ಮಹಾಮಾರಿಯನ್ನು ಎದುರಿಸಲು ಜನಗಳು ಸಪ್ತಸೂತ್ರಗಳನ್ನು ಅನುಸರಿಸಬೇಕು

ಸರಕಾರ ಅನುಸರಿಸುವ ಸೂತ್ರಗಳೇನು ಎಂದು ಪ್ರಧಾನಿಗಳು ಹೇಳಲೇ ಇಲ್ಲ -ಸೀತಾರಾಂ ಯೆಚುರಿ

SY-APR 14 20ಪ್ರಧಾನ ಮಂತ್ರಿಗಳು ಮಾರ್ಚ್ ೨೪ರಂದು ಕೊವಿಡ್-೧೯ ಮಹಾಮಾರಿಯ ವಿರುದ್ಧ ಘೋಷಿಸಿದ್ದ ಮೂರು ವಾರಗಳ ದಿಗ್ಬಂಧನದ ಕೊನೆಯ ದಿನ ಅವರಿಂದ ಮತ್ತೊಂದು ಪ್ರಸಾರ ಭಾಷಣದಲ್ಲಿ ಜನಗಳು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಲಾಕ್ ಡೌನನ್ನು ವಿಸ್ತರಿಸಲಾಗುವುದು ಎಂಬ ಪ್ರಕಟಣೆ ನಿರೀಕ್ಷಿತವೇ ಆಗಿತ್ತು. ಆದರೂ ಜತೆಗೆ ಈ ಮೂರು ವಾರಗಳಲ್ಲಿ ಎದ್ದು ಬಂದ ಸಮಸ್ಯೆಗಳಿಗೆ ನಿರ್ದಿಷ್ಟ ಪರಿಹಾರ ಕ್ರಮಗಳನ್ನೂ ಅವರು ನಿರೀಕ್ಷಿಸಿದ್ದರು.

ಪ್ರಧಾನಿಗಳು ಮೇ ೩ ರವರೆಗೆ ಲಾಕ್ ಡೌನನ್ನು ವಿಸ್ತರಿಸುವ ಪ್ರಕಟಣೆ ಮಾಡಿದರು. ಆದರೆ ದುರದೃಷ್ಟವಶಾತ್, ಈ ಮೂರು ವಾರಗಳಲ್ಲಿ ಮಹಾಮಾರಿಯನ್ನು ಎದುರಿಸುವಲ್ಲಿ, ಮತ್ತು ಲಾಕ್ ಡೌನ್‌ನಿಂದಾಗಿ ಜನಗಳ ಜೀವ, ಜೀವನೋಪಾಯಗಳಿಗೆ ಸಂಬಂಧಪಟ್ಟಂತೆ ಉಂಟಾದ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಎನೂ ಹೇಳಲೇ ಇಲ್ಲ, ಕೊವಿಡೊ-೧೯ ಮಹಾಮಾರಿಯಿಂದ  ಇದುವರೆಗೆ ಅಧಿಕೃತವಾಗಿ ೩೩೯ ಸಾವುಗಳು ಸಂಭವಿಸಿವೆ. ಜತೆಗೇ ಈ ಲಾಕ್ ಡೌನಿನ ಪರಿಣಾಮವಾಗಿ ಇನ್ನೂ ೨೦೦ ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

ಜನಗಳು ಏಳು ಸೂತ್ರಗಳನ್ನು ಅನುಸರಿಸಬೇಕು ಎಂದು ಪ್ರಧಾನ ಮಂತ್ರಿಗಳು ಹೇಳಿದರು, ಆದರೆ ಈ ಸಮರವನ್ನು ಗೆಲ್ಲಲು ಸರಕಾರ ಯಾವ ಸೂತ್ರಗಳನ್ನು ಅನುಸರಿಸುತ್ತದೆ ಎಂದು ಮಾತ್ರ ಹೇಳಲಿಲ್ಲ ಎಂದು ಈ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಟಿಪ್ಪಣಿ ಮಾಡಿದರು.

ಎಪ್ರಿಲ್ ೧೫ರಂದು ನೀಡುವುದಾಗಿ ಹೇಳಿದ ಮಾರ್ಗನಿರ್ದೇಶನಗಳಲ್ಲಾದರೂ ಇವು ಇರಬಹುದು ಎಂದು ನಿರೀಕ್ಷಿಸಬೇಕಾಗಿದೆ ಎಂದು ಅವರು ಹೇಳಿದರು.

ಇದನ್ನು ಕುರಿತಂತೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಮುಂದಿನ ಹೇಳಿಕೆಯನ್ನು ನೀಡಿದೆ.

ವಿಸ್ತರಿತ ಲಾಕ್ ಡೌನ್: ಬಡವರು ಮತ್ತು ಅಂಚಿಗೆ ತಳ್ಳಲ್ಪಟವರ ಸಂಕಟ ಮುಂದುವರೆಯುತ್ತದೆ:

ಮೂರು ವಾರಗಳ ಲಾಕ್ ಡೌನನ್ನು ಅನುಸರಿಸಿದ ಜನಗಳು ಈ ದಿಗ್ಬಂಧನದ  ಕೊನೆಯಲ್ಲಿ ಸರಕಾರದಿಂದ ಈ ಮೂರು ವಾರಗಳಲ್ಲಿ ಎದ್ದು ಬಂದ ಸಮಸ್ಯೆಗಳನ್ನು ಪರಿಹರಿಸಲು ಮೂರ್ತ ಕ್ರಮಗಳನ್ನು ನಿರೀಕ್ಷಿಸುತ್ತಿದ್ದರು ಮತ್ತು ದೊಡ್ಡ ಸಂಖ್ಯೆಯಲ್ಲಿರುವ ನಮ್ಮ ಬಡಜನಗಳಿಗೆ, ಅಂಚಿಗೆ ತಳ್ಳಲ್ಪಟ್ಟವರಿಗೆ, ವಲಸೆ ಕಾರ್ಮಿಕರಿಗೆ ಬಹು ಅಗತ್ಯವಾಗಿರುವ ಪರಿಹಾರಗಳನ್ನು ನಿರೀಕ್ಷಿಸುತ್ತಿದ್ದರು.

ಪ್ರಧಾನ ಮಂತ್ರಿಗಳು ತಮ್ಮ ಪ್ರಸಾರ ಭಾಷಣದಲ್ಲಿ ದೇಶಾದ್ಯಂತ ಲಾಕ್ ಡೌನನ್ನು ಮೇ ೩ರ ವರೆಗೂ ವಿಸ್ತರಿಸಲಾಗುವುದು ಎಂದು ಪ್ರಕಟಿಸುತ್ತ ಈ ವಿಸ್ತರಿಸಿದ ಲಾಕ್ ಡೌನ್ ಅವಧಿಯಲ್ಲಿ ಜನಗಳು ಅನುಸರಿಸಬೇಕಾದ ಏಳು ಕೆಲಸಗಳನ್ನು ಪಟ್ಟಿ ಮಾಡಿದ್ದಾರೆ. ಆದರೆ ಸರಕಾರ ನಿರ್ದಿಷ್ಟವಾಗಿ ಏನು ಮಾಡುತ್ತದೆ ಎಂದೇನೂ ಹೇಳ ಹೋಗಿಲ್ಲ.

ನಮ್ಮ ಜನಗಳ ಒಂದು ಗಮನಾರ್ಹ ವಿಭಾಗದಲ್ಲಿ ಹಸಿವಿನ ಸಮಸ್ಯೆ ವ್ಯಾಪಕಗೊಳ್ಳುತ್ತಿದೆ, ಸಾಕಷ್ಟು ಆಸರೆ ಇಲ್ಲವಾಗಿದೆ ಎಂಬುದು ಕಳೆದ ಮೂರು ವಾರಗಳ ಅನುಭವ. ಸರಕಾರ ತಕ್ಷಣವೇ ಆದಾಯ ತೆರಿಗೆ ತೆರದ ಎಲ್ಲ ಕುಟುಂಬಗಳಿಗೆ ೭೫೦೦ ರೂ. ನಗದು ವರ್ಗಾವಣೆ ಮತ್ತು ಅಗತ್ಯವಿರುವ ಎಲ್ಲ ಜನಗಳಿಗೆ ಸಾರ್ವತ್ರಿಕವಾಗಿ ಆಹಾರಧಾನ್ಯಗಳನ್ನು ಉಚಿತವಾಗಿ ಹಂಚುವುದು ಅತ್ಯಗತ್ಯವಾಗಿದೆ. ಹಸಿವಿನಿಂದ ಸಾವುಗಳು ಸಂಭವಿಸದಂತೆ ಕೇಂದ್ರ ಸರಕಾರ ಖಾತ್ರಿ ಪಡಿಸಬೇಕಾಗಿದೆ.

ಇದುವರೆಗೆ ಪ್ರಕಟಿಸಿರುವ ೧.೭ಲಕ್ಷ ಕೋಟಿ ರೂ,ಗಳ ಹಣಕಾಸು ಕ್ರಮಗಳು ಅತ್ಯಲ್ಪ. ಅದರ ಮೊತ್ತ ನಮ್ಮ ದೇಶದ ಜಿಡಿಪಿಯ ೧ಶೇ.ದಷ್ಟೂ ಆಗುವುದಿಲ್ಲ. ಜಗತ್ತಿನಲ್ಲಿ ಹಲವು ದೇಶಗಳು ಈ ಮಹಾಮಾರಿಯ ದುಷ್ಪರಿಣಾಮಗಳನ್ನು ಎದುರಿಸಲು ಇನ್ನೂ ಬಹಳ ಹೆಚ್ಚಿನ ಮೊತ್ತದ ಹಣಕಾಸು ಕ್ರಮಗಳನ್ನು ಪ್ರಕಟಿಸಿವೆ. ಭಾರತ ಇದನ್ನು ಜಿಡಿಪಿಯ ೫ಶೇ.ದ ಮಟ್ಟಿಗಾದರೂ ಏರಿಸಬೆಕು. ಹಣಕಾಸು ಮಂತ್ರಿಗಳು ವಿವಿಧ ವಿಭಾಗಗಳಿಗೆಂದು ಪ್ರಕಟಿಸಿರುವ ನಗದು ವರ್ಗಾವಣೆ ಕೂಡ ಇನ್ನೂ ಅವರ ಕೈಸೇರಿಲ್ಲ.

ರಾಜ್ಯಗಳು ಈ ಕೊವಿಡ್ ಮಹಾಮಾರಿಯ ವಿರುದ್ಧ ಸಮರದಲ್ಲಿ ಮುಂಚೂಣಿಯಲ್ಲಿವೆ. ಅವುಗಳಿಗೆ ಹಣಕಾಸಿನ ನೆರವು ಬೇಕಾಗಿದೆ. ಪರಿಹಾರ ಕೇಂದ್ರಗಳಲ್ಲಿ ಸರಿಯಾದ ಸೌಕರ್ಯಗಳನ್ನು ಒದಗಿಸಲು ಮತ್ತು ಅಲ್ಲಿ ಇರುವ ಕೋಟ್ಯಂತರ ಜನಗಳಿಗೆ ಆಹಾರ ಒದಗಿಸಲು ಕೇಂದ್ರೀಯ ನಿಧಿಗಳನ್ನು ಉದಾರವಾಗಿ ರಾಜ್ಯಗಳ ನಡುವೆ ಹಂಚಬೇಕಾಗಿದೆ. ರಾಜ್ಯಗಳು ಸಾಲ ಎತ್ತಲು ಇರುವ ಮಿತಿಯನ್ನು ಏರಿಸಬೇಕಾಗಿದೆ.

ಯಾವ ಕಾರ್ಮಿಕರನ್ನೂ ಕೆಲಸದಿಂದ ತೆಗೆಯಬಾರದು ಎಂದು ಪ್ರಧಾನ ಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆ. ಆದರೆ ಕೇವಲ ಮನವಿಗಳಷ್ಟೇ ಸಾಲದು. ಏಕೆಂದರೆ, ಈಗಾಗಲೇ ವ್ಯಾಪಕ ಪ್ರಮಾಣದಲ್ಲಿ ಉದ್ಯೋಗ ನಷ್ಟಗಳಾಗಿವೆ ಎಂಬ ವರದಿಗಳು ಬಂದಿವೆ. ಮೂರು ತಿಂಗಳ ವರೆಗೆ ಉದ್ಯೋಗನಷ್ಟವಾಗದಂತೆ ಮತ್ತು ಸಂಬಳ ಕಡಿತವಾಗದಂತೆ ಖಾತ್ರಿಪಡಿಸಲು ಸೂಕ್ತ ಹಣಕಾಸು ನೆರವನ್ನೂ ಒದಗಿಸಬೇಕಾಗುತ್ತದೆ.

ಇದು ಕಟಾವಿನ ಸಮಯ. ಸರಕಾರ ಘೋಷಿತ ಸಿ೨+೫೦ಶೇ. ಸೂತ್ರದಂತೆ ಬೆಂಬಲ ಬೆಲೆಯಲ್ಲಿ ಬೆಳೆಗಳ ಕಡ್ಡಾಯ ಖರೀದಿ ನಡೆಯುವಂತೆ ಖಾತ್ರಿ ಪಡಿಸಬೇಕಾಗಿದೆ. ಮನರೇಗದ ಅಡಿಯಲ್ಲಿ ಕೆಲಸವಿಲ್ಲ ಎಂಬ ವರದಿ ಕಳವಳಕಾರಿ. ಈ ಯೋಜನೆಯ ಅಡಿಯಲ್ಲಿ ದಾಖಲಾತಿ ಪಡೆದಿರುವ ಎಲ್ಲರಿಗೂ ಕೆಲಸವಿರಲಿ, ಇಲ್ಲದಿರಲಿ ಅವರ ಕೂಲಿಗಳನ್ನು ಪಾವತಿ ಮಾಡಬೇಕು.

ಈ ಹಿಂದಿನ ಲಾಕ್ ಡೌನ್ ಅವಧಿಯನ್ನು ವ್ಯಾಪಕವಾಗಿ ತಪಾಸಣೆ ನಡೆಸಿ ಈ ಮಹಾಮಾರಿ ಹರಡುತ್ತಿರುವ ಸಮೂಹಗಳನ್ನು ಗುರುತಿಸಿ, ಅವನ್ನು ಪ್ರತ್ಯೇಕಿಸಲು, ಆಮೂಲಕ ಹರಡಿಕೆಯನ್ನು ತಡೆಗಟ್ಟಲು ಬಳಸಬೇಕಾಗಿತ್ತು. ಆದರೆ ತಪಾಸಣೆ ಎಂಬುದು ಅತ್ಯಂತ ಕೆಳಮಟ್ಟದಲ್ಲೇ ಇದೆ, ಜಗತ್ತಿನಲ್ಲಿ ಅತ್ಯಂತ ಕಡಿಮೆ ಮಟ್ಟದ ತಪಾಸಣೆ ನಡೆದಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ.

ಡಾಕ್ಟರುಗಳು ಮತ್ತು ಆರೋಗ್ಯ ಕಾರ್ಯಕರ್ತರು ವೈಯಕ್ತಿಕ ಸುರಕ್ಷಾ ಪರಿಕರ(ಪಿಪಿಇ)ಗಳ ತೀವ್ರ ಅಭಾವದಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಮಹಾಮಾರಿಯ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂಬುದು ಗಂಭೀರ ಆತಂಕದ ಒಂದು ಸಂಗತಿ. ಈ ಮೂರು ವಾರಗಳಲ್ಲಿ ಇವುಗಳ ಪೂರೈಕೆಯನ್ನು ಗಮನಾರ್ಹವಾಗಿ ಹೆಚ್ಚಿಸಿಲ್ಲ. ತಪಾಸಣೆ ಮತ್ತು ಪಿಪಿಇಗಳ ಪೂರೈಕೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳ ಬೇಕಾಗಿದೆ.

ಪ್ರಧಾನ ಮಂತ್ರಿಗಳು ಸಾಮಾಜಿಕ ಮತ್ತು ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸಲು ಮಾಡುತ್ತಿರುವ ಪ್ರಯತ್ನಗಳನ್ನು ಖಂಡಿಸಿಲ್ಲ ಎಂಬುದು ಅತ್ಯಂತ ದುರದೃಷ್ಟಕರ. ಇಂತಹ ವಿಚ್ಛಿದ್ರಕಾರಿ ಪ್ರಯತ್ನಗಳು ನಡೆಯದಂತೆ ಸರಕಾರ ಖಾತ್ರಿಪಡಿಸಬೇಕಾಗಿದೆ. ನಮ್ಮ ಜನಗಳ ನಡುವೆ ಸಂಪೂರ್ಣ ಐಕ್ಯತೆಯೊಂದಿಗೆ ಮಾತ್ರವೇ ಕೊವಿಡ್-೧೯ರ ವಿರುದ್ಧದ ಈ ಸಮರವನ್ನು ನಾವು ಗೆಲ್ಲಲು ಸಾಧ್ಯ

ಎಪ್ರಿಲ್ ೨೦ರಂದು ಸರಕಾರ ಸನ್ನಿವೇಶವನ್ನು ಪರಾಮರ್ಶಿಸುತ್ತದೆ, ಆನಂತರ ಲಾಕ್ ಡೌನನ್ನು ಸಡಿಲಿಸುವ ಬಗ್ಗೆ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ. ವಲಸೆ ಕಾರ್ಮಿಕರನ್ನು ಮತ್ತೆ ಅವರ ಮನೆಗಳಿಗೆ ತಲುಪಿಸಲು ವ್ಯವಸ್ಥೆಗಳನ್ನು ಮಾಡಬೇಕಾಗಿದೆ.

ಈ ಎಲ್ಲ ಪ್ರಶ್ನೆಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಮತ್ತು ಅಗತ್ಯ ಮಾರ್ಗನಿರ್ದೇಶನಗಳನ್ನು ನೀಡಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಕೇಂದ್ರ ಸರಕಾರಕ್ಕೆ ಕರೆ ನೀಡುತ್ತದೆ.

Leave a Reply

Your email address will not be published. Required fields are marked *