ಅಲ್ಲದೆ, ಈ ರೀತಿ ಗುರುತಿಸಲು ಈ ತಂತ್ರಜ್ಞಾನವನ್ನು ಬಳಸುವುದಕ್ಕೆ ಯಾವುದೇ ಕಾನೂನು ಚೌಕಟ್ಟು ಅಥವ ನ್ಯಾಯಾಂಗ ಆದೇಶ ಕೂಡ ಇಲ್ಲ.

ಪರಿಹಾರ ಕಾರ್ಯ: ಕೋಮುವಾದಿ ಹಿಂಸಾಚಾರಕ್ಕೆ ತುತ್ತಾದವರಿಗೆ ಪರಿಹಾರ ನಿಧಿಗಳನ್ನು ಸಂಗ್ರಹಿಸಬೇಕು ಎಂಬ ಸಿಪಿಐ(ಎಂ) ಕರೆಗೆ ಸ್ಪಂದಿಸಿ ಇದುವರೆಗೆ ರೂ. ಆರು ಕೋಟಿಗಿಂತಲೂ ಹೆಚ್ಚು ಸಂಗ್ರಹವಾಗಿದೆ. ಜನಗಳಿಂದ ಎರಡು ದಿನಗಳ ಸಾಮೂಹಿಕ ಸಂಗ್ರಹದಲ್ಲಿ ರೂ.5,30,74,779 ಸಂಗ್ರಹಿಸಿ ಕೊಟ್ಟಿರುವ ಸಿಪಿಐ(ಎಂ)ನ ಕೇರಳ ರಾಜ್ಯ ಸಮಿತಿಯನ್ನು ಪೊಲಿಟ್‌ಬ್ಯುರೊ ಅಭಿನಂದಿಸಿದೆ. ದೇಶಾದ್ಯಂತ ಸಂಗ್ರಹ ಮುಂದುವರೆದಿದೆ.

ದಿಲ್ಲಿ ರಾಜ್ಯ ಸಮಿತಿ ರಚಿಸಿದ ಒಂದು ಪರಿಹಾರ ಸಮಿತಿ ಪ್ರಾಣಹಾನಿ ಅನುಭವಿಸಿದ ಕುಟುಂಬಗಳಿಗೆ ಬಹಳ ಅಗತ್ಯವಾದ ಪರಿಹಾರ ಒದಗಿಸಲು, ಗಾಯಗೊಂಡವರ ಚಿಕಿತ್ಸೆಗೆ ಮತ್ತು ಮನೆಗಳು ಬೆಂಕಿಗಾಹುತಿಯಾದವರಿಗೆ ಹಾಗೂ ಜೀವನಾಧಾರಗಳು ಕಿತ್ತುಕೊಳ್ಳಲ್ಪಟ್ಟವರಿಗೆ ಮರುವಸತಿ ಕಲ್ಪಿಸಲು ಕೆಲಸ ಮಾಡುತ್ತಿದೆ.

ಜಮ್ಮು ಮತ್ತು ಕಾಶ್ಮೀರ -ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ತಕ್ಷಣದಿಂದಲೇ ಮತ್ತೆ ಸ್ಥಾಪಿಸಬೇಕು

ಕೊನೆಗೂ, ಏಳು ತಿಂಗಳು ಸಾರ್ವಜನಿಕ ಭದ್ರತಾ ಕಾಯ್ದೆಯ ಅಡಿಯಲ್ಲಿ ಬಂಧನದ ನಂತರ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ, ಮಾಜಿ ಕೇಂದ್ರ ಮಂತ್ರಿ ಮತ್ತು ಈಗ ಸಂಸತ್ ಸದಸ್ಯರಾಗಿರುವ ಫಾರುಕ್ ಅಬ್ದುಲ್ಲಾ ರವರ ಬಿಡುಗಡೆಯಾಗಿರುವುದನ್ನು ಪೊಲಿಟ್‌ಬ್ಯುರೊ ಸ್ವಾಗತಿಸಿದೆ.

ಆದರೆ ಕಾಶ್ಮೀರದ ಮೇಲೆ ಹೇರಿರುವ ನಿರ್ಬಂಧ ಮುಂದುವರೆಯುತ್ತಿದೆ. ಕರಾಳ ಸಾರ್ವಜನಿಕ ಭದ್ರತಾ ಕಾಯ್ದೆ(ಪಿಎಸ್‌ಎ)ಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲ ಮತ್ತು ಮೆಹಬೂಬ ಮುಫ್ತಿಯವರ ಮೇಲೆ ಪ್ರಯೋಗಿಸಲಾಗಿದೆ. ಏಳು ತಿಂಗಳ ನಂತರವೂ ಸಾವಿರಾರು ಮಂದಿ ಬಂಧನದಲ್ಲಿದ್ದಾರೆ. ಲಕ್ಷಾಂತರ ಜೀವನಾಧಾರಗಳು ನಾಶವಾಗಿವೆ. ಸಾಮಾನ್ಯ ದೈನಂದಿನ ಚಟುವಟಿಕೆಗಳೇ ಇಲ್ಲವಾಗಿವೆ.

ಆಗಸ್ಟ್ 4/5,2019ರಂದು ಬಂಧಿತರಾದ ಎಲ್ಲರನ್ನೂ ಈ ಕ್ಷಣವೇ ಬಿಡುಗಡೆ ಮಾಡಬೇಕು. ಸಂಪರ್ಕದ ಮೇಲಿನ ನಿರ್ಬಂಧಗಳನ್ನು ತೆಗೆಯಬೇಕು. ಜನಗಳ ಸಾಮಾನ್ಯ ಚಟುವಟಿಕೆಗಳ ಪರಿಸ್ಥಿತಿಯನ್ನು ಕೂಡಲೇ ನೆಲೆಗೊಳಿಸಬೇಕು. ಭಾರತೀಯ ಸಂವಿಧಾನದ ಅಡಿಯಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ತಕ್ಷಣದಿಂದಲೇ ಮತ್ತೆ ಸ್ಥಾಪಿಸಬೇಕು.

ಭಾರತೀಯ ಸಂವಿಧಾನದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಹೊಂದಿದ್ದ ವಿಶೇಷ ರಾಜ್ಯದ ಸ್ಥಾನಮಾನವನ್ನು ತಕ್ಷಣವೇ ಮತ್ತೆ ನೆಲೆಗೊಳಿಸಬೇಕು ಎಂದುಪೊಲಿಟ್‌ಬ್ಯುರೊ ಆಗ್ರಹಿಸಿದೆ.

