ಜನತೆಯ ಮೇಲೆ ಹೊರೆ ಹೇರಿದ ರಾಜ್ಯ ಬಜೆಟ್

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಮಂಡಿಸಿದ 2021-22 ರ 2,46,207 ಕೋಟಿ ರೂಗಳ ರಾಜ್ಯ ಬಜೆಟ್ ಕರ್ನಾಟಕ ರಾಜ್ಯದ ಸಂಕಷ್ಠವನ್ನು ಮತ್ತಷ್ಠು ಹೆಚ್ಚಿಸಲು ಪೂರಕವಾಗಿದೆಯೇ ಹೊರತು ಸಂಕಷ್ಠ ನಿವಾರಣೆಗೆ ಯಾವುದೇ ರೀತಿಯಲ್ಲಿ ಸಹಕಾರಿಯಾಗಿಲ್ಲವೆಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ರಾಜ್ಯ ಸಮಿತಿಯು ಬಲವಾಗಿ ಖಂಡಿಸಿದೆ.

ಇದು ರಾಜ್ಯದ ಜನತೆಯ ಮೇಲೆ ಹೊಸದಾಗಿ 71,332 ಕೋಟಿ ರೂ.ಗಳ ಭಾರವನ್ನು ಹೇರಿರುವ ಬಜೆಟ್‌ ಆಗಿದೆ.

ಅದಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ನೀತಿಗಳಿಂದ ರಾಜ್ಯವು ಗಂಭೀರವಾದ ಆರ್ಥಿಕ ಬಿಕ್ಕಟ್ಟಿಗೊಳಗಾಗಿದೆ. ಕಳೆದ 3-4 ವರ್ಷಗಳಿಂದ ಸತತವಾಗಿ ಬರಗಾಲ ಹಾಗೂ ಅತಿವೃಷ್ಠಿಗಳು ರಾಜ್ಯವನ್ನು ಬಾಧಿಸಿವೆ. ಕಳೆದ ವರ್ಷದಿಂದ ಕೋವಿಡ್ – 19 ಹಾಗೂ ಲಾಕ್ ಡೌನ್ ಗಳು ಮತ್ತಷ್ಟು ಸಂಕಷ್ಠವನ್ನುಂಟು ಮಾಡಿವೆ.

ಇದರಿಂದ ರಾಜ್ಯದ ರೈತರು, ಕೂಲಿಕಾರರು, ಕಸುಬುದಾರರು, ಕಾರ್ಮಿಕರು, ದಲಿತರು ಮತ್ತು ಮಹಿಳೆಯರು ನಲುಗಿಹೋಗಿದ್ದಾರೆ. ತಲಾ ಆದಾಯ ಮತ್ತಷ್ಠು ಕುಸಿದು ಹೋಗಿದೆ. ಇವುಗಳಿಂದಾಗಿ ಬದುಕುವುದಕ್ಕೋಸ್ಕರ ಬಡವರಿಂದ ಶ್ರೀಮಂತರ ಕೈಗೆ ಅವರ ಆಸ್ತಿಗಳು ವರ್ಗಾವಣೆಯಾಗಿವೆ. ಶ್ರೀಮಂತರು ಶ್ರೀಮಂತರಾದರೇ ಹೊರತು ಬಡವರ ಬದುಕು ಮತ್ತಷ್ಟು ಕೆಟ್ಟ ಬಡತನಕ್ಕೀಡಾಗಿದ್ದಾರೆ.

ಇದರ ಮೇಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳು ರೈತರು ಹಾಗೂ ಕಾರ್ಮಿಕರ ಉದ್ಯೋಗಗಳನ್ನು ಅಪಹರಿಸುವ ಮತ್ತು ಗ್ರಾಹಕರು ಲೂಟಿಗೊಳಗಾಗುವ ಭೀತಿಯನ್ನು ನಿರ್ಮಿಸಿವೆ. ಇದು ಮಾತ್ರವಲ್ಲಾ, ಕಳೆದ ಮಾರ್ಚ್ 1ರಂದು ಮಂಡಿಸಿದ ಕೇಂದ್ರ ಸರಕಾರದ ಬಜೆಟ್ ಜನತೆಯ ಮೇಲೆ ದೊಡ್ಡ ತೆರಿಗೆಯ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಭಾರವನ್ನು ಹೇರಿದೆ.

ರೈತರ ಆತ್ಮಹತ್ಯೆಗಳನ್ನು ತಡೆಯಲಾಗಲೀ ಹಾಗೂ ಅವರು ಸಾಲಗಾರರಾಗುವುದನ್ನು ತಡೆಯುವ ಕ್ರಮಗಳಾಗಲೀ ಬಜೆಟ್ ನಲ್ಲಿ ಇಲ್ಲ. ಈ ವರ್ಷವು ರಾಜ್ಯದ ಪ್ರಮುಖ ಬೆಳೆಗಳಿಗೆ ಬೆಂಬಲ ಬೆಲೆಗಳಿಲ್ಲದೇ ಲೂಟಿಗೊಳಗಾಗಿದ್ದಾರೆ.

ಕೃಷಿ ಕೂಲಿಕಾರರ ಸಂಖ್ಯೆಯು ಗ್ರಾಮೀಣ ಪ್ರದೇಶದಲ್ಲಿ ಲಾಕ್ ಡೌನ್ ಹಾಗೂ ಕೋವಿಡ್ ಕಾರಣದಿಂದ ಹೆಚ್ಚಳಗೊಂಡಿದೆ. ಬರಗಾಲ, ಅತಿವೃಷ್ಟಿ ಹಾಗೂ ಕೋವಿಡ್ ಮತ್ತು ಲಾಕ್ ಡೌನ್ ಕಾರಣದಿಂದ ಉದ್ಯೋಗಾವಕಾಶಗಳು ಕೃಷಿಯಲ್ಲಿ ಕುಂಠಿತಗೊಂಡಿವೆ. ಉದ್ಯೋಗ ಖಾತ್ರಿಯು ತಲಾ ಕುಟುಂಬಕ್ಕೆ ಸರಾಸರಿ 50 ದಿನಗಳು ದೊರೆಯುತ್ತಿಲ್ಲ. ಕಾರ್ಮಿಕರಿಗೆ ಕನಿಷ್ಢ ವೇತನದ ಹೆಚ್ಚಳವಿಲ್ಲ.

ಕೋವಿಡ್ ಸಾಂಕ್ರಾಮಿಕ ರೋಗ ಹರಡುವಿಕೆ ಬಾಧೆಯ ಪರಿಹಾರವೂ ಇದರಲ್ಲಿ ಇಲ್ಲವಾಗಿದೆ. ಹೀಗಾಗಿ ಈ ಬಜೆಟ್ ಅಭಿವೃದ್ಧಿಗೆ ಪೂರಕವಾಗಿಲ್ಲ ಬದಲಿಗೆ ರಾಜ್ಯದ ಜನತೆಯ ಮೇಲೆ ದೊಡ್ಡ ಸಾಲದ ಹೊರೆಯನ್ನು ಹೇರುವ ಮೂಲಕ ಮತ್ತಷ್ಠು ಮಾರಕವಾಗಿದೆ. ದಲಿತರು, ಮಹಿಳೆಯರಿಗೆ ನೀಡಿದ ಹಣದಲ್ಲಿ ಅವರೊಳಗಿನ ಶ್ರೀಮಂತರಿಗೆ ನೆರವಾಗುವ ಇಂಗಿತವನ್ನು ತೋರಿದೆ.

ಯು. ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *