ಬಿಜೆಪಿ ಏಕಾಧಿಪತ್ಯಕ್ಕೆ ಬ್ರೇಕ್ ಹಾಕುವುದೇ ಈ ಚುನಾವಣೆಗಳು?

ಐದು ವಿಧಾನಸಭಾ ಚುನಾವಣೆಗಳ ಮಹತ್ವ ಹಾಗೂ ಸವಾಲುಗಳು

KaratA copyಆಯಾ ರಾಜ್ಯದ ರಾಜಕೀಯ ಹಿನ್ನೆಲೆಯಲ್ಲಿ ಪ್ರತಿಯೊಂದು ರಾಜ್ಯಕ್ಕೆ ಚುನಾವಣೆಗಳು ಅದರದ್ದೇ ಆದ ಮಹತ್ವ ಹೊಂದಿದೆ. ಆದರೆ, ಒಟ್ಟಾರೆಯಾಗಿ ನೋಡಿದರೆ ಅದು ಒಂದು ವ್ಯಾಪಕ ರಾಷ್ಟ್ರೀಯ ಮಹತ್ವವನ್ನೂ ಪಡೆದಿದೆ. ಚುನಾವಣೆಯ ಫಲಿತಾಂಶವು ಇಡೀ ದೇಶದಲ್ಲಿ ಬಿಜೆಪಿಯ ಏಕಾಧಿಪತ್ಯ ಸ್ಥಾಪಿಸುವ ಪ್ರಸ್ತುತ ಪ್ರಯತ್ನಕ್ಕೆ ಇಂಬು ನೀಡಲಿದೆಯೇ ಅಥವಾ ಸರ್ವಾಧಿಕಾರಶಾಹಿ ಧಾವಂತಕ್ಕೆ ವಿರೋಧವನ್ನು ಅದು ಬಲಪಡಿಸಲಿದೆಯೇ ಎನ್ನುವ ಪ್ರಶ್ನೆ ಎಲ್ಲರ ಮುಂದಿದೆ.

ಪ್ರಕಾಶ್ ಕಾರಟ್

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆಗಳ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್ 27 ರಿಂದ ಏಪ್ರಿಲ್ 29ರ ವರೆಗೆ ಮತದಾನ ನಡೆಯಲಿದೆ.

ಆಯಾ ರಾಜ್ಯದ ರಾಜಕೀಯ ಹಿನ್ನೆಲೆಯಲ್ಲಿ ಪ್ರತಿಯೊಂದು ರಾಜ್ಯಕ್ಕೆ ಈ ಚುನಾವಣೆಗಳು ಅದರದ್ದೇ ಆದ ಮಹತ್ವ ಹೊಂದಿದೆ. ಆದರೆ, ಒಟ್ಟಾರೆಯಾಗಿ ನೋಡಿದರೆ ಅದು ಒಂದು ವ್ಯಾಪಕ ರಾಷ್ಟ್ರೀಯ ಮಹತ್ವವನ್ನೂ ಪಡೆದಿದೆ. ಈ ಚುನಾವಣೆಯ ಫಲಿತಾಂಶವು ಇಡೀ ದೇಶದಲ್ಲಿ ಒಂದೇ ಪಕ್ಷದ ಏಕಾಧಿಪತ್ಯ ಸ್ಥಾಪಿಸುವ ಬಿಜೆಪಿಯ ಪ್ರಸ್ತುತ ಪ್ರಯತ್ನಕ್ಕೆ ಇಂಬು ನೀಡಲಿದೆಯೇ ಅಥವಾ ಈ ಸರ್ವಾಧಿಕಾರಶಾಹೀ ಧಾವಂತಕ್ಕೆ ವಿರೋಧವನ್ನು ಅದು ಬಲಪಡಿಸಲಿದೆಯೇ ಎನ್ನುವ ಪ್ರಶ್ನೆ ಎಲ್ಲರ ಮುಂದಿದೆ.

ಈ ಐದು ರಾಜ್ಯಗಳ ಪೈಕಿ ಅಸ್ಸಾಮ್‌ನಲ್ಲಿ ಮಾತ್ರ ಬಿಜೆಪಿ ಆಡಳಿತವಿದೆ. ಬಿಜೆಪಿ ಮೈತ್ರಿಕೂಟ 2016ರಲ್ಲಿ ಅದೇ ಮೊದಲ ಬಾರಿಗೆ ಈ ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಗೆಲುವು ದಾಖಲಿಸಿತ್ತು. ಈ ಗೆಲುವು, ಈಶಾನ್ಯ ಭಾರತದಲ್ಲಿ ಬಿಜೆಪಿಯ ಮುನ್ನಡೆಗೆ ನೆರವಾಯಿತು. ಏನಾದರೂ ಮಾಡಿ-ಹೇಗಾದರೂ ಮಾಡಿ ಅನ್ನುವಂತೆ ವಾಮಮಾರ್ಗದಿಂದ ತ್ರಿಪುರಾ, ಮಣಿಪುರ ಮತ್ತು ಅರುಣಾಚಲ ಪ್ರದೇಶದಲ್ಲಿ ಅದು ಅಧಿಕಾರ ಹಿಡಿಯಿತು.

ಅಸ್ಸಾಮ್‌ನಲ್ಲಿ ತನ್ನ ಕೋಮುವಾದಿ ಕಾರ್ಯಸೂಚಿಯನ್ನು ಮುಂದಕ್ಕೊಯ್ಯಲು ಬಿಜೆಪಿಯು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಇವುಗಳನ್ನು ದಾಳಗಳಾಗಿ ಬಳಸಲು ಮುಂದಾಗಿದೆ. ಚುನಾವಣೆಗೆ ಮುಂಚೆಯೂ ಕೋಮುವಾದಿ ಧ್ರುವೀಕರಣಕ್ಕಾಗಿ ಬಿಜೆಪಿ ನಾಯಕತ್ವ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಅಸ್ಸಾಮ್ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವುದು ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್, ಎಐಯುಡಿಎಫ್, ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್), ಆಂಚಲಿಕ್ ಗಣ ಮೋರ್ಚಾ ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್- ಹೀಗೆ ಏಳು ಪಕ್ಷಗಳನ್ನು ಒಳಗೊಂಡ ಸಂಯೋಜನೆಯೊಂದು ರೂಪುಗೊಂಡಿದೆ. ಬಿಜೆಪಿ ಕೂಟದ ವಿರುದ್ಧ ಪರಿಣಾಮಕಾರಿಯಾದ ಹೋರಾಟ ನಡೆಸಲು ಈ ಪ್ರತಿಪಕ್ಷಗಳ ಸಂಯೋಜನೆಗೆ ಸಾಧ್ಯವಾಗಬೇಕು.

bengalತಮಿಳುನಾಡಿನಲ್ಲಿ 2016ರಲ್ಲಿ  ಜಯಲಲಿತಾ ನೇತೃತ್ವದಲ್ಲಿ ಎಐಎಡಿಎಂಕೆ ಮೈತ್ರಿಕೂಟ ಬಹುಮತ ಸಾಧಿಸಿ ಇನ್ನೊಂದು ಅವಧಿಗೆ ಸರ್ಕಾರ ರಚಿಸಲು ಶಕ್ತವಾಗಿತ್ತು. ಬಿಜೆಪಿ ಆ ಮೈತ್ರಿಕೂಟದ ಭಾಗವಾಗಿರಲಿಲ್ಲ. ಆದರೆ ಜಯಲಲಿತಾರ ನಿಧನಾನಂತರ ಎಐಎಡಿಎಂಕೆ ನಾಯಕತ್ವದಲ್ಲಿ ಒಡಕುಂಟಾಯಿತು. ಅದು ರಾಜ್ಯದಲ್ಲಿ ಮಧ್ಯಪ್ರವೇಶಿಸಲು ಬಿಜೆಪಿ ಕೇಂದ್ರ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿತು. ಅಗಿನಿಂದಲೂ ಎಐಎಡಿಎಂಕೆ ಪಕ್ಷ ಬಿಜೆಪಿಯ ಮಿತ್ರನಾಗಿ ಮುಂದುವರಿದಿದೆ.