ನ್ಯಾಯಾಂಗದ ಬಗ್ಗೆ ಟೀಕೆಗಳು-ತುರ್ತಾಗಿ ಸರಿಪಡಿಸಬೇಕಾಗಿದೆ

ಸಂವಿಧಾನಿಕ ವ್ಯವಸ್ಥೆಯಲ್ಲಿ, ಭಾರತದಲ್ಲಿ ನ್ಯಾಯಾಂಗ ಸ್ವತಂತ್ರವಾಗಿದೆ ಮಾತ್ರವಲ್ಲ, ನಮ್ಮ ಸಂವಿಧಾನದ ಅಡಿಯಲ್ಲಿ ಕಾನೂನಿನ ಆಳ್ವಿಕೆಯನ್ನು ಕಾಪಾಡುವಲ್ಲಿ ಅದಕ್ಕೆ ಒಂದು ಅತ್ಯಂತ ಮಹತ್ವದ ಪಾತ್ರವಿದೆ. ನ್ಯಾಯ ನೀಡಿಕೆಯಲ್ಲಿ ವಿಳಂಬ, ಹೈಕೋರ್ಟ್ ನ್ಯಾಯಾಧೀಶರ ಮಧ್ಯರಾತ್ರಿ ವರ್ಗಾವಣೆಗಳು ಮತ್ತು ಕಲಮು 370 ರದ್ಧತಿ ಹಾಗೂ ಸಿಎಎ ಗೆ ಸವಾಲುಗಳನ್ನು ವಿಚಾರಣೆಗೆ ಎತ್ತಿಕೊಳ್ಳುವಲ್ಲಿ ವಿಳಂಬ ಜನಗಳಲ್ಲಿ ವಿಶ್ವಾಸವನ್ನು ಉಂಟುಮಾಡುತ್ತಿಲ್ಲ ಮತ್ತು ಇವೆಲ್ಲ ಅವರ ಅತ್ಯುಚ್ಚ ನಿರೀಕ್ಷೆಗಳಿಗೆ ಅನುಗುಣವಾಗಿಲ್ಲ. ಕಾರ್ಯಾಂಗವು ನ್ಯಾಯಾಂಗದ ಮೇಲೆ ಒತ್ತಡ ಹಾಕುತ್ತಿದೆ ಮತ್ತು ನ್ಯಾಯಾಂಗ ತನ್ನ ಹೊಣೆಗಾರಿಕೆಯನ್ನು ಬಿಟ್ಟುಕೊಟ್ಟಿದೆ ಎಂಬ ಟೀಕೆಗಳು ಹಲವೆಡೆಗಳಿಂದ ಬರುತ್ತಿವೆ. ಇದು ದುರದೃಷ್ಟಕರ ಮತ್ತು ಇದನ್ನು ತುರ್ತಾಗಿ ಸರಿಪಡಿಸಬೇಕಾಗಿದೆ ಎಂದು ಪೊಲಿಟ್‌ಬ್ಯುರೊ ಅಭಿಪ್ರಾಯ ಪಟ್ಟಿದೆ.

ರಾಜ್ಯ ಸರಕಾರಗಳನ್ನು ಉರುಳಿಸುವ ಭಂಡ ಪ್ರಯತ್ನಗಳು

ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರಗಳನ್ನು ಉರುಳಿಸುವುದಕ್ಕಾಗಿ ಮತ್ತು ಜನಾದೇಶವನ್ನು ಉಲ್ಲಂಘಿಸುವುದಕ್ಕಾಗಿ ಭಂಡ ಕುದುರೆ ವ್ಯಾಪಾರ, ಶಾಸಕರ ಪಕ್ಷಾಂತರ ಮಾಡಿಸಲು ಬೆದರಿಕೆಗಳ ಬಳಕೆ ಇತ್ಯಾದಿಗಳನ್ನು ಪೊಲಿಟ್‌ಬ್ಯುರೊ ಬಲವಾಗಿ ಟೀಕಿಸಿದೆ. ಮಧ್ಯಪ್ರದೇಶದಲ್ಲಿ ಹೀಗಾಗುತ್ತಿದೆ. ಈ ಹಿಂದೆ ಕರ್ನಾಟಕದಲ್ಲೂ ಮತ್ತು ಇತರೆಡೆಗಳಲ್ಲೂ ಇಂತಹುದೇ ತಂತ್ರಗಳು ರಾಜ್ಯಗಳ ಜನಾದೇಶಗಳಿಗೆ ವಿಶ್ವಾಸಘಾತ ಬಗೆದಿವೆ. ಇವು ಪ್ರಜಾಪ್ರಭುತ್ವ-ವಿರೋಧಿ ಕೃತ್ಯಗಳು, ಜನತೆಯ ತೀರ್ಪಿನ ಮತ್ತು ಪ್ರಜಾಪ್ರಭುತ್ವದ ಅಪಹಾಸ್ಯ ಮಾಡುವಂತವುಗಳು ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಜನತೆಯ ಮೇಲೆ ಎಡೆಬಿಡದ ಆರ್ಥಿಕ ದಾಳಿಗಳು

