ಜನದ್ರೋಹಿ ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರ ತೊಲಗಬೇಕು

ಕೇಂದ್ರದ ಮೋದಿ ಸರ್ಕಾರವಾಗಲೀ, ರಾಜ್ಯದ ಬೊಮ್ಮಾಯಿ ಸರ್ಕಾರವಾಗಲೀ, ಎರಡೂ ಬಿಜೆಪಿ ಸರ್ಕಾರಗಳು, ರೈತರು, ಕಾರ್ಮಿಕರು, ಇತರೆ ದುಡಿಯುವ ಜನವರ್ಗಗಳ ಹಿತಾಸಕ್ತಿಯನ್ನು ಕೈಬಿಟ್ಟಿವೆ. ಶ್ರೀಮಂತರಿಗೆ ಕಾರ್ಪೊರೇಟ್ ಕಂಪನಿಗಳಿಗೆ ಸರ್ಕಾರವನ್ನು ನಡೆಸುತ್ತಿವೆ. ಮತದ್ವೇಷ, ಕೋಮುಗಲಭೆಗಳು, ಹಿಂಸೆ, ದೌರ್ಜನ್ಯಗಳನ್ನು ಹೆಚ್ಚು ಮಾಡಿ ಜನರನ್ನು ವಿಭಜನೆ ಮಾಡುತ್ತಿವೆ. ಈ ನೀತಿಗಳನ್ನು ಸೋಲಿಸದಿದ್ದರೆ ಜನರ ಬದುಕಿಗೆ ರಕ್ಷಣೆಯಿಲ್ಲ. ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಸಮಿತಿಯು ರಾಜ್ಯದಾದ್ಯಂತದ ಪ್ರಚಾರಾಂದೋಲನಕ್ಕೆ ಕರೆ ನೀಡಿದೆ.

ಸಿಪಿಐ( ಎಂ)ನ  ರಾಜಕೀಯ ಆಂದೋಲನದ ಬಗ್ಗೆ ವಿವರಿಸಿದ್ದಾರೆ
ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೆ. ಪ್ರಕಾಶ್ ಅವರು…..

ಕುಸಿಯುತ್ತಿರುವ ಆರ್ಥಿಕತೆ

ರಾಜ್ಯವು ಅಭಿವೃದ್ಧಿಯ ಸುವರ್ಣಯುಗದಲ್ಲಿದೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ. ಇದರಿಂದಾಗಿ ಅಭಿವೃದ್ಧಿ ಎಂಬುದರ ಬಗ್ಗೆಯೇ ಅಸಹ್ಯ ಪಡುವಂತಾಗಿದೆ. ರಾಜ್ಯದ ಇತ್ತೀಚಿನ 2.66 ಲಕ್ಷ ಕೋಟಿ ರೂ. ಗಳ ಬಜೆಟ್‌ನಲ್ಲಿ 72 ಸಾವಿರ ಕೋಟಿ ರೂ. ಗಳ ಸಾಲವಿದೆ. ರಾಜ್ಯದ ಒಟ್ಟಾರೆ ಸಾಲ 2022-23 ರಲ್ಲಿ 5.18 ಲಕ್ಷ ಕೋಟಿ ರೂ. ಗಳು 2024-25 ರಲ್ಲಿ ರಾಜ್ಯದ ಸಾಲ 7.38 ಲಕ್ಷ ಕೋಟಿಗಳಾಗಲಿದೆ. ಈ ವರ್ಷ ಜಿಎಸ್‌ಟಿ ಪರಿಹಾರ ಕೊನೆಗೊಳ್ಳುವುದರಿಂದ ರಾಜ್ಯದ ಕಂದಾಯವು ಕುಸಿಯಲಿದೆ. ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ಸರ್ಕಾರದ ಬಳಿ ಖರ್ಚಿಗೆ ಕಾಸಿಲ್ಲ ಎಂಬ ಪರಿಸ್ಥಿತಿ ಬರಲಿದೆ. ಇದರ ಒಟ್ಟಾರೆ ಹೊರೆಯನ್ನು ಸಾಮಾನ್ಯ ಜನರ ಮೇಲೆ ಹೊರಿಸುವ ಅಪಾಯವನ್ನು ಬಸವರಾಜ ಬೊಮ್ಮಾಯಿ ಸರ್ಕಾರ ಉಂಟು ಮಾಡಿದೆ. ಆಡಳಿತ ಸಂಪೂರ್ಣ ಕುಸಿದಿರುವುದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಲಿದೆ. ಬಜೆಟ್ ಭರವಸೆಗಳನ್ನು ಈಡೇರಿಸಲು ಕಂದಾಯ ಸಂಗ್ರಹಕ್ಕೆ ಕೇಂದ್ರದ ಮಾದರಿಯಲ್ಲಿ ನಗದೀಕರಣ ಯೋಜನೆ ಜಾರಿ ಮಾಡುವ ಬಗ್ಗೆ ಹೇಳಲಾಗಿದೆ. ಬಿಟಿಪಿಎಸ್, ಆರ್‌ಟಿಪಿಎಸ್, ಸಾರಿಗೆ ನಿಗಮಗಳು ಮುಂತಾದ ರಾಜ್ಯದ ಸ್ವತ್ತುಗಳನ್ನು ಮಾರಲು ಯೋಜಿಸಲಾಗಿದೆ. ಹಣಕಾಸು ಕೊರತೆ ತುಂಬಲು ಕೇಂದ್ರ ಸರ್ಕಾರ ವಿಧಿಸಿರುವ ಸಾಲದ ಷರತ್ತುಗಳನ್ನು ಪೂರೈಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಇವೆಲ್ಲವುಗಳ ಪರಿಣಾಮವಾಗಿ ರಾಜ್ಯವು ಒಂದು ದೀರ್ಘಾವಧಿ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಲಿದೆ. ಸಾಮಾನ್ಯ ಜನ ಇದರಿಂದ ತೀರಾ ತೊಂದರೆಗೆ ಸಿಲುಕಬೇಕಾಗಿದೆ.

ಬೆಲೆ ಏರಿಕೆ

ಎಲ್ಲಾ ಅಗತ್ಯ ವಸ್ತುಗಳ ಬೆಲೆಯು ಆಕಾಶವನ್ನೇ ನೋಡುತ್ತಿವೆ. ತೈಲ ಮತ್ತು ಅನಿಲ ಬೆಲೆಗಳ ವಿಪರೀತ ಹೆಚ್ಚಳ ಜನರ ಬದುಕನ್ನು ಹೈರಾಣಾಗಿಸಿದೆ. ಒಂದು ಅಡಿಗೆ ಅನಿಲದ ಸಿಲಿಂಡರ್ ಬೆಲೆ 1,000 ರೂ ದಾಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ ಮೇಲೆ ಸರಾಸರಿ 20 ರಿಂದ 25 ರೂ ಹೆಚ್ಚಾಗಿದೆ. ಇದರಿಂದ ಸರಕು ಸಾಗಣೆ ವೆಚ್ಚ ಹೆಚ್ಚಾಗಿದೆ. ಪರಿಣಾಮವಾಗಿ ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿವೆ. ಸಾಮಾನ್ಯ ದ್ವಿಚಕ್ರ ವಾಹನ ಬಳಸುವವರು ಪೆಟ್ರೋಲ್‌ಗೆ ತಿಂಗಳಿಗೆ ಕನಿಷ್ಟ 1,000 ರೂ. ಹೆಚ್ಚು ಖರ್ಚು ಮಾಡಬೇಕಾಗಿದೆ. ಪೆಟ್ರೋಲಿಯಂ ವಸ್ತುಗಳ ಮೇಲಿನ ಸುಲಿಗೆಕೋರ ಅಬಕಾರಿ ಸುಂಕಗಳ ದರಗಳನ್ನು ಕಡಿತಗೊಳಿಸಬೇಕೆಂಬ ಕೂಗಿಗೆ ಸರ್ಕಾರ ಕಿವುಡಾಗಿದೆ. ಬದಲಿಗೆ ಅಬಕಾರಿ ಸುಂಕಗಳನ್ನು ಹೆಚ್ಚಿಸುತ್ತಲೇ ಇದೆ. ಹೀಗಾಗಿಯೇ ಡಬಲ್ ಇಂಜಿನ್ ಸರ್ಕಾರಗಳು ಜನರ ರಕ್ಷಣೆಯನ್ನು ಕೈಬಿಟ್ಟಿವೆ. ಕಾರ್ಪೊರೇಟ್ ಕಂಪನಿಗಳಿಗೆ ರಿಯಾಯಿತಿಗಳನ್ನು ಕೊಡುತ್ತಿವೆ.

Modi and basavaraj bommai

ಆಡಳಿತ ಕುಸಿತ

ಆಡಳಿತದಲ್ಲಿ ಪಾರದರ್ಶಕತೆ, ಅಭಿವೃದ್ಧಿ, ಚುರುಕುತನ, ಜನಪರ ಆದ್ಯತೆ ಎಲ್ಲವೂ ಬಿಜೆಪಿ ರಾಜ್ಯ ಸರ್ಕಾರದಲ್ಲಿ ಕಣ್ಮರೆಯಾಗಿವೆ. ಜನರ ಕೆಲಸಗಳಾಗಲೀ, ಅಭಿವೃದ್ಧಿ ಕೆಲಸಗಳಾಗಲೀ ನಿಂತು ಹೋಗಿದ್ದು ಆಡಳಿತ ಅಧಃಪತನವಾಗಿದೆ. ಮಂತ್ರಿಗಳು ಕಮಿಷನ್ ದಂಧೆ, ಭ್ರಷ್ಟಾಚಾರ, ಕೋಮುಪ್ರಚೋದಕ ಭಾಷಣಗಳು, ಮತೀಯ ದ್ವೇಷವನ್ನು ಹೆಚ್ಚಿಸುವ ಕೆಲಸಗಳಲ್ಲಿ ನಿರತರಾಗಿರುವುದರಿಂದ, ರಾಜ್ಯ ಸರ್ಕಾರದ 41 ಇಲಾಖೆಗಳಲ್ಲಿ 2,17,015 ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಜಿಲ್ಲಾ ಕೇಂದ್ರಗಳಲ್ಲೇ ಉಳಿದು ಬಾಕಿ ಕಡತಗಳ ವಿಲೇವಾರಿ ಮಾಡಲಾಗುವುದೆಂದು ಹೇಳಿ ತಿಂಗಳುಗಳೇ ಕಳೆದರೂ ಆರ್. ಅಶೋಕ್ ಅವರ ಇಲಾಖೆಯಲ್ಲೇ 11,221 ಕಡತಗಳು ಬಾಕಿಯಿವೆ. ಕಡತಗಳ ವಿಳಂಬ ಎಂಬುದು ಭ್ರಷ್ಟಾಚಾರದ ಇನ್ನೊಂದು ವಿಧಾನವಾಗಿದೆ. ಅಹಿತಕರ ಘಟನೆಗಳು, ಕೋಮುಗಲಭೆಗಳಿಗೆ ದಾರಿ ಮಾಡಿಕೊಡುವ ಕೃತ್ಯಗಳು, ಧಾರ್ಮಿಕ ದ್ವೇಷ, ಅಸಹಿಷ್ಣುತೆ, ಕೋಮುಪ್ರಚೋದಕ ಭಾಷಣಗಳು ಮತ್ತು ಹೇಳಿಕೆಗಳು ರಾಜ್ಯ ಸರ್ಕಾರದಲ್ಲಿ ಪ್ರಾಧಾನ್ಯತೆಯನ್ನು ಪಡೆದುಕೊಂಡಿರುವುದರಿಂದ ಸಾಂವಿಧಾನಿಕ ಆಡಳಿತ ಕುಸಿದು ಹೋಗಿದೆ.

k s eshwarappa

ಭ್ರಷ್ಟಾಚಾರ

ಪ್ರಧಾನಿ ಮೋದಿ ಹಿಂದಿನ ರಾಜ್ಯ ಸರ್ಕಾರವನ್ನು 10% ಸರ್ಕಾರ ಎಂದಿದ್ದರು. ಈಗ ಅವರದೇ ಬಿಜೆಪಿ ಸರ್ಕಾರ “40% ಕಮಿಷನ್ ಸರ್ಕಾರ” ಎಂದಾಗಿದೆ. ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್ ಇಂಡಿಯಾ ಸಮೀಕ್ಷೆ ಪ್ರಕಾರ ಭ್ರಷ್ಟಾಚಾರದಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಭೂಮಿ ನೋಂದಣಿ, ಭೂ ಸಮಸ್ಯೆಗಳು, ನಾಗರಿಕ ಪ್ರಶ್ನೆಗಳು, ಪೊಲೀಸ್ ಠಾಣೆಗಳು ಹೀಗೆ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಲಂಚವಿಲ್ಲದೆ ಕೆಲಸವೇ ಆಗುವುದಿಲ್ಲ ಎನ್ನುವ ಪರಿಸ್ಥಿತಿ ಬಂದಿದೆ. ಗುತ್ತಿಗೆದಾರ ಸಂತೋಷ್ ಸಾವಿಗೆ ಸಚಿವ ಈಶ್ವರಪ್ಪ 40% ಕಮಿಷನ್ ಕೇಳಿರುವುದು ಕಾರಣವಾಗಿದೆ. ಈಶ್ವರಪ್ಪನವರು ಆರೋಪಮುಕ್ತರಾಗಿ ಹೊರಬರುತ್ತಾರೆ ಎಂದು ಸ್ವತಃ ಮುಖ್ಯಮಂತ್ರಿ ಮತ್ತು ಗೃಹಮಂತ್ರಿ ಹೇಳಿರುವುದರಿಂದ ತನಿಖೆ ಹಳ್ಳ ಹಿಡಿಯುವ ಸೂಚನೆ ನೀಡಿದ್ದಾರೆ. ಇತ್ತೀಚೆಗೆ 545 ಪಿಎಸ್‌ಐ ಹುದ್ದೆಗಳ ಆಯ್ಕೆಯಲ್ಲಿ ಬೃಹತ್ ಹಗರಣ ನಡೆದಿದ್ದು ಬಿಜೆಪಿ ನಾಯಕಿ ಇದರ ಸೂತ್ರಧಾರಣಿ ಎಂದಾಗಿದೆ. ಈಕೆಯ ಕುಟುಂಬದೊಂದಿಗೆ ಗೃಹಸಚಿವರಿಗೆ ನಿಕಟ ಸಂಬಂಧವಿದೆ. ಇದರ ತನಿಖೆಯ ಫಲಿತಾಂಶ ಊಹಿಸಿಕೊಳ್ಳುವುದು ಕಷ್ಟವಿಲ್ಲ. ಗೋಶಾಲೆಯ ದನಗಳ ಮೇವು ಸರಬರಾಜಿನ ಬಿಲ್ ಪಾವತಿಗೆ 40% ಕಮಿಷನ್‌ಗೆ ಬೇಡಿಕೆಯಿಟ್ಟಿರುವ ಹಗರಣ ಬೆಳಕಿಗೆ ಬಂದಿದೆ. ಪರೀಕ್ಷೆ ನಿರ್ವಹಣೆ ತಂತ್ರಾಂಶ ವ್ಯವಸ್ಥೆ ಗುತ್ತಿಗೆ ನೀಡಲು ಶಿಕ್ಷಣ ಸಚಿವರ ಕಛೇರಿಯಲ್ಲಿ ಶೇ. 20 ಕಮಿಷನ್ ಹಗರಣ ಹೊರಬಂದಿದೆ.

ಭ್ರಷ್ಟಾಚಾರ, ಕಮಿಷನ್, ಲಂಚಕ್ಕೆ ಬೇಡಿಕೆ, ವರ್ಗಾವಣೆಗೆ ಬೇಡಿಕೆ, ಅಧಿಕಾರಿಗಳಿಂದ ಹಣ ವಸೂಲಿ ಮಾಡಿರುವ ಆರೋಪಗಳಿಗೆ ಒಳಗಾಗಿರುವ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ. ಗೃಹ ಮಂತ್ರಿ ಅರಗ ಜ್ಞಾನೇಂದ್ರ, ಕೃಷಿ ಸಚಿವ ಬಿ.ಸಿ. ಪಾಟೀಲ್, ಕಂದಾಯ ಸಚಿವ ಆರ್. ಅಶೋಕ್, ಅಬಕಾರಿ ಸಚಿವ ಗೋಪಾಲಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಪಶುಸಂಗೋಪನಾ ಸಚಿವ ಪ್ರಭು ಚೌಹಾನ್, ಶಿಕ್ಷಣ ಸಚಿವ ಅಶ್ವಥ್‌ನಾರಾಯಣ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಹೀಗೆ ಇನ್ನೂ ಹಲವು ಸಚಿವರ ಮೇಲೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ತನಿಖೆಗಳನ್ನು ಹಳ್ಳ ಹಿಡಿಸುವ ಧೋರಣೆಯನ್ನೇ ಬಸವರಾಜ ಬೊಮ್ಮಾಯಿ ಸರ್ಕಾರ ಅನುಸರಿಸುತ್ತಿದೆ.

ಕೃಷಿ ಕಾಯ್ದೆಗಳು

“ರೈತ ಕೃಷಿ”ಯ ಜಾಗದಲ್ಲಿ “ಕಾರ್ಪೊರೇಟ್ ಕೃಷಿ” ಸ್ಥಾಪಿಸಲು ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗಳನ್ನು ತಂದಿದೆ. ಕೇಂದ್ರ ಸರ್ಕಾರ ಇಂತಹುದೇ ಕೃಷಿ ಕಾಯ್ದೆಗಳನ್ನು ದೆಹಲಿ ರೈತ ಹೋರಾಟದ ಪರಿಣಾಮವಾಗಿ ವಾಪಸ್ ಪಡೆದಿದೆ. ಆದರೆ ರಾಜ್ಯ ಸರ್ಕಾರ ಇವುಗಳನ್ನು ವಾಪಸ್ ಪಡೆಯುತ್ತಿಲ್ಲ. ಕೃಷಿ ಭೂಮಿ, ಕೃಷಿ ಉತ್ಪಾದನೆ ಮತ್ತು ಕೃಷಿ ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸುವ ಉದ್ದೇಶ ಇದರಲ್ಲಿದೆ. ಇದು ಸಂಪೂರ್ಣವಾಗಿ ರೈತವಿರೋಧಿ, ಜನವಿರೋಧಿ ಮತ್ತು ದಲಿತ ವಿರೋಧಿಯಾಗಿದೆ. ಭೂರಹಿತರಿಗೆ ಭೂಮಿ ಹಂಚಿಕೆ ಮಾಡುವುದನ್ನು ಕಡೆಗಣಿಸಿ, ಸಾರ್ವಜನಿಕ ಅಗತ್ಯಗಳನ್ನು ಕಡೆಗಣಿಸಿ, ರಾಜ್ಯದ ಗೋಮಾಳ, ಕಂದಾಯ ಇತ್ಯಾದಿ ಭೂಮಿಗಳನ್ನು ಆರ್‌ಎಸ್‌ಎಸ್ ಪರಿವಾರದ ಸಂಘಟನೆಗಳಿಗೆ ಪರಭಾರೆ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ.

ಕಾರ್ಮಿಕ ಸಂಹಿತೆಗಳು

ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ಕೋವಿಡ್ ಸಂದರ್ಭದಲ್ಲಿ ಕಾರ್ಮಿಕ ವಿರೋಧಿಯಾದ 4 ಸಂಹಿತೆಗಳನ್ನು ಕಾರ್ಪೊರೇಟ್ ಬಂಡವಾಳದ ಪರವಾಗಿ ಜಾರಿಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯದ ಬಿಜೆಪಿ ಸರ್ಕಾರ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಈ ಸಂಹಿತೆಗಳು ಜಾರಿಯಾದರೆ ಕಾರ್ಮಿಕರು ಸಂಘ ಕಟ್ಟುವ, ಸಾಮೂಹಿಕ ಚೌಕಾಸಿ ನಡೆಸುವ, ಮುಷ್ಕರ ನಡೆಸುವ ಹಕ್ಕುಗಳು ಇದ್ದರೂ ಇಲ್ಲದಂತಾಗಲಿದೆ. ನಿಗದಿತ ಕಾಲಾವಧಿಯ ಕಾರ್ಮಿಕರ (ಎಫ್‌ಟಿಇ) ನೇಮಕದಿಂದಾಗಿ ಖಾಯಂ ಕಾರ್ಮಿಕರು ಇಲ್ಲವಾಗಲಿದ್ದಾರೆ. 300ಕ್ಕಿಂತ ಕಡಿಮೆ ಕಾರ್ಮಿಕರಿದ್ದಲ್ಲಿ ಲೇ-ಆಫ್, ರಿಟ್ರೆಂಚ್‌ಮೆಂಟ್ ಮತ್ತು ಕಾರ್ಖಾನೆ ಮುಚ್ಚಲು ಸರ್ಕಾರದ ಅನುಮತಿ ಅಗತ್ಯ ಇಲ್ಲದಿರುವುದರಿಂದ ಶೇ. 90.76 ರಷ್ಟು ಕೈಗಾರಿಕೆಗಳು ರಾಜ್ಯ ಸರ್ಕಾರದ ಪೂರ್ವ ಅನುಮತಿ ಇಲ್ಲದೆ ಯಾವಾಗ ಬೇಕಾದರೂ ಕಾರ್ಖಾನೆ ಮುಚ್ಚಲು ಮುಕ್ತ ಅವಕಾಶ ಕಲ್ಪಿಸಲಿದೆ. ಕಾರ್ಮಿಕರ ಮೇಲೆ ಅಧಿಕ ಉತ್ಪಾದನೆಯ ಒತ್ತಡ ಹೇರುವುದು, ಕಾಮಿಕರು ಒಪ್ಪದಿದ್ದಲ್ಲಿ ಸ್ವಯಂ ನಿವೃತ್ತಿ ಪಡೆಯುವಂತೆ ಮಾಡಿ ಕಾರ್ಮಿಕರನ್ನು ಬೀದಿಪಾಲು ಮಾಡಲಾಗುವುದು. ರಾಜ್ಯದಲ್ಲಿರುವ ವಿದ್ಯುತ್ ಚಾಲಿತ 20 ಕಾರ್ಮಿಕರಿಗಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಶೇ. 41.36 ಹಾಗೂ ವಿದ್ಯುತ್ ರಹಿತ 40ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಶೇ. 64.24 ರಷ್ಟು ಕೈಗಾರಿಕೆಗಳ ಕಾರ್ಮಿಕರ ಆರೋಗ್ಯ, ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣ ಇಲ್ಲದಾಗಲಿದೆ. ಇವೆಲ್ಲವುಗಳ ಪರಿಣಾಮವಾಗಿ ಕಾರ್ಮಿಕರ ಶ್ರಮವನ್ನು ಹಿಂಡಿ ಹಿಪ್ಪೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.

nationalNational-Education-Policy

ಎನ್‌ಇಪಿ-ಹೊಸ ಶಿಕ್ಷಣ ನೀತಿ ಜಾರಿ

ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಯಥಾವತ್ತಾಗಿ ಜಾರಿಗೊಳಿಸಲಾಗುತ್ತಿದೆ. ಶಿಕ್ಷಣ ವ್ಯಾಪಾರೀಕರಣ ಮತ್ತು ಕೋಮುವಾದೀಕರಣಕ್ಕೆ ಇದು ಬೃಹತ್ ಪ್ರಮಾಣದಲ್ಲಿ ದಾರಿ ಮಾಡಿಕೊಡಲಿದೆ. ಶಿಕ್ಷಣ ನೀತಿಗಳನ್ನು ರೂಪಿಸುವ ರಾಜ್ಯ ಸರ್ಕಾರಗಳ ಹಕ್ಕನ್ನು ಎನ್‌ಇಪಿ ಮೂಲಕ ನಾಶ ಮಾಡಲಾಗುತ್ತಿದೆ. ಕನ್ನಡ ಭಾಷೆ, ಸಂಸ್ಕತಿ, ಕರ್ನಾಟಕದ ಬೆಳವಣಿಗೆಗೆ ಇದು ಧಕ್ಕೆ ಉಂಟು ಮಾಡಲಿದೆ. ವೃತ್ತಿಪರ ಕೋರ್ಸುಗಳಿಗೆ ನೀಟ್ ಪ್ರವೇಶ ಪರೀಕ್ಷೆಯನ್ನು ಜಾರಿಗೊಳಿಸಿ ರಾಜ್ಯದ ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿರುವ ರೀತಿಯಲ್ಲಿ ಎಲ್ಲಾ ಪದವಿ ಕೋರ್ಸುಗಳಿಗೂ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಇದು ರಾಜ್ಯದ ಬಡ, ಹಿಂದುಳಿದ, ಗ್ರಾಮಾಂತರ ವಿದ್ಯಾರ್ಥಿಗಳಿಗೆ ಸಂಕಷ್ಟವನ್ನು ತರಲಿದೆ. ವಿಶ್ವವಿದ್ಯಾಲಯಗಳಿಗೆ ಹಣಕಾಸಿನ ನೆರವು ಕಡಿತಗೊಳ್ಳಲಿದ್ದು ರಾಜ್ಯದ ವಿಶ್ವವಿದ್ಯಾಲಯಗಳು ಮುಂದೊಂದು ಮುಚ್ಚಬೇಕಾಗುತ್ತದೆ ಅಥವಾ ಸಂಪೂರ್ಣವಾಗಿ ಖಾಸಗೀಕರಣ ಮಾಡಬೇಕಾಗಬಹುದು. ಈಗಾಗಲೇ ರಾಜ್ಯದ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯವನ್ನು ದುರ್ಬಲಗೊಳಿಸುತ್ತಿರುವುದನ್ನು ಗಮನಿಸಬಹುದು. ಹೊಸ ಶಿಕ್ಷಣ ನೀತಿಯು ಒಕ್ಕೂಟ ವ್ಯವಸ್ಥೆಯನ್ನು, ಸ್ಥಳೀಯ ಸಂಸ್ಕೃತಿಯನ್ನು, ಭಾಷೆಯನ್ನು, ಜನರ ಬದುಕನ್ನು ಹಿಂದಿಯ ಯಜಮಾನ್ಯಕ್ಕೆ ಒಪ್ಪಿಸುವ ಹುನ್ನಾರವನ್ನು ಹೊಂದಿದೆ.

Unemplament

ಹೆಚ್ಚುತ್ತಿರುವ ನಿರುದ್ಯೋಗ

ರಾಜ್ಯದಲ್ಲಿ ನಿರುದ್ಯೋಗ ಮತ್ತು ಅರೆ-ಉದ್ಯೋಗ ತೀವ್ರಗೊಳ್ಳುತ್ತಿದ್ದು, ಸಾಮಾಜಿಕ ಪಕ್ಷೋಭೆಯನ್ನು ಉಂಟು ಮಾಡುವ ಪರಿಸ್ಥಿತಿಯನ್ನು ತಲುಪಿದೆ. ಕೋವಿಡ್-ಪೂರ್ವ ಮತ್ತು ನಂತರದಲ್ಲಿ ಕುಸಿತಗೊಂಡ ಉದ್ಯೋಗದ ಪರಿಸ್ಥಿತಿಯನ್ನು ಉತ್ತಮಪಡಿಸಲು ಸರ್ಕಾರಕ್ಕೆ ಆಗಿಲ್ಲ. ಅದರಲ್ಲೂ ಅಸಂಘಟಿತ ವಲಯದಲ್ಲಿ ನಿರುದ್ಯೋಗವೂ ಹೆಚ್ಚಾಗಿದೆ ಮತ್ತು ಅರೆ ಉದ್ಯೋಗವು ವಿಪರೀತವಾಗಿ ಹೆಚ್ಚಾಗಿದೆ. ಉದ್ಯೋಗವನ್ನು ಸೃಷ್ಟಿಸಿ ಯುವಜನರ ಆದಾಯಗಳನ್ನು ಮತ್ತು ಜೀವನವನ್ನು ಸುಗಮಗೊಳಿಸಬೇಕಿದ್ದ ಸರ್ಕಾರ ಅವರನ್ನು ಅಭದ್ರತೆ, ಆತಂಕಗಳಿಗೆ ನೂಕಿ, ಸಮಾಜಘಾತುಕ ಕೃತ್ಯಗಳಿಗೆ ಬಲಿಯಾಗುವಂತೆ ಮಾಡಲಾಗುತ್ತಿದೆ.

vhp-protest-in-bengaluru

ರಾಜ್ಯವನ್ನು ನಾಶ ಮಾಡುತ್ತಿರುವ ಕೋಮುವಾದ

ಹಿಜಾಬ್, ಹಲಾಲ್, ಜಟಕಾ, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಕೋಮು ಸಾಮರಸ್ಯವನ್ನು ಹಾಳುಗೆಡುವುವ ಅಭಿಯಾನಗಳು, ಮತೀಯ ದ್ವೇಷದ ಭಾಷಣಗಳು ರಾಜ್ಯದಲ್ಲಿ ಹುಚ್ಚೆದ್ದು ಕುಣಿಯತೊಡಗಿವೆ. “ಸರ್ವ ಜನಾಂಗದ ಶಾಂತಿಯ ತೋಟ”ವನ್ನು ಕೋಮುವಾದದ ಅಗ್ನಿ ಕುಂಡವಾಗಿ ಮಾರ್ಪಡಿಸಲು ಹಿಂದುತ್ವದ ಸಂಘಪರಿವಾರದ ಶಕ್ತಿಗಳು ಶ್ರಮಿಸುತ್ತಿವೆ. ಇದರ ಪರಿಣಾಮವಾಗಿ ಮುಸ್ಲಿಂ ಅಲ್ಪಸಂಖ್ಯಾತರಲ್ಲಿ ಅಭದ್ರತೆ, ಹತಾಶೆ ಮತ್ತು ಆತಂಕಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯನ್ನು ಮತಾಂಧ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವ ಅವಕಾಶಗಳು ಹೆಚ್ಚಾಗಿವೆ. ಜನರ ಪರವಾಗಿ ಸಂವಿಧಾನಾತ್ಮಕ ಆಡಳಿತವನ್ನು ಮಾಡುವಲ್ಲಿ ಹೀನಾಯವಾಗಿ ವಿಫಲವಾಗಿರುವ ಬಿಜೆಪಿ ಸರ್ಕಾರ ಹಿಂದುತ್ವ ಕೋಮುವಾದವನ್ನು ಬಳಸಿ ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಾಗಿವೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕುರಿತ ಧಾರ್ಮಿಕ ಹಕ್ಕುಗಳ ರಕ್ಷಣಾ ಮಸೂದೆ, ದೇವಾಲಯಗಳ ನಿರ್ವಹಣೆಯ ಕಾಯ್ದೆಯ ಪ್ರಸ್ತಾಪ, ಶಿಕ್ಷಣದಲ್ಲಿ ಕೋಮುವಾದಿ ನೆಲೆಯ ಪಠ್ಯ ಪರಿಷ್ಕರಣೆ ಇವೆಲ್ಲವೂ ಜನರಲ್ಲಿ ವಿಭಜನೆಯನ್ನು ತರಲು ಉದ್ದೇಶಿಸಿವೆ. ಕರ್ನಾಟಕದ ಸೌಹಾರ್ಧ ಸಂಸ್ಕೃತಿಯ ಪ್ರತಿನಿಧಿಗಳಾದ ಪ್ರಗತಿಪರ, ಮತನಿರಪೇಕ್ಷ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಾಹಿತಿ ಬರಹಗಾರರನ್ನು ದಾಳಿಗೆ ಗುರಿ ಮಾಡಲಾಗುತ್ತಿದೆ.

ಜನರ ಆಹಾರ ಪದ್ಧತಿ, ಸಂಸ್ಕೃತಿ, ಉಡುಗೆ-ತೊಡುಗೆ, ನಾಡು-ನುಡಿ, ಜೀವನ ಕ್ರಮ, ಸೌಹಾರ್ಧ ಪರಂಪರೆಗಳು, ಶಿಕ್ಷಣ, ಹಬ್ಬಗಳು-ಆಚರಣೆಗಳು, ಜಾತ್ರೆಗಳು, ಹೀಗೆ., ಎಲ್ಲವನ್ನೂ ಕೋಮುವಾದೀಕರಣಗೊಳಿಸಿ ಸಂಘಪರಿವಾರದ ಹಿಂದುತ್ವ ಅಜೆಂಡಾವನ್ನು ಜಾರಿ ಮಾಡಲಾಗುತ್ತಿದೆ. ಭಾರತದ ಸಂವಿಧಾನದ ಉಳಿವಿಗಾಗಿ, ಜನ ಸಂಸ್ಕೃತಿಯ ರಕ್ಷಣೆಗಾಗಿ, ಜನರ ಬದುಕಿನ ರಕ್ಷಣೆಗಾಗಿ ಹಿಂದುತ್ವ ಕೋಮುವಾದಿ ಶಕ್ತಿಗಳನ್ನು ಸೋಲಿಸುವುದು ಇಂದಿನ ಅತ್ಯಂತ ತುರ್ತಾದ ಕೆಲಸವಾಗಿದೆ.

Leave a Reply

Your email address will not be published. Required fields are marked *