2019ರ ಲೋಕಸಭೆ ಚುನಾವಣೆಗಳಲ್ಲಿ ಎಐಎಡಿಎಂಕೆ-ಬಿಜೆಪಿ ಕೂಟ ಧೂಳೀಪಟವಾಯಿತು. ಎಡಪಕ್ಷಗಳೂ ಇದ್ದ ಡಿಎಂಕೆ ನೇತೃತ್ವದ ಕೂಟ ಭರ್ಜರಿ ಜಯಭೇರಿ ಬಾರಿಸಿತು. 39 ಲೋಕಸಭಾ ಸ್ಥಾನಗಳ ಪೈಕಿ 38ರಲ್ಲಿ ಈ ಕೂಟ ಗೆಲುವು ದಾಖಲಿಸಿತು. ಇದೀಗ ಬಿಜೆಪಿ ತಮಿಳುನಾಡಿನಲ್ಲಿ ತನ್ನ ಪ್ರಭಾವ ಸ್ಥಾಪಿಸಿ ಬಲವರ್ಧಿಸಿಕೊಳ್ಳಲು ಎಐಎಡಿಎಂಕೆಯನ್ನು ಬದಲಾಳು ಆಗಿ ಬಳಸಿಕೊಳ್ಳುತ್ತಿದೆ. ಆದ್ದರಿಂದ ಪ್ರಸಕ್ತ ಚುನಾವಣೆ ಎಂದಿನಂತೆ ಎರಡು ದ್ರಾವಿಡ ಪಕ್ಷಗಳು ಹಾಗೂ ಅವುಗಳ ಮಿತ್ರ ಪಕ್ಷಗಳ ನಡುವಿನ ಮಾಮೂಲಿ ಹೋರಾಟವಲ್ಲ. ಎಐಎಡಿಎಂಕೆ ವಿರುದ್ಧದ ಹೋರಾಟ ಬಿಜೆಪಿಯನ್ನು ಹಾಗೂ ಅದರ ಮುನ್ನಡೆಯನ್ನು ತಡೆಯಲು ಮಾಡುವ ಸಂಘರ್ಷವೂ ಆಗುತ್ತದೆ.

ಸಿಪಿಐ(ಎಂ), ಸಿಪಿಐ, ವಿಸಿಕೆ ಮತ್ತು ಎಂಡಿಎಂಕೆ ಈ ನಾಲ್ಕು ಪಕ್ಷಗಳು ಜನ ಕಲ್ಯಾಣ ರಂಗವಾಗಿ ಪ್ರತ್ಯೇಕವಾಗಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ 2016ರಲ್ಲಿ ಡಿಎಂಕೆ ಕೂಟ ಗೆಲುವು ಸಾಧಿಸದಿರಲು ಕಾರಣವಾಗಿತ್ತು. ಈ ನಾಲ್ಕು ಪಕ್ಷಗಳಿಗೆ ನ್ಯಾಯಸಮ್ಮತವಾಗಿ ಸ್ಥಾನಗಳನ್ನು ಹಂಚುವ ಮೂಲಕ ಡಿಎಂಕೆಯು ಮೈತ್ರಿಕೂಟವನ್ನು ಬಲಪಡಿಸಬೇಕು.

ಪುದುಚೇರಿಯಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ತೀರಾ ಹೇಯ ಮಾರ್ಗ ಬಳಸಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿದೆ. ಮೊದಲು ಉಪ-ರಾಜ್ಯಪಾಲರ ಮೂಲಕ ಸರ್ಕಾರ ಸುಸೂತ್ರವಾಗಿ ನಡೆಯಲು ಬಿಟ್ಟಿರಲಿಲ್ಲ; ನಂತರ ಪಕ್ಷಾಂತರಕ್ಕೆ ಕುಮ್ಮಕ್ಕು ನೀಡಲಾಯಿತು. ಕಾಂಗ್ರೆಸ್ ಪಕ್ಷ ಮೊದಲೇ  ಗುಂಪುಗಾರಿಕೆ ಮತ್ತು ಎನ್‌ಆರ್ ಕಾಂಗ್ರೆಸ್ ರಚನೆಯಿಂದಾಗಿ ದುರ್ಬಲಗೊಂಡಿತ್ತು. ಅಲ್ಲೀಗ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಎನ್‌ಆರ್ ಕಾಂಗ್ರೆಸ್-ಎಐಎಡಿಎಂಕೆ-ಬಿಜೆಪಿ ಕೂಟ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕಾರಕ್ಕೆ ಬರಲು ಹಣ ಬಲವನ್ನು ಯಥೇಚ್ಛವಾಗಿ ಬಳಸುವುದು ನಿಶ್ಚಿತವಾಗಿದೆ. ಬಿಜೆಪಿಯ ಆಟವನ್ನು ವಿಫಲಗೊಳಿಸಲು ಕಾಂಗ್ರೆಸ್-ಡಿಎಂಕೆ- ಎಡಪಕ್ಷಗಳ ಕೂಟ ಎಷ್ಟು ಪರಿಣಾಮಕಾರಿಯಾಗಿ ಸವಾಲೊಡ್ಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಎಡಪಕ್ಷಗಳ ಮುಂದೆ ಅತ್ಯಂತ ದೊಡ್ಡ ಸವಾಲಿದೆ.

ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ತೀರಾ ಸಂಕೀರ್ಣವಾಗಿದೆ. ಈ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಗಂಭೀರ ಪ್ರಯತ್ನ ಮಾಡುತ್ತಿದೆ. ತನ್ನೆಲ್ಲ ಕಾರ್ಯಕರ್ತರನ್ನು ಹಾಗೂ  ಸಂಪನ್ಮೂಲವನ್ನು ಆರ್‌ಎಸ್‌ಎಸ್ ಬೆಂಬಲದೊಂದಿಗೆ ಅದು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ.

2019ರ ಲೋಕಸಭೆ ಚುನಾವಣೆಗಳಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಧ್ರುವೀಕರಣವಾಗಿತ್ತು. 42ರಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಗೆದ್ದಿತ್ತು. ಶೇಕಡ 40.6 ಮತಗಳನ್ನು ಗಳಿಸಿತ್ತು. ಈ ಎರಡರ ನಡುವೆ ಎಡರಂಗ ಅಪ್ಪಚ್ಚಿಯಾಗಿ ಕೇವಲ ಶೇಕಡ 7.4 ಮತ ಗಳಿಸಲು ಶಕ್ತವಾಗಿತ್ತು.

ಕಳೆದು ಹೋದ ನೆಲೆಯನ್ನು ಮರಳಿ ಗಳಿಸಲು ಸಿಪಿಐ(ಎಂ) ಮತ್ತು ಎಡರಂಗ ಸತತ ಪ್ರಯತ್ನ ನಡೆಸುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಎಡಪಕ್ಷಗಳು ಮತ್ತು ಸಾಮೂಹಿಕ ಸಂಘಟನೆಗಳು ನಡೆಸಿದ ಹೋರಾಟ ಮತ್ತು ಚಳವಳಿಗಳು ಅವುಗಳಿಗೆ ಜನಸಮೂಹದ ಬೆಂಬಲ ಗಳಿಸಿಕೊಡುವಲ್ಲಿ ಯಶಸ್ವಿಯಾಗಿವೆ. ಬಿಜೆಪಿ ಮತ್ತು ಟಿಎಂಸಿಯನ್ನು ಸೋಲಿಸಲು ಹಾಗೂ ಎಡ, ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಪರ್ಯಾಯ ಸೃಷ್ಟಿಸಲು ಸಿಪಿಐ(ಎಂ) ಕರೆ ನೀಡಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆಯ ಅಪಾಯ ವಾಸ್ತವವಾಗಿದೆ. ಇದರಿಂದಾಗಿ ಸಿಪಿಐ(ಎಂ) ಮತ್ತು ಎಡರಂಗವು ಟಿಎಂಸಿಯೊಂದಿಗೆ ಸಹಕರಿಸಬೇಕೆಂದು ಕೆಲವು ಉದಾರವಾದಿ ಹಾಗೂ ಎಡ ವಲಯಗಳು ಸಲಹೆ ಮಾಡುವಂತಾಗಿದೆ. ಆದರೆ ಹೀಗೆ ಮಾಡುವುದು ಎಡರಂಗಕ್ಕೆ ಆತ್ಮಹತ್ಯಾಕಾರಿಯಾಗಲಿದೆ ಹಾಗೂ ವಾಸ್ತವವಾಗಿ ಬಿಜೆಪಿಯ ಗೆಲುವಿಗೆ ಅನುಕೂಲವಾಗಲಿದೆ. ಟಿಎಂಸಿ  ಹಾಗೂ ಅದರ ದಬ್ಬಾಳಿಕೆಯ ಆಡಳಿತದ ವಿರುದ್ಧ ವ್ಯಾಪಕ ಅತೃಪ್ತಿ ಮಡುಗಟ್ಟಿದೆ. ಎಡಪಕ್ಷಗಳು ಮಮತಾ ಬ್ಯಾನರ್ಜಿ ಬಗ್ಗೆ ಸೌಮ್ಯ ಧೋರಣೆ ತಳೆದರೆ ಎಲ್ಲ ಟಿಎಂಸಿ-ವಿರೋಧಿ ಮತದಾರರು ಬಿಜೆಪಿ ತೆಕ್ಕೆಗೆ ಬೀಳುವುದು ಖಚಿತ. ಎಡರಂಗ, ಕಾಂಗ್ರೆಸ್ ಮತ್ತು ಇತರ ಬಿಜೆಪಿಯೇತರ, ಟಿಎಂಸಿಯೇತರ ಶಕ್ತಿಗಳ ಒಂದು ಪರ್ಯಾಯ ಕೂಟವು ಈ ಜನರನ್ನು ತನ್ನೆಡೆಗೆ ಸೆಳೆದು ಬಿಜೆಪಿ ಹೆಚ್ಚುವರಿ ಮತ ಪಡೆಯುವುದನ್ನು ತಡೆಯಲು ಸಾಧ್ಯ ಎನ್ನುವುದು ವಾಸ್ತವವಾಗಿದೆ.

ಕೇರಳದಲ್ಲಿ ಸ್ಪರ್ಧೆಯಿರುವುದು ಎಲ್‌ಡಿಎಫ್ (ಎಡ ಪ್ರಜಾಸತ್ತಾತ್ಮಕ ರಂಗ) ಮತ್ತು ಯುಡಿಎಫ್ ನಡುವೆ. ಈ ಚುನಾವಣೆಗಳಲ್ಲಿ ಮುಖ್ಯ ಸ್ಪರ್ಧಿ ಆಗಲಾರೆ ಎನ್ನುವುದು ಬಿಜೆಪಿಗೆ ಚೆನ್ನಾಗಿ ಅರಿವಿರುವುದರಿಂದ ಮೂರನೇ ಶಕ್ತಿಯಾಗಲು ಅದು ಹೊರಟಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರ ಅಭಿವೃದ್ಧಿ ಕಾರ್ಯ ಮತ್ತು ಸಮಾಜ ಕಲ್ಯಾಣ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಅದಕ್ಕೆ ಅಪಾರ ಜನಮನ್ನಣೆ ಸಿಕ್ಕಿದ್ದು ಕಾಂಗ್ರೆಸ್ ಮತ್ತು ಯುಡಿಎಫ್ ಹತಾಶಗೊಂಡಿವೆ. ಕಾಂಗ್ರೆಸ್ ಪಕ್ಷ ಕಳೆದ ವರ್ಷವಿಡೀ ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿದು ಎಲ್‌ಡಿಎಫ್ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡುವಲ್ಲಿ ಕಾಲ ಕಳೆದಿತ್ತು. ಚಿನ್ನ ಕಳ್ಳಸಾಗಣೆ ಮತ್ತು ಅಸ್ತಿತ್ವದಲ್ಲೇ ಇಲ್ಲದ ಇತರ ಭ್ರಷ್ಟಾಚಾರ ಹಗರಣಗಳ ಆರೋಪ ಮಾಡಿತ್ತು. ಕಾಂಗ್ರೆಸ್ ಮತ್ತು ಬಿಜೆಪಿಗಳು ಸಾಥ್ ನೀಡಿ ಮಾಡಿದ ‘ಹೋರಾಟಗಳಿಗೆ’ಮುಖ್ಯ ವಾಹಿನಿಯ ಮಾಧ್ಯಮಗಳು ನೆರವು ನೀಡಿದ್ದವು. ಆದರೆ 2020ರ ನವೆಂಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಲ್‌ಡಿಎಫ್‌ಗೆ ಅಭೂತಪೂರ್ವ ಗೆಲುವು ತಂದುಕೊಡುವ ಮೂಲಕ ರಾಜ್ಯದ ಜನರು  ಈ ಎಲ್ಲ ಅಪಪ್ರಚಾರಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

ಎಲ್‌ಡಿಎಫ್, ಇನ್ನೆರಡು ಪಕ್ಷಗಳು, ಕೇರಳ ಕಾಂಗ್ರೆಸ್(ಎಂ) ಮತ್ತು ಎಲ್‌ಜೆಡಿ ಸೇರ್ಪಡೆಯಿಂದ ವಿಸ್ತಾರಗೊಂಡಿರುವ ಹೊಸ ಹುರುಪಿನೊಂದಿಗೆ ಹೊಸ ವಿಶ್ವಾಸದಿಂದ  ಚುನಾವಣೆ ಕಣಕ್ಕೆ ಇಳಿದಿದೆ.

ಸಿಪಿಐ(ಎಂ) ಮತ್ತು ಎಲ್‌ಡಿಎಫ್, ಬಿಜೆಪಿ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧದ ಗಟ್ಟಿ ದನಿ ಎಂಬುದನ್ನು ಕೇರಳದ ಪ್ರಜಾಸತ್ತಾತ್ಮಕ, ಜಾತ್ಯತೀತ ಮನೋಭಾವದ ಜನರು ತಮ್ಮ ಅನುಭವದಿಂದ ತಿಳಿದು ಕೊಂಡಿದ್ದಾರೆ. ಪ್ರತಿ ಐದು ವರ್ಷಕ್ಕೊಮ್ಮೆ ಎಲ್‌ಡಿಎಫ್ ಮತ್ತು ಯುಡಿಎಫ್‌ಗಳನ್ನು ಪರ್ಯಾಯವಾಗಿ ಆಯ್ಕೆ ಮಾಡುವ ಕೇರಳದ ದಾಖಲೆಯನ್ನು ಮುರಿದು ಎಲ್‌ಡಿಎಫ್ ಮರಳಿ ಅಧಿಕಾರಕ್ಕೆ ಬರುವ ಅವಕಾಶ ಉಜ್ವಲವಾಗಿದೆ. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ತಮ್ಮ ಸಾಮಾನ್ಯ ವೈರಿಯ ವಿರುದ್ಧ ಒಂದಾಗಲು ಹೇಸದ ಪಕ್ಷಗಳಾಗಿರುವುದರಿಂದ ಆತ್ಮತೃಪ್ತಿಯಿಂದ ಸುಮ್ಮನಿರುವುದು ತರವಲ್ಲ.

ಅನು: ವಿಶ್ವ

Leave a Reply

Your email address will not be published. Required fields are marked *