ಆರ್ಥಿಕ ಹಿಂಜರಿತ ನಮ್ಮ ಜನತೆಯ ಬಹುಪಾಲು ವಿಭಾಗಗಳಿಗೆ ಅಭೂತಪೂರ್ವ ಸಂಕಟಗಳನ್ನು ಉಂಟು ಮಾಡುತ್ತಿದೆ. ಅತ್ಯಂತ ಹೆಚ್ಚಿನ ನಿರುದ್ಯೋಗ, ಕೃಷಿ ಹತಾಶೆ, ಕಾರ್ಖಾನೆಗಳ ಮುಚ್ಚಿಕೆ, ಮತ್ತು ರಿಟ್ರೆಂಚ್‌ಮೆಂಟ್, ಬೆಲೆಯೇರಿಕೆ ವಿಪರೀತ ಆರ್ತಿಕ ಹೊರೆಗಳನ್ನು ಹೇರುತ್ತಿವೆ. ಈ ಸಂಕಟಗಳ ಮೇಲೆ, ಸರಕಾರ ಈಗ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸುಂಕಗಳನ್ನು ಬೃಹತ್ ಪ್ರಮಾಣದಲ್ಲಿ ಏರಿಸಿದೆ. ಇದು ಬೆಲೆಯೇರಿಕೆಗಳ ಮೇಲೆ ಪರಿಣಾಮ ಬೀರಲಿದೆ. ಅದೇ ವೇಳೆಗೆ, ದೇಶದ ರಾಷ್ಟ್ರೀಯ ಆಸ್ತಿಗಳನ್ನು ಮೂರು ಕಾಸಿಗೆ ಮಾರಲಾಗುತ್ತಿದೆ.

ಬಂಟ ಬಂಡವಾಳಶಾಹಿ: ಬಂಟ ಬಂಡವಾಳಶಾಹಿಯ ಅತ್ಯಂತ ಕೆಟ್ಟ ಉದಾಹರಣೆಯಾಗಿ, ಮತ್ತೊಂದು ಖಾಸಗಿ ಬ್ಯಾಂಕ್, ಯಸ್ ಬ್ಯಾಂಕ್ ಕುಸಿದಿದೆ. ಈ ಬ್ಯಾಂಕಿನ ಸಾಲಖಾತೆ 2014ರಲ್ಲಿ ರೂ.55,633 ಕೋಟಿ  ಇದ್ದದ್ದು, ಮಾರ್ಚ್ 2019ರಲ್ಲಿ ರೂ.2,41,999 ಗೇರಿದೆ ಎಂದು ದಾಖಲೆಗಳು ತಿಳಿಸುತ್ತಿವೆ. ಈ ಬ್ಯಾಂಕಿನ ಮೇಲೆ ಆಳುವ ಸರಕಾರದ ಕೃಪಾಪಾತ್ರ ಕಾರ್ಪೊರೇಟ್‌ಗಳಿಗೆ ಕೊಟ್ಟ ಸಾಲಗಳ ಹೊರೆ ಇದೆ.

ಲಾಭಗಳ ಖಾಸಗೀಕರಣ ಮತ್ತು ನಷ್ಟಗಳ ರಾಷ್ಟ್ರೀಕರಣದ ಒಂದು ಜ್ವಲಂತ ಉದಾಹರಣೆಯಾಗಿ, ಈ ಬ್ಯಾಂಕನ್ನು ಪಾರು ಮಾಡುವಂತೆ ಸ್ಟೇಟ್ ಬಾಂಕ್ ಆಫ್ ಇಂಡಿಯಾಕ್ಕೆ ಹೇಳಲಾಗಿದೆ. ಬ್ಯಾಂಕುಗಳು ಮೋದಿ ಸರಕಾರದ ಬಂಟರುಗಳಿಗೆ ನೀಡಿದ ಸಾಲಗಳನ್ನು ಮನ್ನಾ ಮಾಡಿದ್ದಲ್ಲದೆ (2014ರಿಂದ ರೂ.7,78,000 ಕೋಟಿ ಮತ್ತು 2018-19ರಲ್ಲೇ ರೂ.1.83 ಲಕ್ಷ ಕೋಟಿ), ಇತ್ತೀಚೆಗೆ 33 ಶ್ರೀಮಂತ ಸಾಲಗಾರರ ಇನ್ನೂ ರೂ.76,600 ಕೋಟಿ ರೂ.ಗಳನ್ನು ಬಿಟ್ಟು ಬಿಡಲಾಗಿದೆ. ಮಾಜಿ ರಿಝರ್ವ್ ಬ್ಯಾಂಕ್ ಗವರ್ನರ್ ರಘುರಾಮ ರಾಜನ್ ಪ್ರಧಾನ ಮಂತ್ರಿ ಮೋದಿಗೆ 2015ರಲ್ಲಿ ಕೊಟ್ಟ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ ಅವರ ಶ್ರೀಮಂತ ಸುಸ್ತಿದಾರರ ಹೆಸರುಗಳನ್ನು ಇನ್ನೂ ಸಾರ್ವಜನಿಕಗೊಳಿಸಿಲ್ಲ.

ಪೊಲಿಟ್‌ ಬ್ಯುರೊ ಕರೆ

ಜನಗಳ ಮೇಲೆ ಹೇರುತ್ತಿರುವ ಈ ಎಲ್ಲ ಪ್ರಶ್ನೆಗಳ ಮೇಲೆ ಸಾರ್ವಜನಿಕ ಪ್ರಚಾರಾಂದೋಲನಗಳನ್ನು ನಡೆಸಲು ಪೊಲಿಟ್‌ಬ್ಯುರೊ ನಿರ್ಧರಿಸಿದೆ. ಹೀಗೆ ಮಾಡುವಾಗ ಸರ್ವವ್ಯಾಪಿ ಕೊರೊನ ವೈರಸ್ ರೋಗ ಉಂಟು ಮಾಡಿರುವ ಪರಿಸ್ತಿತಿಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು  ಎಂದು ಅದು ಹೇಳಿದೆ. ನಮ್ಮ ಜನತೆಯ ಎಲ್ಲ ವಿಭಾಗಗಳೊಂದಿಗೆ ಸಂಯೋಜಿಸಿ ಈ ಪ್ರತಿಭಟನೆಗಳನ್ನು ನಡೆಸಲಾಗುವದು- ನಿರುದ್ಯೋಗದ ವಿರುದ್ಧ ಯುವಜನರೊಂದಿಗೆ, ಕಾರ್ಮಿಕರೊಂದಿಗೆ ಕ್ಲೋಶರ್‌ಗಳು, ರಾಷ್ಟ್ರೀಯ ಆಸ್ತಿಗಳ ಲೂಟಿಗಳು, ಸಾರ್ವಜನಿಕ ವಲಯದ ಖಾಸಗೀಕರಣ, ರಿಟ್ರೆಂಚ್‌ಮೆಂಟ್ ವಿರುದ್ಧ ಮತ್ತು ಕನಿಷ್ಟ ಕೂಲಿಗಾಗಿ, ಮಹಿಳೆಯರೊಂದಿಗೆ, ಅವರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳು, ಅತ್ಯಾಚಾರಗಳ ವಿರುದ್ಧ, ಆರ್ಥಿಕ ಹಿಂಜರಿತ ಉಂಟು ಮಾಡಿರುವ ಹೊರೆಗಳ ವಿರುದ್ಧ, ರೈತರು ಮತ್ತು ಕೃಷಿಕೂಲಿಕಾರರೊಂದಿಗೆ ತೀಕ್ಷ್ಣಗೊಳ್ಳುತ್ತಿರುವ ಕೃಷಿ ಸಂಕಟದ ವಿರುದ್ಧ, ವಿದ್ಯಾರ್ಥಿಗಳು, ದಲಿತರು, ಬುಡಕಟ್ಟು ಜನಗಳು ಮುಂತಾದ ಜನವಿಭಾಗಗಳೊಂದಿಗೆ ಈ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಪೊಲಿಟ್‌ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *